- ವೆಂಕಟ್ರಮಣ ಬೆಳಗೆರೆಯವರ ‘ಧರಣಿ ಮಂಡಲ’ ಕವನ ಸಂಕಲನ ಲೋಕಾರ್ಪಣೆ.
- ಕವಿ, ಸಾಹಿತಿ, ರಾಜಕಾರಣಿಗಳು ಸದಾ ಎಲ್ಲರನ್ನೂ ತಲುಪವಂತಿರಬೇಕು.
ಸಾಹಿತಿ ಮತ್ತು ಸಾಹಿತ್ಯ ನಮ್ಮ ವ್ಯಕ್ತಿತ್ವವನ್ನು ಬದಲಾಯಿಸುವಂತಾಗಬೇಕು. ಮಾನವೀಯತೆಯು ಮತ್ತೆ ಜಾಗೃತಿ ಮೂಡಿಸುವಂತಾಗಬೇಕು. ಸಾಹಿತ್ಯ ಓದಿದಾಗ ಕೆಲವು ಗಂಟೆಗಳಿಗಾದರೂ ಹೊಸತನದ ಅನುಭವ ತಂದುಕೊಡುವಂತಾಗಬೇಕು ಎಂದು ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಹೇಳಿದರು.
ದಾವಣಗೆರೆ ನಗರದಲ್ಲಿ ನೀವು-ನಾವು ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ವೆಂಕಟ್ರಮಣ ಬೆಳಗೆರೆಯವರ ‘ಧರಣಿ ಮಂಡಲ’ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
“ಕವಿ, ಸಾಹಿತಿ, ರಾಜಕಾರಣಿ ಸದಾ ಎಲ್ಲರನ್ನೂ ತಲುಪವಂತಿರಬೇಕು. ದ್ವೀಪಗಳಂತಾಗಿರುವ ಕಾರಣಕ್ಕೆ ಸಂಬಂಧ ದೂರವಾಗಿ ಅಂತರ್ಮುಖಿ ಆಗುತ್ತಿದ್ದೇವೆ. ಸಾಹಿತಿಗಳು ಒಳಗೊಂಡಂತೆ ಎಲ್ಲರಿಗೂ ಚಲನಶೀಲತೆ ಬೇಕು. ಇಲ್ಲದಿದ್ದರೆ ಸತ್ತಂತೆ. ಅನೇಕ ಕಾರಣಗಳಿಂದ ಸಹಜ ಶೀಲತೆಯಿಂದ ಕೃತಿಮತೆಯೆಡೆಗೆ ಸಾಗುತ್ತಿದ್ದೇವೆ. ಮಾನವೀಯತೆಯೇ ಕಾಣೆಯಾಗಿ ಪ್ರಯತ್ನ ಪೂರ್ವಕವಾಗಿ ಅಂತರ ಕಾಪಾಡಿಕೊಳ್ಳುತ್ತಿದ್ದೇವೆ. ಈಗಿನ ವಾತಾವರಣ ನೋಡಿದರೆ ಏನು ಕಲಿಯಬೇಕು” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಬಸ್ ಢಿಕ್ಕಿ; ಉರುಳಿ ಬಿದ್ದ ಜ.ತಿಮ್ಮಯ್ಯ ಪ್ರತಿಮೆ
“ಸಾಹಿತಿ ವೆಂಕಟ್ರಮಣ ಬೆಳಗೆರೆಯವರ ಕವನ ಸಂಕಲನಗಳಲ್ಲಿ ಎಲ್ಲದರ ಮುಕ್ತತೆ ಇದೆ. ಕವಿತೆಗಳು ನೇರವಾಗಿ ಗದ್ಯದ ಮೂಲಕ ಹೋಗುತ್ತಿರುವಾಗ ಗುರಿ ತಲುಪುತ್ತಿವೆ. ಆದರೆ, ನೈಜ ಗುರಿ ತಲುಪುತ್ತವೆ ಎಂದು ಹೇಳುವಂತಿಲ್ಲ” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ, ಸಾಹಿತಿ ವೆಂಕಟ್ರಮಣ ಬೆಳಗೆರೆ, ಮೋಹನ್ ಕುಮಾರ್, ಸಂತೆಬೆನ್ನೂರು ಫೈಜಟ್ರಾಜ್, ಅರುಣಾ ಕುಮಾರಿ ಬಿರಾದಾರ್, ಸಿದ್ದರಾಜು ಸೇರಿದಂತೆ ಇತರರು ಇದ್ದರು.