(ಈ ಆಡಿಯೊ ಟ್ಯಾಬ್ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಆಡಳಿತದ ಗುಣಮಟ್ಟ ಸುಧಾರಿಸುವ ನೈಜ ಕಾಳಜಿ ಇರುವ ನೀತಿ ನಿರೂಪಕರು ಟೀಕೆಗಳಿಗೆ ಹಿಂಜರಿಯಲಾರರು. ಆದರೆ, ಚುನಾವಣಾ ಗೆಲುವನ್ನು - ಏನು ಬೇಕಾದರೂ ಮಾಡಲು ಮತದಾರರು ನೀಡಿದ ಪರವಾನಗಿ ಎಂದು ಪರಿಗಣಿಸಿಬಿಟ್ಟರೆ ಏನಾದೀತು ಎಂಬುದು ಈಗ ಕಣ್ಣೆದುರಿನ ಕತೆ
ಚುನಾವಣೆಯಲ್ಲಿ ಪಡೆದ ಬಹುಮತವನ್ನೇ ಅಸ್ತ್ರವಾಗಿಸಿಕೊಂಡು ಆಳುವವರು ತಮ್ಮನ್ನು ಪ್ರಶ್ನಾತೀತರಾಗಿ ಬಿಂಬಿಸಿಕೊಳ್ಳಬಹುದೇ? ಸರ್ಕಾರದ ನೀತಿಗಳು, ವೈಫಲ್ಯಗಳ ಕುರಿತು ಪ್ರಶ್ನೆಗಳು ಎದ್ದಾಗ, ಅದಕ್ಕೆ ಉತ್ತರಿಸುವ ಬದಲಿಗೆ ಚುನಾವಣಾ ಗೆಲುವನ್ನೇ ಮುಂದು ಮಾಡಿ ನುಣುಚಿಕೊಳ್ಳಬಹುದೇ? ಆಳುವವರ ಇಂತಹ ನಡೆಯನ್ನು ಹೊಣೆಗೇಡಿತನವಾಗಿ ಪರಿಗಣಿಸಬೇಕೋ ಅಥವಾ ಇದರಲ್ಲಿ ತಪ್ಪೇನಿದೆ ಅಂತ ಸಮ್ಮತಿ ಸೂಚಿಸಬೇಕೋ?
ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಸಂದರ್ಭ ಎದುರಾದಾಗಲೆಲ್ಲ ಚುನಾವಣಾ ಗೆಲುವುಗಳನ್ನು ಮುನ್ನೆಲೆಗೆ ತರುವುದು ತೀರಾ ಸಾಮಾನ್ಯವಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದ ಬಗ್ಗೆ ಮಾತನಾಡಲು ಕೂಡ ಹಿಂಜರಿಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೊನೆಗೂ ಲೋಕಸಭೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಬೇಕಾದ ಅನಿವಾರ್ಯತೆ ಎದುರಾಯಿತು. ಆಗಲೂ ವಿರೋಧ ಪಕ್ಷಗಳನ್ನು ಹಣಿಯಲು ಚುನಾವಣಾ ಗೆಲುವಿನ ಅಸ್ತ್ರ ಪ್ರಯೋಗಿಸುವುದನ್ನು ಮಾತ್ರ ಅವರು ಮರೆಯಲಿಲ್ಲ. “2024ರ ಲೋಕಸಭಾ ಚುನಾವಣೆಯಲ್ಲೂ ದೇಶದ ಮತದಾರರು ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಲಿದ್ದಾರೆ. ವಿರೋಧ ಪಕ್ಷಗಳ ಆರೋಪಕ್ಕೆ ಚುನಾವಣಾ ಫಲಿತಾಂಶವೇ ಉತ್ತರ ನೀಡಲಿದೆ,” ಎನ್ನುವ ಅರ್ಥ ಧ್ವನಿಸುವ ಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಆಡಿದರು.
ಮಣಿಪುರದಲ್ಲಿನ ಹಿಂಸಾಚಾರದಂತಹ ಸೂಕ್ಷ್ಮ ವಿಚಾರದ ಕುರಿತು ನೇರವಾಗಿ ಮಾತನಾಡುವ ಬದಲಿಗೆ ವಿಷಯಾಂತರ ಮಾಡುವ ವೇಳೆ ಬಿಜೆಪಿ ಪಾಳಯದಲ್ಲಿದ್ದ ಗೆಲುವಿನ ಸಂಭ್ರಮ ದೇಶ ಆಳುವವರನ್ನು ಆವರಿಸಿರುವ ವಿಕೃತಿಗೆ ಹಿಡಿದ ಕೈಗನ್ನಡಿಯಂತಿತ್ತು. ಮಣಿಪುರದಲ್ಲಿನ ಜನಾಂಗೀಯ ಕಲಹದಲ್ಲಿ ನೊಂದು ಬೆಂದವರ ಅನುಭವಗಳಿಗೆ ಕಿವಿಯಾಗುವ ಯಾವುದೇ ಮಾನವೀಯ ಮನಸ್ಸು ಘಾಸಿಗೊಳ್ಳದೆ ಇರಲಾರದು. ತೀವ್ರ ಸ್ವರೂಪದ ದೈಹಿಕ, ಮಾನಸಿಕ ಆಘಾತಕ್ಕೆ ಸಾವಿರಾರು ಮಂದಿ ಒಳಗಾಗುತ್ತಿರುವ ಅರಾಜಕ ವಿದ್ಯಮಾನದ ಕುರಿತು ಮಾತನಾಡುವಾಗ ಮೇಜು ಕುಟ್ಟಿ ಸಂಭ್ರಮಿಸುವುದು ಒಪ್ಪತಕ್ಕ ನಡೆಯೇ? ವೈಫಲ್ಯ ಮುಚ್ಚಿಕೊಳ್ಳಲು ಚುನಾವಣಾ ಗೆಲುವುಗಳು, ಬಣ್ಣದ ಮಾತುಗಳ ಮೊರೆಹೋಗುವುದು ಪ್ರಧಾನಿ ಹುದ್ದೆಯ ಘನತೆಗೆ ಸರಿಹೊಂದುವುದೇ?
ಚುನಾವಣೆಯಲ್ಲಿ ಹಕ್ಕು ಚಲಾಯಿಸುವ ಮೂಲಕ ಮತದಾರರು ಮಾಡಿಕೊಳ್ಳುವುದು ಇರುವುದರಲ್ಲೇ ಪರವಾಗಿಲ್ಲ ಎನ್ನುವಂತಹ ಆಯ್ಕೆಯನ್ನೇ ಹೊರತು, ಮಿತಿಗಳೇ ಇರದ ಉತ್ಕೃಷ್ಟ ಆಯ್ಕೆಯನ್ನೇನಲ್ಲ. ಚುನಾವಣೆಯಲ್ಲಿ ತಮಗೆ ಸೂಕ್ತವೆನಿಸಿದ ಪಕ್ಷ ಮತ್ತು ವ್ಯಕ್ತಿಗೆ ಮತ ಚಲಾಯಿಸುವ ಪ್ರಜೆಗಳು, ಆನಂತರ ಆಳುವವರ ಕುರಿತು ವಿಮರ್ಶಾತ್ಮಕ ದೃಷ್ಟಿಕೋನ ಹೊಂದುವುದನ್ನು ಸಹಜವೆಂದೇ ಭಾವಿಸಲಾಗುತ್ತಿತ್ತು. ದೇಶ ಮತ್ತು ರಾಜ್ಯ ಆಳುವ ಸರ್ಕಾರಗಳ ಕಾರ್ಯವೈಖರಿಯ ಕುರಿತು ಟೀಕೆ-ಟಿಪ್ಪಣಿಗಳು ಸಾರ್ವಜನಿಕ ಸಂವಾದಗಳಲ್ಲಿ ಸರ್ವೇಸಾಮಾನ್ಯವಾಗಿದ್ದವು. ಬಹುತೇಕ ಮಾಧ್ಯಮಗಳಿಗೆ ಕೂಡ ಆಳುವ ಸರ್ಕಾರದ ಓರೆಕೋರೆಗಳನ್ನು ಜನರೆದುರು ತೆರೆದಿಡುವುದು ಆದ್ಯತೆಯಾಗಿತ್ತೇ ಹೊರತು, ಒಕ್ಕೂಟ ಮತ್ತು ರಾಜ್ಯ ಸರ್ಕಾರದ ತುತ್ತೂರಿಯಾಗಿ ಕಾರ್ಯನಿರ್ವಹಿಸುವುದಲ್ಲ.
ಆದರೆ, ಬದಲಾದ ಸನ್ನಿವೇಶದಲ್ಲಿ ದೇಶ ಆಳುವವರ ತಪ್ಪುಗಳು ಕಂಡರೂ ಕಾಣದಂತೆ ನಟಿಸುವುದು, ಏನು ಮಾಡಿದರೂ ಸರಿಯೇ ಅನ್ನುವ ವಿತಂಡವಾದ ತೇಲಿಬಿಡುವುದನ್ನೇ ದೇಶಭಕ್ತಿ ಎಂದು ಬಿಂಬಿಸಲಾಗುತ್ತಿದೆ. ಸರ್ಕಾರದ ವಿರುದ್ಧ ಪ್ರಶ್ನೆಗಳು, ಟೀಕೆಗಳು ಪುಟಿದೇಳದಂತೆ ನೋಡಿಕೊಳ್ಳಲು ಸಾಕಷ್ಟು ಶ್ರಮ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸಲಾಗುತ್ತಿದೆ. ಬಹುತೇಕ ಮಾಧ್ಯಮಗಳ ವಿಮರ್ಶಾ ಕಣ್ಣು ವಿರೋಧ ಪಕ್ಷಗಳತ್ತ ನೆಟ್ಟಿದೆ. ಒಕ್ಕೂಟ ಸರ್ಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಕಾರಾತ್ಮಕ ಸುದ್ದಿ ಅಥವಾ ಅಭಿಪ್ರಾಯ ಬಿತ್ತರಿಸಲು ಅಘೋಷಿತ ನಿಷೇಧಾಜ್ಞೆ ಜಾರಿಯಲ್ಲಿರುವುದು ಢಾಳಾಗಿಯೇ ಗೋಚರಿಸುತ್ತಿದೆ.
ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಒಕ್ಕೂಟ ಸರ್ಕಾರದ ಹಾಗೆ ರಾಜ್ಯ ಸರ್ಕಾರಗಳೂ ಚುನಾವಣಾ ಗೆಲುವನ್ನೇ ಗುರಾಣಿಯಾಗಿ ಬಳಸಿಕೊಳ್ಳಬಹುದಲ್ಲವೇ? ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸಲಾಗದ ತನ್ನ ಅಸಮರ್ಥತೆ ಮರೆಮಾಚಲು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರ ಕೂಡ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತನಗೆ ದೊರೆತ ಗೆಲುವನ್ನೇ ಅಸ್ತ್ರವಾಗಿ ಬಳಸಿಕೊಳ್ಳಬಹುದಿತ್ತಲ್ಲವೇ? ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಕೂಡ ತನ್ನ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗಲೆಲ್ಲ ಚುನಾವಣಾ ಗೆಲುವನ್ನೇ ಮುನ್ನೆಲೆಗೆ ತರಬಹುದಲ್ಲವೇ?
ಚುನಾವಣಾ ಗೆಲುವನ್ನು ಏನು ಬೇಕಾದರೂ ಮಾಡಲು ಮತದಾರರು ನೀಡಿದ ಪರವಾನಗಿ ಎಂದು ಪರಿಗಣಿಸಿ ಅಂತ ದೇಶ ಆಳುವವರು ವಾದಿಸುವುದಾದರೆ, ಇದೇ ಪರವಾನಗಿ ಬಳಸಿಕೊಂಡು ಹಿಂದಿನವರು ಮಾಡಿದ್ದೆಲ್ಲವೂ ಸರಿ ಎಂದೇ ವಾದಿಸಬಹುದಲ್ಲವೇ? ಸುದೀರ್ಘ ಅವಧಿಗೆ ದೇಶ ಆಳಿರುವ ಕಾಂಗ್ರೆಸ್ ಪಕ್ಷವನ್ನು ಕೂಡ ಮತದಾರರು ನಿರಂತರವಾಗಿ ಗೆಲ್ಲಿಸಿರುವ ನಿದರ್ಶನ ಕಣ್ಣ ಮುಂದಿದ್ದರೂ, ಚುನಾವಣಾ ಗೆಲುವಿನ ಮುಸುಕಿನಡಿ ವೈಫಲ್ಯಗಳನ್ನು ಹುದುಗಿಸಿಡುವ ಒಕ್ಕೂಟ ಸರ್ಕಾರದ ಕಸರತ್ತು ಇನ್ನೂ ಚಾಲ್ತಿಯಲ್ಲಿದೆ.
ತಪ್ಪು ತಿದ್ದಿಕೊಳ್ಳುವ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಆಡಳಿತದ ಗುಣಮಟ್ಟ ಸುಧಾರಿಸುವ ನೈಜ ಕಾಳಜಿ ಇರುವ ನೀತಿ ನಿರೂಪಕರು ಟೀಕೆಗಳಿಗೆ ತಮ್ಮನ್ನು ತೆರೆದುಕೊಳ್ಳಲು ಹಿಂಜರಿಯಲಾರರು. ಸುಳ್ಳುಗಳ ಮೇಲೆ ಸಾಧನೆಯ ಸೌಧ ಎದ್ದು ನಿಲ್ಲಿಸುವ ಕಾರ್ಯಸೂಚಿ ಹೊಂದಿರುವವರಿಗೆ ಎಲ್ಲವನ್ನೂ ಅದುಮಿಡುವುದರ ಕಡೆಗೆ ಇನ್ನಿಲ್ಲದ ಒಲವು. ಹೀಗೆ ಅದುಮಲ್ಪಡುವುದೆಲ್ಲ ಒಂದು ದಿನ ಪುಟಿದೇಳದೆ ಇರುವುದೇ?
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ