- ಆರೋಪಿಯ ಪತ್ನಿಯನ್ನೂ ವಶಕ್ಕೆ ಪಡೆದ ಪೊಲೀಸರು
- ಅಮಾನತುಗೊಳಿಸಿದ ಸಿಎಂ ಅರವಿಂದ್ ಕೇಜ್ರಿವಾಲ್
ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ದೆಹಲಿಯ ಸರ್ಕಾರಿ ಅಧಿಕಾರಿ ಪ್ರೇಮೋದಯ್ ಖಾಖಾ ಮತ್ತು ಆತನ ಪತ್ನಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕನಾಗಿರುವ ಈತನನ್ನು ಮುಂಜಾನೆಯೇ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಆರೋಪಿ ಪ್ರೇಮೋದಯ್ ಖಾಖಾನನ್ನು ಹುದ್ದೆಯಿಂದ ಅಮಾನತುಗೊಳಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ.
ಪ್ರಕರಣ ಬಗ್ಗೆ ಮಾಹಿತಿ ನೀಡಿರುವ ಉತ್ತರ ದೆಹಲಿಯ ಡಿಸಿಪಿ ಸಾಗರ್ ಸಿಂಗ್ ಕಲ್ಸಿ, “ಇದು ಸೂಕ್ಷ್ಮ ಪ್ರಕರಣವಾಗಿದೆ. ಅತ್ಯಂತ ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದೇವೆ. ಪ್ರಮುಖ ಆರೋಪಿ ಮತ್ತು ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಪತ್ನಿಯನ್ನೂ ಬಂಧಿಸಿದ್ದೇವೆ. ಸಿಆರ್ಪಿಸಿ 164ರ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಬಳಿ ದಾಖಲಿಸಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮೋದಯ್ ತನ್ನ ಮೃತ ಸ್ನೇಹಿತನ 16 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆತನ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳು ಮತ್ತು ಪೋಕ್ಸೋ ಕಾಯ್ದೆಯಡಿ ದೆಹಲಿಯ ಬುರಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಸಂತ್ರಸ್ತ ಬಾಲಕಿಯು ಉತ್ತರ ದೆಹಲಿಯ ಶಾಲೆಯೊಂದರಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲಕಿ ಕುಟುಂಬ ಮತ್ತು ಆರೋಪಿಯು ಹಿಂದಿನಿಂದಲೂ ಪರಿಚಿತರು. 2020ರಲ್ಲಿ ಬಾಲಕಿಯ ತಂದೆ ಸಾವನ್ನಪ್ಪಿದ್ದರು. ಆಗ ಆರೋಪಿಯು ಬಾಲಕಿಯ ಪೋಷಣೆಯ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಮುಂದೆ ಬಂದಿದ್ದನು. ಪರಿಚಿತನೇ ಆಗಿದ್ದರಿಂದ ಬಾಲಕಿಯ ತಾಯಿಯೂ ತನ್ನ ಮಗಳನ್ನು ಆತನೊಂದಿಗೆ ಕಳುಹಿಸಲು ಒಪ್ಪಿಕೊಂಡಿದ್ದರು’ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗಾಂಧಿ ಪ್ರತಿಮೆ ಧ್ವಂಸ | ಕೃತ್ಯ ಎಸಗಿದವರ ಮೇಲೆ ಕಠಿಣ ಕಾನೂನು ಕ್ರಮ: ಸಿಎಂ ಸಿದ್ದರಾಮಯ್ಯ
ಬಾಲಕಿ 2020ರ ಅಕ್ಟೋಬರ್ನಿಂದ 2021ರ ಫೆಬ್ರವರಿಯವರೆಗೆ ಆರೋಪಿಯೊಂದಿಗೆ ಉಳಿದುಕೊಂಡಿದ್ದಳು. ಈ ಅವಧಿಯಲ್ಲಿ ಆಕೆಯ ಮೇಲೆ ಆರೋಪಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಗೆ ಲೈಂಗಿಕ ಕಿರುಕುಳ, ದೈಹಿಕ ಕಿರುಕುಳ ಮತ್ತು ಪದೇ ಪದೇ ಅತ್ಯಾಚಾರ ಎಸಗಲಾಗಿದೆ. ಅಪ್ರಾಪ್ತ ಬಾಲಕಿ ಗರ್ಭಿಣಿಯಾದಾಗ ಆರೋಪಿ ತನ್ನ ಪತ್ನಿಗೆ ವಿಷಯ ತಿಳಿಸಿದ್ದಾನೆ. ಆತನ ಪತ್ನಿ ತಮ್ಮ ಮಗನ ಮೂಲಕ ಔಷಧಿ ತರಿಸಿ, ಮನೆಯಲ್ಲಿಯೇ ಅಪ್ರಾಪ್ತೆಗೆ ಗರ್ಭಧಾರಣೆಯನ್ನೂ ಮಾಡಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಅಪ್ರಾಪ್ತೆಯ ಆರೋಗ್ಯದಲ್ಲಿ ಏರುಪೇರಾದಾಗ ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಆಕೆ ಆಸ್ಪತ್ರೆಯ ಸಲಹೆಗಾರರಿಗೆ ತನ್ನ ಮೇಲಾದ ದೌರ್ಜನ್ಯಗಳ ಬಗ್ಗೆ ವಿವರಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ತನ್ನ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ನಂತರವಷ್ಟೇ ಗೊತ್ತಾಗಿದೆ ಎಂದು ಬಾಲಕಿಯ ತಾಯಿಯೂ ತಿಳಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮತ್ತು ಆರೋಪಿಯ ಪತ್ನಿಯ ವಿರುದ್ಧ ಐಪಿಸಿ ಸೆಕ್ಷನ್ 376(2)(ಎಫ್) (ಪೋಷಕರಾಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗುವುದು), 506 (ಅಪರಾಧ ಬೆದರಿಕೆ), 509 (ಮಹಿಳೆಯರ ನಮ್ರತೆಯನ್ನು ಅವಮಾನಿಸುವ ಉದ್ದೇಶ), 323 (ನೋವು ಉಂಟುಮಾಡುವುದು), 313 (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತ), ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 6/21ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.