ಭಾರತದಲ್ಲಿ ಹೆಚ್ಚುತ್ತಿರುವ ಈರುಳ್ಳಿ ಬೆಲೆಯ ಮಧ್ಯೆ, ಮಹಾರಾಷ್ಟ್ರದ ಸಚಿವರೊಬ್ಬರು ಈರುಳ್ಳಿ ಖರೀದಿಸಲು ಸಾಮರ್ಥ್ಯವಿಲ್ಲದವರು ಕೆಲವು ತಿಂಗಳು ಅದನ್ನು ತಿನ್ನದಿದ್ದರೆ ಯಾವುದೇ ಬದಲಾವಣೆಯುಂಟಾಗುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೆಚ್ಚುತ್ತಿರುವ ಈರುಳ್ಳಿಯ ಬೆಲೆಗಳ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡುವಾಗ ಮಹಾರಾಷ್ಟ್ರದ ಸಚಿವ ದಾದಾ ಭೂಸೆ, “ನೀವು 10 ಲಕ್ಷ ರೂ. ಮೌಲ್ಯದ ವಾಹನವನ್ನು ಖರೀದಿಸುವುದಾದರೆ 10 ಅಥವಾ 20 ರೂ. ಹೆಚ್ಚಿನ ಬೆಲೆ ನೀಡಿ ಈರುಳ್ಳಿಯನ್ನು ಕೊಂಡುಕೊಳ್ಳಲು ಯಾವುದೇ ಹೊರೆಯಾಗುವುದಿಲ್ಲ. ಈರುಳ್ಳಿ ಕೊಳ್ಳಲು ಸಾಧ್ಯವಾಗದವರು ಮೂರ್ನಾಲ್ಕು ತಿಂಗಳು ತಿನ್ನದಿದ್ದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ” ಎಂದಿದ್ದಾರೆ.
ಈರುಳ್ಳಿಯ ರಫ್ತಿನ ಮೇಲೆ ಶೇಕಡ 40 ರಷ್ಟು ರಫ್ತು ಸುಂಕ ವಿಧಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರೈತರು ಮತ್ತು ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿರುವ ನಡುವೆ ಸಚಿವರು ಈ ಹೇಳಿಕೆ ನೀಡಿದ್ದಾರೆ.
‘ಕೇಂದ್ರ ಸರ್ಕಾರವು ಸರಿಯಾದ ಸಮಾಲೋಚನೆ ನಡೆಸಿಯೇ ಈ ನಿರ್ಧಾರ ಕೈಗೊಂಡಿದೆ. ಬೆಲೆ ಏರಿಕೆಯನ್ನು ಪರಿಶೀಲಿಸಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಸುಧಾರಿಸಲು ಈ ಕ್ರಮ ಕೈಗೊಂಡಿದೆ’ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? 370ನೇ ವಿಧಿ ರದ್ದತಿಯ ನಂತರ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಳ
ಕೆಲವೊಮ್ಮೆ ಈರುಳ್ಳಿ ಪ್ರತಿ ಕ್ವಿಂಟಾಲ್ಗೆ 200 ರೂ. ದರ ಇರುತ್ತದೆ. ಮತ್ತು ಕೆಲವೊಮ್ಮೆ ಕ್ವಿಂಟಾಲ್ಗೆ 2,000 ರೂ. ಏರಿಕೆಯಾಗುತ್ತದೆ. ಮಾತುಕತೆ ಮೂಲಕ ಈರುಳ್ಳಿ ದರ ಏರಿಕೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಭೂಸೆ ಹೇಳಿದರು.
ಶೇಕಡ 40 ರಷ್ಟು ರಫ್ತು ಸುಂಕ ವಿಧಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸೋಮವಾರ, ಭಾರತದ ಅತಿದೊಡ್ಡ ಸಗಟು ಈರುಳ್ಳಿಯ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಾಸಲ್ಗಾಂವ್ ಸೇರಿದಂತೆ ನಾಸಿಕ್ನ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಈರುಳ್ಳಿಯ ಹರಾಜನ್ನು ಅನಿರ್ದಿಷ್ಟಾವಧಿಗೆ ಮುಚ್ಚಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.
ಕೇಂದ್ರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಅನಿರ್ದಿಷ್ಟಾವಧಿಯವರೆಗೆ ಈರುಳ್ಳಿಯ ಹರಾಜಿನಲ್ಲಿ ಪಾಲ್ಗೊಳ್ಳದಂತೆ ನಾಸಿಕ್ ಜಿಲ್ಲಾ ಈರುಳ್ಳಿ ವರ್ತಕರ ಸಂಘ ಕರೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ರಫ್ತು ಸುಂಕವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಲವಾರು ರೈತರು ಮತ್ತು ವ್ಯಾಪಾರಿಗಳು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದರು.
ಹಣಕಾಸು ಸಚಿವಾಲಯವು 2023ರ ಡಿಸೆಂಬರ್ 31ರವರೆಗೆ ಈರುಳ್ಳಿಯ ರಫ್ತಿನ ಮೇಲೆ ಶೇ. 40 ಸುಂಕವನ್ನು ವಿಧಿಸಿ ಆದೇಶ ಹೊರಡಿಸಿದೆ.
ಈ ಹಿಂದೆ, ಟೊಮ್ಯಾಟೊ ಬೆಲೆ ಭಾರಿ ಏರಿಕೆ ಕಂಡ ನಂತರ ಕೇಂದ್ರ ಸರ್ಕಾರವು ತೀವ್ರ ಟೀಕೆಗಳನ್ನು ಎದುರಿಸಿತು. ಈಗ ಟೊಮ್ಯಾಟೊ ಬೆಲೆ ಕುಸಿಯುತ್ತಿದೆ. ಆದರೆ ಈರುಳ್ಳಿ ಏರಿಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಮತ್ತೆ ಚಿಂತೆ ಶುರು ಮಾಡಿದೆ. ಕೇಂದ್ರವು ಕೂಡ ಬೆಲೆ ಇಳಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ತರಕಾರಿ ಹಾಗೂ ಧಾನ್ಯಗಳ ಇಳುವರಿ ಕಡಿಮೆಯಾಗುತ್ತಿರುವುದರಿಂದ ಬೆಲೆಗಳು ಏರಿಕೆಯಾಗುತ್ತಿವೆ.
ಸರ್ಕಾರ ಮತ್ತು ವರ್ತಕರು ಸೇರಿ ಈ ನಾಟಕದ ಪಾತ್ರಧಾರಿಗಳು,, ದೇಶದ ಬಡಜನರು ಮಾತ್ರ ಮೂಕ ಪ್ರೇಕ್ಷಕರು,,,,,ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಬಂಡವಾಳಿಗರ ಕೈಗೊಂಬೆ ಸರಕಾರವನ್ನು ಅಧಿಕಾರಕ್ಕೆ ತಂದರೆ ಈ ಪಾಡು ಪಡಬೇಕಾಗುತ್ತದೆ ಎಂದು ಜನರು ಈಗಲಾದರೂ ಬುದ್ಧಿವಂತರಾಗದೇ ಹೋದರೆ,,ಈ ನಾಟಕಕ್ಕೆ ಅಂತ್ಯವೆನ್ನುವುದೇ ಇಲ್ಲ