- ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ನಡೆದ ಘಟನೆ
- ಸ್ವಯಂ ತೆರವು ಮಾಡುವಂತೆ ಸೂಚನೆ ನೀಡಿದ ಅಧಿಕಾರಿಗಳು
ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲು ಮುಂದಾದ ವೇಳೆ ವಿಶೇಷ ಚೇತನ ವ್ಯಕ್ತಿಯೊಬ್ಬರು ಅಧಿಕಾರಿಯ ಕಾಲು ಹಿಡಿದು ಗೋಳಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಕಾಲು ಹಿಡಿದು ಕಣ್ಣೀರಿಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಕೊಲ್ಹಾರ ಪಟ್ಟಣದಲ್ಲಿರುವ ಸರಕಾರಿ ಜಾಗವನ್ನು ಒತ್ತುವರಿ ಮಾಡಿ, ಅನಧಿಕೃತ ಶೆಡ್ ನಿರ್ಮಾಣ ಮಾಡಿದ್ದನ್ನು ಕೊಲ್ಹಾರ ಪಟ್ಟಣ ಪಂಚಾಯತ ಅಧಿಕಾರಿಗಳು ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ಶೆಡ್‌ನಲ್ಲಿದ್ದ ಜನರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ಕೂಡ ನಿರ್ಮಾಣವಾಗಿತ್ತು.
ಈ ನಡುವೆಯೇ ಪ.ಪಂ.ಮುಖ್ಯಾಧಿಕಾರಿ ವೀರೇಶ್ ಹಟ್ಟಿ ಅವರ ಕಾಲಿಗೆ ಬಿದ್ದ ವಿಶೇಷ ಚೇತನ ವ್ಯಕ್ತಿಯೊಬ್ಬರು, ‘ಶೆಡ್ ತೆರವು ಮಾಡಿದರೆ ನಾವು ಎಲ್ಲಿಗೆ ಹೋಗೋದು. ದಯವಿಟ್ಟು ಶೆಡ್ಗಳನ್ನ ತೆರವು ಮಾಡಬೇಡಿ’ ಎಂದು ಕಣ್ಣೀರಿಟ್ಟರು.
ಆ ಬಳಿಕ ಶೆಡ್‌ನಲ್ಲಿರುವವರೊಂದಿಗೆ ಮಾತುಕತೆ ನಡೆಸಿದ ಅಧಿಕಾರಿಗಳು, ಒತ್ತುವರಿ ಮಾಡಿಕೊಂಡ ಜಾಗ ಸ್ವಯಂ ತೆರವು ಮಾಡುವಂತೆ ಸೂಚನೆ ನೀಡಿ, ಸಮಯಾವಕಾಶ ನೀಡಿದ್ದಾರೆ.
ಕೊಲ್ಹಾರ ಪಟ್ಟಣ ಪಂಚಾಯತಿಯ ವಾರ್ಡ್ ನಂಬರ್ 13, 14 ರ ಈದ್ಗಾ ಮೈದಾನದ ಹತ್ತಿರವಿರುವ ಜಮೀನು ಒತ್ತುವರಿಯಾಗಿದ್ದ ಹಿನ್ನೆಲೆಯಲ್ಲಿ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದರು. ವಿಶೇಷ ಚೇತನ ವ್ಯಕ್ತಿಯ ಗೋಳಾಟದ ಬಳಿಕ ಸ್ವಯಂ ತೆರವು ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದರು ಎಂದು ತಿಳಿದುಬಂದಿದೆ.