ಆರ್ಥಿಕ ಶಕ್ತಿ ಬೆಳೆಸುವುದರ ಜೊತೆಗೆ ಸಂಪತ್ತಿನ ಮರುಹಂಚಿಕೆ ಮಾಡುವುದೇ ಕರ್ನಾಟಕ ಮಾದರಿ: ಡಾ.ಎ.ನಾರಾಯಣ

Date:

Advertisements

ಕರ್ನಾಟಕದಲ್ಲಿ ಆರ್ಥಿಕ ಶಕ್ತಿಯನ್ನು ಬೆಳೆಸುವುದರ ಜೊತೆಗೆ ಸಂಪತ್ತಿನ ಮರುಹಂಚಿಕೆಯೂ ನಡೆಯುತ್ತಿದೆ. ಇದನ್ನು ಸಿದ್ದರಾಮಯ್ಯನವರು ಮಾಡುತ್ತಾ ಬಂದಿದ್ದಾರೆ. ಇದೇ ಕರ್ನಾಟಕ ಮಾದರಿ. ಇದು ಕೇರಳ ಮಾದರಿಗಿಂತ ಭಿನ್ನ ಮತ್ತು ಉತ್ತಮವಾಗಿದೆ ಎಂದು ಲೇಖಕ ಡಾ ಎ ನಾರಾಯಣ ಅಭಿಪ್ರಾಯಪಟ್ಟರು

ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ‘ಜಾಗೃತ ಕರ್ನಾಟಕ’ ಸಂಘಟನೆ ಹಮ್ಮಿಕೊಂಡಿದ್ದ ‘ನಮ್ಮ ಕರ್ನಾಟಕ ನಮ್ಮ ಮಾದರಿ’ ಚಿಂತನಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಅವರು ಕರ್ನಾಟಕದ ಮಾದರಿಯನ್ನು ವಿವರವಾಗಿ ವಿಶ್ಲೇಷಿಸಿದರು. ಅವರ ಮಾತಿನ ಸಂಗ್ರಹ ರೂಪ ಇಲ್ಲಿದೆ:

“ನಾನು ಎರಡು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ದಿಕ್ಸೂಕಿ ಭಾಷಣ ಮಾಡುತ್ತೇನೆ. ಏನಿದು ಕರ್ನಾಟಕ ಮಾದರಿ?
ಈಗ ಏಕೆ ಕರ್ನಾಟಕ ಮಾದರಿಯ ಪ್ರಶ್ನೆ; ಈಗ ಏಕೆ ಜಾತಿ, ಭೂಮಿ ಪ್ರಶ್ನೆ ಎಂದು ಈ ಹಿಂದೆ ಕೇಳಿದ ಹಾಗೆ.
ಕರ್ನಾಟಕ ಮಾದರಿಯ ಚರ್ಚೆ ಆರಂಭವಾಗುವುದೇ ದೇವರಾಜ ಅರಸು ಅವರ ಕಾಲದಲ್ಲಿ. ಈವರೆಗೆ ಸಿಎಂ ಆಗಿದ್ದವರಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದವರು ದೇವರಾಜ ಅರಸು. ಭಾರತದ ಇತರೆ ಮುಖ್ಯಮಂತ್ರಿಗಳಿಗಿಂತ ಭಿನ್ನವಾಗಿ ಹೆಜ್ಜೆ ಇಟ್ಟವರು ಅವರು. ಅರಸು ತಮ್ಮ ಆಡಳಿತಾವಧಿಯಲ್ಲಿ ಚರಿತ್ರೆಯ ಗತಿ ಬದಲಿಸಿದರು.

Advertisements

ಜೇಮ್ಸ್ ಮ್ಯಾನರ್ ಮತ್ತು ಇ.ರಾಘವನ್ ಅವರು ಬರೆದ ಪುಸ್ತಕದಲ್ಲಿ “ಸಿಎಂ ಆಗಿ ರಾಜ್ಯದಲ್ಲಿ ಏನು ಮಾಡಬೇಕಿತ್ತೋ ಅದೆಲ್ಲವನ್ನೂ ಅರಸು ಮಾಡಿ ಮುಗಿಸಿದ್ದಾರೆ. ಅರಸು ಅವರು ತಂದ ಕಾರ್ಯಕ್ರಮಗಳನ್ನು ನಂತರದ ಮುಖ್ಯಮಂತ್ರಿಗಳು ಅನುಕರಿಸಲು ಅಥವಾ ಮುಂದುವರಿಸಲು ಮಾತ್ರ ಸಾಧ್ಯ” ಎನ್ನುತ್ತಾರೆ. ಅದು ಅರಸು ಅವರ ಹೆಚ್ಚುಗಾರಿಕೆ. ಎಲ್ಲ ಮುಖ್ಯಮಂತ್ರಿಗಳ ಬಗ್ಗೆ ಈ ಮಾತು ಹೇಳಲಿಕ್ಕೆ ಸಾಧ್ಯವಿಲ್ಲ.

ಇನ್ನೊಬ್ಬ ಲೇಖಕರು ಹೇಳುವಂತೆ, “ದೇವರಾಜ ಅರಸು ಅವರು ’ಮ್ಯಾನ್ ದಿ ಅನ್ನೋನ್” (ಯಾರೂ ಅರಿಯದ ಮನುಷ್ಯ) ಇಂಗ್ಲಿಷ್ ಪುಸ್ತಕವನ್ನು ಓದುತ್ತಿದ್ದರು. ಅವರನ್ನು ಮುಟ್ಟಿದ ಅದ್ಯಾವ ವಿಚಾರ ಆ ಪುಸ್ತಕದಲ್ಲಿ ಇರಬಹುದು. ವೈದ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನೊಬೆಲ್ ಪ್ರಶಸ್ತಿ ಪಡೆದ ಅಲೆಕ್ಸ್ ಬರೆದ ಪುಸ್ತಕದಲ್ಲಿ ಹೀಗೊಂದು ಉಲ್ಲೇಖವಿದೆ. ಹೆಚ್ಚು ಹೆಚ್ಚು ಹಳತಾದಂತೆ ಈ ಪುಸ್ತಕದ ಪ್ರಸ್ತುತತೆ ಹೆಚ್ಚಾಗಿದೆ. ಈ ಮಾತು ಅರಸು ಅವರ ಆಡಳಿತಕ್ಕೂ ಅನ್ವಯವಾಗುತ್ತದೆ. ಮುಖ್ಯಮಂತ್ರಿಗಳು ಬಂದಿದ್ದಾರೆ ಹೋಗಿದ್ದಾರೆ, ಹಳತಾದಂತೆ ಪ್ರಸ್ತುತತೆ ಹೆಚ್ಚುತ್ತಾ ಹೋಗುತ್ತದೆ ಎಂಬುದು ಅರಸು ಅವರಿಗೆ ನೀಡಿದ ಪ್ರಶಂಸೆ.

ದಾರ್ಶಕನಿಕ ನಾಯಕನ ಜನ್ಮದಿನದಂದೇ ಕರ್ನಾಟಕ ಮಾದರಿ ಕುರಿತು ಹೇಳಲು ‘ಜಾಗೃತ ಕರ್ನಾಟಕ’ ಹೊರಟಿದೆ. ಕೇರಳ ಮಾದರಿ, ತಮಿಳುನಾಡು ಮಾದರಿ ಬಗ್ಗೆ ಕೇಳಿದ್ದೇವೆ. ಗುಜರಾತ್ ಮಾದರಿ ಬಗ್ಗೆ ಕೇಳುತ್ತಾ ಇರುತ್ತೇವೆ. ಕರ್ನಾಟಕ ಮಾದರಿ ಬಗ್ಗೆ ಅಷ್ಟಾಗಿ ಕೇಳಿಲ್ಲ. ಸಿದ್ದರಾಮಯ್ಯನವರ ಗ್ಯಾರಂಟಿ ಜಾರಿಯ ಹಿನ್ನೆಲೆಯಲ್ಲಿ ಕರ್ನಾಟಕ ಮಾದರಿ ಎಂಬ ಮಾತು ಕೇಳಿಬರುತ್ತಿದೆ. ಏನಿದು ಕರ್ನಾಟಕ ಮಾದರಿ?

ಈ ವರ್ಷದ ಬಜೆಟ್‌ನಲ್ಲಿ ಈ ವಿಚಾರವಾಗಿ ಬಹಳ ಸ್ಪಷ್ಟವಾಗಿ, ಅಧಿಕೃತವಾಗಿ ದಾಖಲಿಸಲಾಗಿದೆ. ‘ಬಸವಣ್ಣ, ನಾಲ್ವಡಿಯವರು ಎಳೆದ ತೇರನ್ನು ಎಳೆದು ಹೋಗುತ್ತೇನೆ. ಅದನ್ನು ಮುಂದುವರಿಸುತ್ತೇನೆ’ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಅಧಿಕೃತ ದಾಖಲೆಯ ಭಾಗವಾಗಿ ಕರ್ನಾಟಕ ಮಾದರಿಯನ್ನು ಉಲ್ಲೇಖಿಸಿದ್ದಾರೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದಿದ್ದಾರೆ. 2006ರ ಇಸವಿಯಲ್ಲಿ ಧರಂಸಿಂಗ್ ಸರ್ಕಾರ ಇತ್ತು. 2005ನೇ ಇಸವಿಯಲ್ಲಿ ಕರ್ನಾಟಕ ಮಾದರಿ ಕುರಿತು ಬಹುದೊಡ್ಡ ಕಾರ್ಯಕ್ರಮ ನಡೆದಿತ್ತು. ಅಂತಾರಾಷ್ಟ್ರೀಯ ವಿದ್ವಾಂಸರು ಬಂದಿದ್ದರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದರೆ ಆಧುನಿಕತೆ ಮತ್ತು ಪರಂಪರೆಯನ್ನು ಒಟ್ಟಿಗೆ ಕರೆದೊಯ್ಯುವುದು. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಬೆಂಗಳೂರು ಐಟಿ ಸೆಕ್ಟರ್ ಅಭಿವೃದ್ಧಿ ಚರ್ಚೆಯಾಯಿತು. ಕೇವಲ ಆಧುನಿಕ ತಂತ್ರಜ್ಞಾನದ ವಿಚಾರವಷ್ಟೇ ಅಲ್ಲ, ಅದು ಆಡಳಿತ ಪರಂಪರೆಗೂ ಸಂಬಂಧಿಸಿದೆ. ಆಡಳಿತ ಪರಂಪರೆ (ವಿಕೇಂದ್ರೀಕರಣ) ಮತ್ತು ಆಧುನಿಕ ಪರಂಪರೆ ಒಟ್ಟಿಗೆ ಹೋಗುವುದೇ ಆಗಿದೆ.

ಈ ಪರಂಪರೆಯಲ್ಲಿ ಸಂವಾದದ ಪರಂಪರೆ ಇದೆ. ಸರ್ವಜನಾಂಗದ ಶಾಂತಿಯ ತೋಟ ಎಂಬ ಮಾದರಿ ಇದೆ. ದೇವರಾಜ ಅರಸು ಅವರು ಆಡಳಿತದ ಗತಿ ಮತ್ತು ಈ ರಾಜ್ಯದ ರಾಜಕೀಯ ಸೂತ್ರ ಬದಲಿಸಿದರು. ರಾಜಕೀಯ ಶಕ್ತಿಯ ಸ್ವರೂಪ ಬದಲಿಸಿದರು. ರಾಜಕೀಯ ಪ್ರಾತಿನಿಧ್ಯ ಇಲ್ಲದ ಸಮುದಾಯದವರನ್ನು ರಾಜಕೀಯಕ್ಕೆ ತಂದರು. ಭೂಮಾಲೀಕ ವರ್ಗದ ರಾಜಕೀಯ ಶಕ್ತಿಯನ್ನು ಕೆಳಗಿಳಿಸಿದರು.

ಇಂದಿರಾ ಗಾಂಧಿಯವರು ನೀಡಿದ ಗರೀಬೀ ಹಠಾವೋ ಘೋಷಣೆ ಕರ್ನಾಟಕದಲ್ಲಿ ಒಂದು ಪ್ರಮುಖ ಸೂತ್ರವಾಗಿತ್ತು. ರಾಜ್ಯದ ಅಧಿಕಾರದಲ್ಲಿ ಒಬಿಸಿ ಮೀಸಲಾತಿ ತಂದರು. ಭೂ ಸುಧಾರಣೆ ಜಾರಿಗೊಳಿಸಿದರು. ಬೇರೆ ಬೇರೆ ವಿಚಾರದಲ್ಲಿ ಅರಸು ಮಾದರಿ ನಮ್ಮ ಮುಂದಿದೆ.

ಒಂದನೇದಾಗಿ, ರಾಜ್ಯದಲ್ಲಿ ಆರ್ಥಿಕ ಶಕ್ತಿಯನ್ನು ಬೆಳೆಸುವುದರ ಜೊತೆಗೆ ಸಂಪತ್ತಿನ ಮರುಹಂಚಿಕೆಯೂ ನಡೆಯುತ್ತಿದೆ. ಇದನ್ನು ಸಿದ್ದರಾಮಯ್ಯನವರು ಮಾಡುತ್ತಾ ಬಂದಿದ್ದಾರೆ. ಇದು ಕರ್ನಾಟಕ ಮಾದರಿ. ಇದು ಕೇರಳ ಮಾದರಿಗಿಂತ ಭಿನ್ನ ಮತ್ತು ಉತ್ತಮವಾಗಿದೆ. ಕೇರಳ ಮಾದರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಮಾದರಿ. ಬಡರಾಜ್ಯವಾಗಿದ್ದ ಕೇರಳ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬಹುದು ಎಂಬುದನ್ನು (ಹೆಲ್ತ್, ಎಜುಕೇಷನ್) ತೋರಿಸಿಕೊಟ್ಟಿತು.
ತಮಿಳುನಾಡಿನ ಮಾದರಿ ಸ್ವಲ್ಪ ಭಿನ್ನವಾಗುತ್ತದೆ. ಅಭಿವೃದ್ಧಿ ಮತ್ತು ಸಾಮಾಜಿಕ ಸೌಹಾರ್ದ ಪರಂಪರೆ – ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ, ಉಪಜಾತಿಗಳ ನಡುವಿನ ಸೌಹಾರ್ದ ಪರಂಪರೆ; ಕರ್ನಾಟಕ ಮಾದರಿಯ ಎರಡನೇ ಭಾಗ. ತಮಿಳುನಾಡಿನ ಮಾದರಿಯಲ್ಲಿ ಇದನ್ನು ಅಷ್ಟರ ಮಟ್ಟಿಗೆ ಕಾಣಲು ಸಾಧ್ಯವಿಲ್ಲ.

ನಂತರದಲ್ಲಿ ಜನತಾ ಸರ್ಕಾರ ಬಂದಿತು. ಅಧಿಕಾರ ವಂಚಿತರಿಗೆ ಅಧಿಕಾರ ನೀಡುವ ಪ್ರಯತ್ನ ಆಯಿತು. ಮಹಿಳೆಯರಿಗೆ ಮೀಸಲಾತಿ ನೀಡಲಾಯಿತು. ವಿಕೇಂದ್ರೀಕರಣ ಪ್ರಯತ್ನ ಆಯಿತು. ಒಬಿಸಿ, ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲಾಯಿತು.

ಕೇರಳದಲ್ಲಿ ಮಾದರಿ ಎಂಬುದನ್ನು ಜನ ಒಪ್ಪಿದರು. ಜನ ಬಯಸುತ್ತಿದ್ದಾರೆ ಎಂದು ಸರ್ಕಾರಕ್ಕೆ ತಿಳಿಯಿತು. ತಮಿಳುನಾಡಿನ ಜನತೆ ಒಪ್ಪಿಕೊಂಡರು, ಸರ್ಕಾರ ಅದನ್ನು ಮುನ್ನಡೆಸಿತು. ತಮಿಳುನಾಡಿನಲ್ಲಿ, ಕೇರಳದಲ್ಲಿ ಪಕ್ಷ ಬದಲಾದರೂ ಮಾದರಿ ಬದಲಾಗದು.

ಕರ್ನಾಟಕದ ಜನತೆ ಇಲ್ಲಿನ ಮಾದರಿಯನ್ನು ನಮ್ಮದು ಎಂಬುದನ್ನು ಒಪ್ಪಿಕೊಂಡಿಲ್ಲ. ನಮ್ಮ ಜನ ಈ ಮಾದರಿಯನ್ನು ಒಪ್ಪಿಕೊಳ್ಳಬೇಕು. ಆಗ ಮಾತ್ರ ನಿರಂತರತೆ ಇರುತ್ತದೆ. ಸಾಮಾಜಿಕ ನ್ಯಾಯದ ಕನಸು ಕಂಡ ಸಂವಿಧಾನದ ಆಶಯಕ್ಕೆ ಇದು ಹತ್ತಿರವಾಗಿದೆ. ಇದನ್ನು ಗುರುತಿಸಬೇಕು, ಉಳಿಸಬೇಕು. ಇದನ್ನು (ಮಾದರಿಯನ್ನು) ಮೊದಲು ಜನ ನಮ್ಮದು ಎಂದು ಗುರುತಿಸಿ ಸ್ವೀಕರಿಸಬೇಕು. ಜೊತೆಗೆ ಬೆಳೆಸಬೇಕು. ಆರ್ಥಿಕ ಸಂಪತ್ತಿನ ಮರುಹಂಚಿಕೆ ಎನ್ನುವಲ್ಲಿ ಯಾರೊ ಬರುತ್ತಾರೆ, ಯಾರೋ ತೆಗೆದುಕೊಳ್ಳತ್ತಾರೆ ಎಂಬಂತೆ ಇದೆ. ಇಡೀ ಅರ್ಥ ವ್ಯವಸ್ಥೆಯನ್ನು ಮರುರೂಪಿಸುವಂತಹ ಕೆಲಸ ಆಗಬೇಕು. ಯಾವ ಸಮುದಾಯಗಳು ಕಲ್ಯಾಣ ಕಾರ್ಯಕ್ರಮಗಳನ್ನು ಟೀಕಿಸುತ್ತಿವೆಯೋ, ಅವುಗಳು ಕಲ್ಯಾಣ ಕಾರ್ಯಕ್ರಮಗಳನ್ನು ಸ್ವೀಕರಿಸಿ ಒಪ್ಪಿಕೊಳ್ಳಬೇಕು. ಇದು ನಮ್ಮ ಕರ್ನಾಟಕ ಮಾದರಿಯಾಗುತ್ತದೆ.

ಈ ಸುದ್ದಿ ಓದಿದ್ದೀರಾ: ದೇವರಾಜ ಅರಸು ನನ್ನ ಹೃದಯವನ್ನು ಗಾಢವಾಗಿ ತಟ್ಟಿದ ನಾಯಕ – ಪ್ರೊ. ಜೇಮ್ಸ್ ಮ್ಯಾನರ್, ಲಂಡನ್

ಮೇಲಿನಿಂದ ಕೆಳಗೆ ರಾಜಕೀಯ ಪ್ರವಹಿಸುವಂತೆ ಮಾಡಿದ ಪ್ರಯೋಗ ಸಂಪೂರ್ಣವಾಗಿಲ್ಲ. ರಾಜಕೀಯ ಅಧಿಕಾರದಲ್ಲಿ ಎಲ್ಲರೂ ಪಾಲು ಪಡೆದಿದ್ದರೆ ಮೀಸಲಾತಿ ಕಾರಣ. ಮೀಸಲಾತಿ ಇಲ್ಲವಾಗಿದ್ದರೆ ಪಾಲು ದೊರಕುತ್ತಿರಲಿಲ್ಲ. ಯಾವ ರೀತಿಯಲ್ಲಿ ಮರು ರೂಪಿಸುವ ಅಗತ್ಯವಿದೆ ಎಂದರೆ, ಉಳಿದವರ ಜೊತೆ ಸ್ಪರ್ಧಿಸಿ ಗೆಲ್ಲವುದು ಸಾಧ್ಯವಾಗಬೇಕಿದೆ.

ಸೌಹಾರ್ದ ಪರಂಪರೆ ಎಂದರೆ ಕುವೆಂಪು ಅವರನ್ನು ನೆನೆಯುತ್ತೇವೆ. ಇದು ನಮ್ಮ ಡಿಎನ್ಎಯ ಭಾಗವಾಗಬೇಕು. ಸೌಹಾರ್ದತೆಯು ನಮ್ಮ ಸಾಮಾಜಿಕ ವ್ಯವಸ್ಥೆ, ಡಿಎನ್ಎಯ ಭಾಗವಾಗಬೇಕು. ಗ್ಯಾರಂಟಿಗಳೇ ಅತ್ಯದ್ಭುತ ಎನ್ನಲಾಗದು. ಅದು ಸಾಮಾಜಿಕ ಕಲ್ಯಾಣದ ಭಾಗ ಎಂಬುದು ಸತ್ಯ. ಆದರೆ ಇದರಿಂದ ಕೆಟ್ಟದಾಗಿದೆ ಎಂಬಂತೆ ಚರ್ಚೆ ಮಾಡುವುದು ಸರಿಯಲ್ಲ; ಹಂಚಿಕೊಳ್ಳುವ ಮಾದರಿ ಎಂದು ಒಪ್ಪಿಕೊಳ್ಳಬೇಕು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

Download Eedina App Android / iOS

X