- ಬಸವಣ್ಣನವರ ʼಕಾಯಕವೇ ಕೈಲಾಸʼ ಮಾತಿನಂತೆ ಪ್ರತಿಯೊಬ್ಬರು ಶ್ರಮದಿಂದ ದುಡಿಯಬೇಕು
- ಬೀದರನವರು ಕರ್ನಾಟಕದಲ್ಲಿಯೇ ಪ್ರಾಮಾಣಿಕತೆ ಮತ್ತು ನಿಷ್ಠಾವಂತರಾಗಿ ಕೆಲಸ ನಿರ್ವಹಿಸುವಲ್ಲಿ ಹೆಸರುವಾಸಿ
ಬೀದರ ಜಿಲ್ಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆ ಅಲೆದಾಡುತ್ತಾರೆ. ಹಾಗಾಗಿ ಅವರಿಗೆ ಅನುಕೂಲವಾಗಲು ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ಈ ಉದ್ಯೋಗ ಮೇಳವನ್ನು ಭಾಲ್ಕಿಯಲ್ಲಿ ಇಂದು ಆಯೋಜನೆ ಮಾಡಲಾಗಿದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಸೋಮವಾರ ಜಿಲ್ಲಾಡಳಿತ ಬೀದರ, ಸಂಜೀವಿನಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ ಬೀದರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಬೀದರ, ಜಿಲ್ಲಾ ಕೈಗಾರಿಕಾ ಕೇಂದ್ರ ಬೀದರ, ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕೇಂದ್ರ ಬೀದರ, ಕ್ಯಾಡ್ ಮ್ಯಾಕ್ಸ್ ಬೆಂಗಳೂರು ಮತ್ತು ಇತರೆ ಕಂಪನಿಗಳು ಹಾಗೂ ಭೀಮಣ್ಣಾ ಖಂಡ್ರೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಬಿಕೆಐಟಿ) ಭಾಲ್ಕಿ ಇವರ ಸಂಯುಕ್ತಶ್ರಯದಲ್ಲಿ ಬಿ.ಕೆ.ಐ.ಟಿ. ಆವರಣ ಭಾಲ್ಕಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಬೆಂಗಳೂರು, ಹೈದ್ರಾಬಾದ, ಪುನಾ ಎಲ್ಲಿ ಕೆಲಸ ಸಿಕ್ಕರೂ ಹೋಗಿ ಮಾಡಬೇಕು, ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಬಡವರ ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆದು ದೊಡ್ಡ ದೊಡ್ಡ ವಿಜ್ಞಾನಿಗಳಾಗಿ ಶ್ರೀಮಂತರಾದ ಉದಾಹರಣೆಗಳಿವೆ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ನಿಮ್ಮಲ್ಲಿ ಅನಂತ ಶಕ್ತಿ ಇದ್ದರೆ ಎಂತಹ ಕೆಲಸವನ್ನು ಮಾಡಬಹುದು. ಈ ಬೃಹತ್ ಉದ್ಯೋಗ ಮೇಳದಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಬೀದರನಲ್ಲಿ ಯುವಕರಿಗೆ ಉದ್ಯೋಗ ನೀಡಲು ಬರುವ ದಿನಗಳಲ್ಲಿ ಕೆ.ಕೆ.ಆರ್.ಡಿ.ಬಿ.ಯಿಂದ ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು” ಎಂದು ಹೇಳಿದರು.
“ಈ ಮೇಳದಲ್ಲಿ ವಿವಿಧ ಭಾಗಗಳಿಂದ 80 ಕಂಪನಿಗಳು ಬಂದಿವೆ. ಇದರ ಆಯೋಜನೆಗೆ ಹಲವಾರು ಅಧಿಕಾರಿಗಳು ಶ್ರಮಿಸಿದ್ದಾರೆ. ಇದು ಶರಣರ ನಾಡು, ಬಸವಣ್ಣನವರು ಹೇಳಿರುವ ಕಾಯಕವೇ ಕೈಲಾಸ ಎಂಬಂತೆ ಪ್ರತಿಯೊಬ್ಬರು ದುಡಿಯಬೇಕು, ದುಡಿಯುವ ಕೈಗೆ ಕೆಲಸ ಕೊಡಬೇಕು, ನಮ್ಮ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ. ಅನ್ನ, ಬಟ್ಟೆ ಮತ್ತು ವಸತಿಯಷ್ಟೇ ಉದ್ಯೋಗವು ಇಂದಿನ ದಿನಗಳಲ್ಲಿ ಯುವಕರಿಗೆ ಅತ್ಯವಶ್ಯಕತೆಯಿದೆ” ಎಂದರು.
“ಕರೋನಾ ಸಂದರ್ಭದಲ್ಲಿ ಬಹಳಷ್ಟು ಉದ್ಯೋಗಗಳು ಕಸಿದು ಹೋಗಿವೆ, ನಮ್ಮ ಯುವಕರು ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಯುವ ಶಕ್ತಿಯ ಸದುಪಯೋಗವಾಗಬೇಕು. 21ನೇ ಶತಮಾನವು ಭಾರತದ ಶತಮಾನವಾಗಿದೆ. ಇದಕ್ಕೆ ಕಾರಣ ಯುವಶಕ್ತಿ ಪಡೆ. ಯುವಶಕ್ತಿ ಪಡೆಯಿಂದಲೇ ಇಂದು ಜಗತ್ತು ನಮಗೆ ಗೌರವ ಕೊಡುತ್ತಿದೆ. ಬಿ.ಕೆ.ಐ.ಟಿ.ಯಲ್ಲಿ ಕಲಿತ 12 ಸಾವಿರ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರ ಹಾಗೂ ವಿವಿದೆಡೆ ಕೆಲಸ ಮಾಡುತ್ತಿದ್ದಾರೆ” ಎಂದರು.

ಡಿಸೆಂಬರ್ -ಜನವರಿಯಲ್ಲಿ ‘ಯುವನಿಧಿ’ ಜಾರಿಗೆ:
“ನಾವು ಶಿಕ್ಷಣ ಪಡೆಯುವುದು ಮಾತ್ರವಲ್ಲದೇ ಸಮಾಜದ ವಿವಿಧ ಕಾರ್ಯಗಳಲ್ಲಿ ತೊಡಗಬೇಕು. ತಾವು ನವೋದ್ಯಮ ಪ್ರಾರಂಭಿಸಿದರೆ ಹಲವಾರು ಜನರಿಗೆ ನೀವು ಉದ್ಯೋಗ ಕೊಡಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ನಮ್ಮ ಸರ್ಕಾರ ನಿರುದ್ಯೋಗಿ ಯುವಕರಿಗೆ ಯುವನಿಧಿ ಕಾರ್ಯಕ್ರಮವು ಜಾರಿಗೆ ತಂದಿದೆ. ಬರುವ ಡಿಸೆಂಬರ್, ಜನವರಿಯಲ್ಲಿ ಉದ್ಯೋಗ ಸಿಗದ ನಿರುದ್ಯೋಗ ಯುವಕ, ಯುವತಿ ಪದವಿಧರರಿಗೆ 3 ಸಾವಿರ ರೂ. ಹಾಗೂ ಡಿಪ್ಲೋಮಾ ಪಡೆದವರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು “ಎಂದರು.
“ನಮ್ಮ ಸರ್ಕಾರ ಬಡವರು, ರೈತರು, ಕಾರ್ಮಿಕರ ಪರವಿದೆ. ಯುವಕರು ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು ಅಂದಾಗಲೇ ತಾವು ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಬೀದರನಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿ ಹೂಡಿಕೆದಾರರ ಸಮಾವೇಶ ಮಾಡುವ ಮೂಲಕ ಈ ಭಾಗದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಉತ್ತೇಜನ ನೀಡಲಾಗುವುದು” ಎಂದು ಭರವಸೆ ನೀಡಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಮಾತನಾಡಿ, “ಯುವಕರಿಗೆ ಉದ್ಯೋಗ ನೀಡುವ ಸಲುವಾಗಿಯೇ ಭಾಲ್ಕಿಯಲ್ಲಿ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ನಮ್ಮ ಜಿಲ್ಲೆಯ ಯುವಕರು ಕರ್ನಾಟಕದಲ್ಲಿಯೇ ಪ್ರಾಮಾಣಿಕತೆ ಮತ್ತು ನಿಷ್ಠಾವಂತರಾಗಿ ಕೆಲಸ ನಿರ್ವಹಿಸುವಲ್ಲಿ ಹೆಸರಾಗಿದ್ದಾರೆ. ಹೊಸ ಸರ್ಕಾರ ಬಂದ ಮೇಲೆ ಯುವಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿಯೇ ಈ ಮೇಳವನ್ನು ಆಯೋಜನೆ ಮಾಡಲಾಗಿದೆ. ಇದರ ಸದುಪಯೋಗವನ್ನು ನಿರುದ್ಯೋಗ ಯುವಕ, ಯುವತಿಯರು ಪಡೆದುಕೊಳ್ಳಬೇಕೆಂದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ ? ಈ ದಿನ ಸಂಪಾದಕೀಯ | ಕರ್ನಾಟಕದ ಮಾದರಿಯಿಂದ ಜನರ ಬದುಕು ಸಂಪನ್ನವಾಗಲಿ
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಬಿ.ಪಾಟೀಲ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರಿ, ಕ್ಯಾಡ್ ಮ್ಯಾಕ್ಸ್ ಬೆಂಗಳೂರಿನ ವಿಜಯಕುಮಾರ, ಪ್ರಭಾಕರ, ಶರಣು ಮೋದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕಂಪನಿಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಚಿವರು ನೇಮಕಾತಿ ಆದೇಶ ಪ್ರತಿಗಳನ್ನು ನೀಡಿ ಶುಭ ಹಾರೈಸಿದರು.