ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಹಿನ್ನೆಲೆ ಕರ್ನಾಟಕ ಕೂಡ ಅಫಿಡವಿಟ್ ಸಲ್ಲಿಸಿದೆ. ನಾಳೆ (ಆಗಸ್ಟ್ 25) ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ(ಸಿಡಬ್ಲ್ಯುಎಂಎ) ಆದೇಶದಂತೆ ಈಗಾಗಲೇ ಕರ್ನಾಟಕ ಸರ್ಕಾರ, ತಮಿಳುನಾಡಿಗೆ ನೀರು ಬಿಟ್ಟಿದೆ. ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ನಡೆವೆಯೂ ಸಹ ನೀರು ಹರಿಸಿ ಪ್ರಾಧಿಕಾರದ ಆದೇಶ ಪಾಲನೆ ಮಾಡಲಾಗಿದೆ. ಆದರೂ ತಮಿಳುನಾಡು ಇನ್ನೂ ಬೇಕು ಎಂದು ಹೇಳುವ ಮೂಲಕ ಕಾವೇರಿ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕರ್ನಾಟಕ ಅಫಿಡೆವಿಟ್‌ನಲ್ಲಿ ಆರೋಪಿಸಿದೆ.
ಈ ಬಾರಿ ಕಾವೇರಿ ಕಣಿವೆ ಪ್ರದೇಶದಲ್ಲಿ ಶೇ.42ರಷ್ಟು ಮಳೆ ಕೊರತೆಯಿದೆ. ಕರ್ನಾಟಕ ಸಿಡಬ್ಲ್ಯುಎಂಎ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದೆ. ಸಾಮಾನ್ಯ ವರ್ಷದಂತೆ ನೀರು ಹರಿಸಲು ತಮಿಳುನಾಡು ಕೇಳುತ್ತಿದೆ. ತಮಿಳುನಾಡು 36.76 ಟಿಎಂಸಿ ನೀರು ಹರಿಸುವಂತೆ ಕೇಳುತ್ತಿದೆ. ಆದರೆ, ನಮ್ಮ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಕರ್ನಾಟಕದ ಜಲಾಶಯಗಳಲ್ಲಿ ಶೇ. 42 ಕಡಿಮೆ ನೀರು ಸಂಗ್ರಹವಾಗಿದೆ.
ಈ ಸುದ್ದಿ ಓದಿದ್ದೀರಾ? ರಷ್ಯಾ | ಪುಟಿನ್ ವಿರುದ್ಧ ಬಂಡೆದಿದ್ದ ಯೆವ್ಗೆನಿ ಪ್ರಿಗೋಷಿನ್ ವಿಮಾನ ಅಪಘಾತದಲ್ಲಿ ಸಾವು; ಕೊಲೆ ಶಂಕೆ?
ಕಾವೇರಿ ಜಲಾನಯನದಲ್ಲಿರುವ ನೀರು ಕರ್ನಾಟಕಕ್ಕೆ ಸಾಕಾಗುವುದಿಲ್ಲ. ಬೆಳೆ ಮತ್ತು ಕುಡಿಯುವ ನೀರಿಗೆ ಕೊರತೆಯಾಗಲಿದೆ. ಬೆಂಗಳೂರಿನಂತಹ ಮಹಾ ನಗರಕ್ಕೂ ನೀರಿನ ಕೊರತೆಯಾಗಲಿದೆ. ಅದಾಗ್ಯೂ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಿ ಪ್ರಾಧಿಕಾರದ ಆದೇಶವನ್ನು ಕರ್ನಾಟಕ ಪಾಲಿಸಿದೆ ಎಂದು ತಿಳಿಸಿದೆ.
ಮಳೆ ಶುರುವಾದ ಆರಂಭದಲ್ಲಿ ತಮಿಳುನಾಡು ಜಲಾಶಯಗಳಲ್ಲಿ 69 ಟಿಎಂಸಿ ನೀರಿತ್ತು. ಕರ್ನಾಟಕ ಆಗಸ್ಟ್ 22 ವರೆಗೂ 26 ಟಿಎಂಸಿ ನೀರು ಹರಿಸಿದೆ. ಇದರಿಂದ 96 ಟಿಎಂಸಿ ನೀರು ತಮಿಳುನಾಡು ಬಳಿ ಸಂಗ್ರಹವಾದಂತಾಯಿತು. ಸದ್ಯ ತಮಿಳುನಾಡು 21 ಟಿಎಂಸಿ ನೀರಿದೆ ಎಂದು ಹೇಳುತ್ತಿದೆ. ಕುರುವೈ ಬೆಳೆಗೆ 32 ಟಿಎಂಸಿ ನೀರು ಬೇಕಾಗಿದೆ. ಈಗಾಗಲೇ 22 ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ. ಬಾಕಿ 9.83 ಟಿಎಂಸಿ ನೀರು ಸೆಪ್ಟೆಂಬರ್ ಅಂತ್ಯದವರೆಗೂ ಬಳಸಬಹುದು. ಆದರೆ ಹೆಚ್ಚು ಪ್ರದೇಶದಲ್ಲಿ ಕುರುವೈ ಬೆಳೆದು ಅಗತ್ಯಕ್ಕಿಂತ ಹೆಚ್ಚು ನೀರಿನ ಬಳಕೆ ಮಾಡುತ್ತಿದೆ.
1.85 ಲಕ್ಷ ಎಕರೆ ಮೀರಿ ಕುರುವೈ ಬೆಳೆ ಬೆಳೆದಿದ್ದು, ಟ್ರುಬ್ಯುನಲ್ ಆದೇಶದ ಉಲ್ಲಂಘನೆಯಾಗಿದೆ. ಹೀಗೆ ತಮಿಳುನಾಡು ಜಲಾಶಯದ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕರ್ನಾಟಕ ತನ್ನ ಅಫಿಡೆವಿಟ್‌ನಲ್ಲಿ ಆರೋಪಿಸಿದೆ.