ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ವಿತರಣೆ ಯೋಜನೆಯಲ್ಲಿ ನಡೆದಿರುವ ಬೃಹತ್ ಹಗಣವೊಂದು ಬಯಲಿಗೆ ಬಂದಿದೆ. ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನದಡಿ ನೀಡಲಾಗಿದ್ದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಪ್ರಕರಣವನ್ನು ಕೇಂದ್ರೀಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕೇಂದ್ರ ತನಿಖಾ ಮಂಡಳಿಗೆ (ಸಿಬಿಐ) ಹಸ್ತಾಂತರಿಸಿದೆ.
ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿ ಸಕ್ರಿಯವಾಗಿರುವ ಶೇ.53ರಷ್ಟು ಶಿಕ್ಷಣ ಸಂಸ್ಥೆಗಳು ‘ನಕಲಿ’ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ನಡೆಸಿದ ತನಿಖೆಯಿಂದ ಪತ್ತೆಯಾಗಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿದೆ.
ಇಂತಹ ಸುಮಾರು 830 ಶಿಕ್ಷಣ ಸಂಸ್ಥೆಗಳಲ್ಲಿ ಭ್ರಷ್ಟಾಚಾರವು ಆಳವಾಗಿ ಬೇರೂರಿದ್ದು, ಕಳೆದ 5 ವರ್ಷಗಳಲ್ಲಿ ಒಟ್ಟು 144.83 ಕೋಟಿ ರೂ.ವಿದ್ಯಾರ್ಥಿವೇತನ ಹಗರಣ ನಡೆದಿದೆ ಎಂದು ವರದಿ ಹೇಳಿದೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಈ ಹಗರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ್ದಾರೆಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಅಕ್ರಮವೆಸಗಿದ ಆರೋಪ ಎದುರಿಸುತ್ತಿರುವ 830 ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪುನಾರಚನೆ: ರಾಜ್ಯದ ಸಯ್ಯದ್ ನಾಸೀರ್ ಹುಸೇನ್ ಅವರಿಗೆ ಸ್ಥಾನ
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಜುಲೈ 10ರಂದು ಅಧಿಕೃತವಾಗಿ ಈ ವಿಷಯವಾಗಿ ದೂರೊಂದನ್ನು ದಾಖಲಿಸಿತ್ತು. ದೇಶಾದ್ಯಂತ 34 ರಾಜ್ಯ/ ಕೇಂದ್ರಾಡಳಿತಗಳ 1572 ಶಿಕ್ಷಣ ಸಂಸ್ಥೆಗಳ ಪರಿಶೀಲನೆ ನಡೆಸಲಾಗಿದ್ದು, ಈ ಪೈಕಿ 830 ಶಿಕ್ಷಣಸಂಸ್ಥೆಗಳು ವಂಚನಾತ್ಮಕ ಚಟುವಟಿಕೆಗಳಲ್ಲಿ ನಿರತವಾಗಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
1.80 ಲಕ್ಷ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯದ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ವಿಸ್ತರಿಸಲಾಗಿದ್ದು, ಇದು 1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗಿನ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಮೀಸಲಾದ ಈ ವಿದ್ಯಾರ್ಥಿ ವೇತನದ ಹಣವನ್ನು ಪ್ರತಿ ವರ್ಷವೂ ಶಿಕ್ಷಣಸಂಸ್ಥೆಗಳು ಪಡೆದುಕೊಳ್ಳುತ್ತಿದ್ದವು ಎಂದು ವರದಿ ತಿಳಿಸಿದೆ.
ಛತ್ತೀಸ್‌ಗಢ, ರಾಜಸ್ಥಾನ, ಅಸ್ಸಾಂ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿವೇತನವನ್ನು ದಕ್ಕಿಸಿಕೊಳ್ಳುತ್ತಿರುವ ಹಲವಾರು ಶಿಕ್ಷಣಸಂಸ್ಥೆಗಳು ನಕಲಿ ಅಥವಾ ಕಾರ್ಯನಿರ್ವಹಿಸುತ್ತಿಲ್ಲವೆಂಬುದು ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಪರಿಶೀಲನೆಗೊಳಪಟ್ಟ ಶೇ.64 ಶಿಕ್ಷಣ ಸಂಸ್ಥೆಗಳು ನಕಲಿ ಎಂಬುದು ಪತ್ತೆಯಾಗಿದೆ.
ತನಿಖೆಯಲ್ಲಿ ಬೆಳಕಿಗೆ ಬಂದ ಪ್ರಮುಖ ಅಂಶಗಳು
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬ್ಯಾಂಕೊಂದರ ಮೂಲಕ 66 ಸಾವಿರ ವಿದ್ಯಾರ್ಥಿ ವೇತನಗಳನ್ನು ವಿತರಿಸಲಾಗಿದ್ದು, ಇದು ವಿದ್ಯಾರ್ಥಿ ವೇತನಕ್ಕಾಗಿ ನೋಂದಾಯಿಸಲ್ಪಟ್ಟ ಅರ್ಹ ವಿದ್ಯಾರ್ಥಿಗಳ ಸಂಖ್ಯೆಗಿಂತಲೂ ಅಧಿಕವಾಗಿದೆ.
ಜಮ್ಮು ಕಾಶ್ಮೀರದ ಆನಂತನಾಗ್‌ನ ಕಾಲೇಜೊಂದರಲ್ಲಿ 5 ಸಾವಿರ ನೋಂದಾಯಿತ ವಿದ್ಯಾರ್ಥಿಗಳಿಗೆ 7 ಸಾವಿರ ವಿದ್ಯಾರ್ಥಿ ವೇತನ ವಿತರಿಸಲಾಗಿದೆ.
ಪರಿಶೀಲನೆಗೊಳಪಟ್ಟ 1572 ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಪೈಕಿ ಸುಮಾರು 830 ಶಿಕ್ಷಣ ಸಂಸ್ಥೆಗಳು ನಕಲಿ ಅಥವಾ ಕಾರ್ಯನಿರ್ವಹಿಸದೆ ಇರುವಂತಹವು. ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ವಿದ್ಯಾರ್ಥಿವೇತನವನ್ನು ಈ ನಕಲಿ ಸಂಸ್ಥೆಗಳು ಪಡೆದುಕೊಳ್ಳುತ್ತಿದ್ದವು. ವಿದ್ಯಾರ್ಥಿ ವೇತನಗಳು ನಕಲಿ ಫಲಾನುಭವಿಗಳ ಪಾಲಾಗುತ್ತಿದ್ದವು.
ಕೇಂದ್ರ ಸರ್ಕಾರವು 2007-08 ರಲ್ಲಿ ಪ್ರಾರಂಭವಾದ ಯೋಜನೆಯಡಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2021-22 ರವರೆಗೆ 22,000 ಕೋಟಿ ರೂ. ವಿದ್ಯಾರ್ಥಿವೇತನವನ್ನು ನೀಡಲಾಗಿದೆ.