ನರೇಗಾ (ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ) ಯೋಜನೆಗೆ ಬಜೆಟ್‌ನಲ್ಲಿ ಮೂರನೇ ಒಂದರಷ್ಟು ಭಾಗದಷ್ಟು ಕಡಿತದ ನಂತರವೂ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 6,366 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಖರ್ಗೆ, 2005, ಆಗಸ್ಟ್ 23ರಂದು ಕಾಂಗ್ರೆಸ್ ಸರ್ಕಾರ ನರೇಗಾ ಯೋಜನೆಯನ್ನು ಪ್ರಾರಂಭಿಸಿತು. ಇದರಿಂದ ದೇಶದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ ಎಂದು ನರೇಗಾ ಯೋಜನೆಯನ್ನು ಅವರು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ: ಮಲ್ಲಿಕಾರ್ಜುನ ಖರ್ಗೆ
ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನರೇಗಾ ಯೋಜನೆಯಡಿ ನೀಡಬೇಕಾದ 6,366 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದೆ ಎಂದು ಖರ್ಗೆ ಆರೋಪ ಮಾಡಿದ್ದಾರೆ.
ಈ ಯೋಜನೆ ಅಡಿಯಲ್ಲಿ ದೇಶದ 14 ಕೋಟಿ ಕಾರ್ಮಿಕರು ಸಕ್ರಿಯರಾಗಿದ್ದಾರೆ. ಇವರಲ್ಲಿ 8 ಕೋಟಿಯಷ್ಟು ಮಹಿಳೆಯರು ಇದ್ದಾರೆ. ಈ ಯೋಜನೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಖರ್ಗೆ ಹೇಳಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ನರೇಗಾ ಯೋಜನೆ ಕೋಟ್ಯಂತರ ಜನರಿಗೆ ಜೀವನ ಭದ್ರತೆ ಒದಗಿಸಿತು. ಮನೆಯಲ್ಲಿ ಕುಳಿತ ಕಾರ್ಮಿಕರಿಗೆ ಭದ್ರತೆ ನೀಡಿತು ಎಂದು ಖರ್ಗೆ ಹೇಳಿದ್ದಾರೆ.