ಕೃಷ್ಣ ಭಾಗ್ಯ ಜಲ ನಿಗಮ ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರನ್ನು ಹೊರಗಿಟ್ಟು ಸಭೆ ನಡೆಸಿ ಅವಮಾನಿಸಿದ ಸಚಿವ ಆರ್.ಬಿ ತಿಮ್ಮಾಪೂರ ಅವರನ್ನು ವಜಾಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿದರು.
“ಆ.21 ರಂದು ಆಲಮಟ್ಟಿಯಲ್ಲಿ ಕೃಷ್ಣ ಭಾಗ್ಯ ಜಲ ನಿಗಮದ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿತ್ತು, ಶಾಸಕರು, ಅಧಿಕಾರಿಗಳು ಹಾಗೂ ರೈತರನ್ನು ಆಹ್ವಾನ ನೀಡಿತ್ತು. ಆದರೆ, ಸಭೆಯ ಅಧ್ಯಕ್ಷತೆ ವಹಿಸಿದ ಸಲಹಾ ಸಮಿತಿ ಅಧ್ಯಕ್ಷ ಸಚಿವ ಆರ್.ಬಿ ತಿಮ್ಮಾಪೂರ ಅವರು ರೈತರನ್ನು ಹೊರಗಿಟ್ಟು ಸಭೆ ನಡೆಸಿದ್ದಾರೆ. ರೈತರ ಅಭಿಪ್ರಾಯವನ್ನು ಸಂಗ್ರಹಿಸದೇ ಹಾಗೂ ಶಾಸಕರ ಮಾತಿಗೆ ಬೆಲೆ ನೀಡದೇ ಏಕ ಪಕ್ಷಿಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಎಂಟು ಜಿಲ್ಲೆಗಳಲ್ಲಿ ಬರಗಾಲವಿದ್ದರೂ ಸಭೆಯಲ್ಲಿ 14 ದಿನ ನೀರು ಹರಿಸಿ 10 ದಿನ ಬಂದ್ ಮಾಡುವ ನಿರ್ಣಯ ತೆಗೆದುಕೊಂಡಿದ್ದು ಏಕ ಪಕ್ಷಿಯ ನಿರ್ಣಯ” ಎಂದು ಖಂಡಿಸಿದರು.
“10 ದಿನದ ನಂತರ ನೀರು ಹರಿಸಿದರೆ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ, 3 ರಿಂದ 4 ದಿನ ಬೇಕಾಗುತ್ತದೆ, ಈಗಾಗಲೇ ಬೆಳೆದ ಬೆಳೆ ಹತ್ತಿ, ಮೆಣಸಿನಕಾಯಿ ಒಣಗುತ್ತಿವೆ, ಸಭೆಯಲ್ಲಿ ತೆಗೆದುಕೊಂಡ ಒಮ್ಮತದ ನಿರ್ಣಯದಿಂದ ರೈತರಿಗೆ ಬಾರೀ ತೊಂದರೆಯಾಗಲಿದೆ. ಕೂಡಲೇ ಈ ನಿರ್ಣಯ ಹಿಂಪಡೆಯಬೇಕು, ಇಲ್ಲದಿದ್ದರೆ ಹೋರಾಟ ನಡೆಸಲಾಗುತ್ತದೆ” ಎಂದು ಆಕ್ರೋಶ ಹೊರಹಾಕಿದರು.
“ರೈತರನ್ನು ಹೊರಗಿಟ್ಟು ಏಕ ಪಕ್ಷಿಯವಾಗಿ ನಿರ್ಧಾರ ಕೈಗೊಂಡ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಸಂಪುಟದಿಂದ ಕೈಬಿಡಬೇಕು, ರೈತರ ವಿರುದ್ಧ ನಿರ್ಣಯ ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ನರಸಿಂಹ ನಾಯಕ, ಕಾರ್ಯದರ್ಶಿ ಸಾಜೀದ್ ಹುಸೇನ್, ತಾಲೂಕ ಅಧ್ಯಕ್ಷ ಶಿವಪ್ಪ, ಈರಣ್ಣ, ಮಸ್ತಾನ್, ಹಬುಮೇಶ, ಸಂಗಮೇಶ ನಾಯಕ, ಈರಣ್ಣ ಸರ್ಜಾಪೂರ ರಂಗನಾಥ ಸೇರಿದಂತೆ ಅನೇಕರು ಇದ್ದರು.