ಆಗಸ್ಟ್ 15ರಂದು 77ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇಲ್ಲದೆ ಧ್ವಜಾರೋಹಣ ನೆರೆವೇರಿಸಿದ ಮುಖ್ಯ ಶಿಕ್ಷಕರನ್ನು ಕೊಪ್ಪಳ ಡಿಡಿಪಿಐ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಭಾರಿ ಮುಖ್ಯಶಿಕ್ಷಕ ನಾಗರಾಜ ಸುನಗ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇಲ್ಲದೆ ಧ್ವಜಾರೋಹಣ ನೆರೆವೇರಿಸಿ ಅವಮಾನ ಮಾಡಿದ್ದರು. ಒಬ್ಬ ಜವಾಬ್ದಾರಿಯುತ ನೌಕರರಾಗಿ ಅವರು ರಾಷ್ಟ್ರೀಯ ಹಬ್ಬದ ದಿನದಂದು ಅಶಾಂತಿ ಮೂಡಲು ಕಾರಣರಾಗಿ ಇಲಾಖೆಯ ನಿಯಮಗಳಿಗೆ ವ್ಯತಿರಿಕ್ತವಾಗಿ ವರ್ತಿಸಿದ ಹಿನ್ನಲೆಯಲ್ಲಿ ಕೊಪ್ಪಳ ಡಿಡಿಪಿಐ ಶ್ರೀಶೈಲ ಬಿರಾದರ್ ಅವರನ್ನು ಅಮಾನತುಗೊಳಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ನೀಡಿದ ದೂರಿನ ಅನ್ವಯ ನಿರ್ಲಕ್ಷ್ಯ ತೋರಿದ ಶಿಕ್ಷಕರ ವಿರುದ್ಧ ಕೊಪ್ಪಳ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಸ್ತು ಕ್ರಮ ಜರುಗಿಸಿದೆ.