ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 9 ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಜಿಲ್ಲಾಧ್ಯಕ್ಷ ಪ್ರತಾಪ್ ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಗಸ್ಟ್ 20 ರಂದು ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿರುವ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಚಿಂತನಾ ಸಭೆ ನಡೆಸಲಾಗಿತ್ತು. ಸರ್ಕಾರದಿಂದ ಸೌಲಭ್ಯ ಹಾಗೂ ನಿಗಮ-ಮಂಡಳಿ ನೇಮಕಕ್ಕೆ ಒತ್ತಾಯಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು” ಎಂದರು.
“ಈ ಹಿಂದೆ ಆರ್ಯ ಈಡಿಗ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆಯಾಗಿತ್ತು. ಆದರೆ, ಅನುದಾನ ಬಿಡುಗಡೆಯಾಗಿರಲಿಲ್ಲ. ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೂ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಈಡಿಗ, ನಾಮಧಾರಿ, ಧೀವರ ಸೇರಿದಂತೆ 26 ಪಂಗಡಗಳು ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿವೆ. ಇದು ಕರ್ನಾಟಕದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದೆ. ಸಮಾಜದ ಧ್ವನಿಯನ್ನು ಕುಗ್ಗಿಸುವ ಹಾಗೂ ಅವರ ರಾಜಕೀಯ ಅಧಿಕಾರ ಸ್ಥಾನಮಾನಗಳಿಂದ ದೂರ ಮಾಡಲಾಗುತ್ತಿದೆ. ಹಿಂದುಳಿದ ಸಮುದಾಯದ ಉಳಿವಿಗಾಗಿ ಮತ್ತು ಆರ್ಥಿಕ ಸಂವರ್ಧನೆ ಮೂಲಕ ದೊಡ್ಡ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಶಕ್ತಿಯ ಸಂವರ್ಧನೆ ಮಾಡಬೇಕಾಗಿದೆ” ಎಂದರು.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ್, ಇ. ರಾಜೇಶ್.ಟಿ.ಆರ್. ಜ್ಞಾನೇಶ್, ಬಿ.ಕೆ. ದಾನೇಶ್, ಗಿರೀಶ್, ಇ.ಆರ್. ಹಾಲಸ್ವಾಮಿ, ಎಸ್.ಎಂ. ಸಂತೋಷ್, ಪ್ರಭಾಕರ್, ಬಾಲರಾಜ್ ಹಾಜರಿದ್ದರು.