ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಮಂಡ್ಯ ಜಿಲ್ಲೆಯ ರೈತರು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯದ ಇಂಡುವಾಳು ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದ ರೈತರು, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆ ವೇಳೆ ವಾಹನ ತಡೆದಿದ್ದರಿಂದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನಾನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಈವೇಳೆ ನಡೆದ ತಳ್ಳಾಟದಲ್ಲಿಐದಾರು ರೈತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರ ದೌರ್ಜನ್ಯದ ವಿರುದ್ಧ ಬಂದಿತ ರೈತರು ಆಕ್ರೋಶ ವ್ಯಕ್ತಪಡಿಸಿದರು.
“ರೈತರ ಪರ ಸಂಸತ್ತಿನಲ್ಲಿ ದನಿ ಎತ್ತಬೇಕಾದ ಸಂಸದ ಸುಮಲತಾ ಅಂಬರೀಶ್ ಬೀದಿ ಗಿಳಿದು ಹೋರಾಟ ಮಾಡುವ ಮೂಲಕ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅತ್ತ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದವರು ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುದ್ದಾರೆ. ಇತ್ತ, ರಾಜ್ಯದ ಕಾಂಗ್ರೆಸ್ ಸರ್ಕಾರ ನೀರನ್ನೆಲ್ಲ ತಮಿಳುನಾಡಿಗೆ ಹರಿಸಿ ಇದೀಗ ಸರ್ವ ಪಕ್ಷ ಸಭೆ ಕರೆದು ರೈತರ ಪರ ಮೊಸಳೆ ಕಣ್ಣೀರು ಸುರಿಸಲು ಮುಂದಾಗಿದೆ” ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ರೈತಸಂಘದ ಇಂಡುವಾಳು ಚಂದ್ರಶೇಖರ್, ಮಂಜೇಶ್ ಗೌಡ, ಸೊ.ಶಿ. ಪ್ರಕಾಶ್, ಬನ್ನೂರು ನಾರಾಯಣ, ಸಿದ್ದೇಗೌಡ, ಇ.ಬಸವರಾಜ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಮೇಶ್ ಗೌಡ ಸೇರಿದಂತೆ ನೂರಾರು ರೈತರು ಇದ್ದರು.