ಅಣಕ | ಹನಿ ಟ್ರ್ಯಾಪ್ ಎಲ್ಲ ಹಳೇದು, ಈಗ ಏನಿದ್ರು ಗುರು ಟ್ರ್ಯಾಪ್!

Date:

Advertisements
ಹನಿ ಟ್ರ್ಯಾಪ್ ಹಳೇದು, ಗುರು ಟ್ರ್ಯಾಪ್ ಹೊಸ್ದು. ಜ್ಯೋತಿಷಿಗಳ ಮಾತು ಕೇಳೋ ಕುಮಾರಸ್ವಾಮಿಗೆ, ಅವರ ಕಡಿಂದ್ಲೆ ಹೇಳ್ಸುದ್ರು, ಉಣ್ಣದು-ತಿನ್ನದುರ ಬಗ್ಗೆ ಮಾತಾಡ್ದೆ, ಸುಮ್ನೆ ಪಕ್ಷ ಕಟ್ಟಿ ಅಂತಂದ್ರು… ಈಗ ಇಬ್ರು ನಗಾಡ್ಕಂಡ್ ಅವ್ರೆ… ಸರ್ಕಾರಕ್ಕೆ ನಮ್ ಸಂಪೂರ್ಣ ಬೆಂಬಲ ಅಂತೇಳ್ ಬಂದವ್ರೆ...

ಜರ್ನಲಿಸ್ಟ್ ಜಂಗ್ಲಿ ಯಾರಿಗೂ ಸಿಗದ ಸ್ಕೂಪ್ ಸುದ್ದಿಯ ಹುಡುಕಾಟದಲ್ಲಿದ್ದ. ಎಲ್ಲರೂ ವಿಧಾನಸೌಧ, ಶಾಸಕರ ಭವನ, ಪ್ರೆಸ್ ಕ್ಲಬ್, ಏಟ್ರಿಯಾ, ಕ್ಯಾಪಿಟಲ್ ಹೋಟೆಲ್ ಗಳ ಸುತ್ತ ಠಳಾಯಿಸುತ್ತಿದ್ದರೆ, ಈತ ರಾಜಗುರುಗಳ ಹಿಂದೆ ಬಿದ್ದಿದ್ದ. ಅವರು ‘ಕೊಡ್ತೀನಿ, ಕೊಡ್ತೀನಿ, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಆಗುವ ಸುದ್ದಿ ಕೊಡ್ತೀನಿ’ ಎಂದು ಅಲೆದಾಡಿಸುತ್ತಲೇ ಇದ್ದರು.

ಸುಸ್ತಾದ ಜಂಗ್ಲಿ, ‘ಈಗ ಮೊದಲಂಗಲ್ಲ ಗುರುಗಳೇ, ಕ್ಷಣಕ್ಷಣಕ್ಕೂ ಬ್ರೇಕಿಂಗ್ ಬೇಡ್ತರೆ, ಬೇಡೋರ ಬಾಯಿಗೆ ಹಾಕ್ತನೇ ಇರಬೇಕು, ಅದೊಂಥರ ಬಕಾಸುರನ ಬಾಯಿ ಆಗೋಗಿದೆ, ಜೊತೆಗೆ ಸೋಷಿಯಲ್ ಮೀಡಿಯಾದವರ ಪ್ರೊಫೆಷನಲ್ ಥ್ರೆಟ್ ಬೇರೆ…’ ಅಂದ.

‘ಅವಸರ ಅಪಘಾತಕ್ಕೆ ದಾರಿ ಅಂತ ಕೇಳಿಲ್ವಾ ಜಂಗ್ಲಿ, ಅವರೆಲ್ಲ ಹಾಗೇ ಓಡ್ಲಿ, ನೀನು ಮಾತ್ರ ಹೀಗೇ ಇರು, ಆಮೆ ಥರ, ಕೊನೆಗೆ ಗೆಲುವು ನಿನ್ನದೇ’ ಎಂದರು.

Advertisements

ಆಮೆ-ಮೊಲದ ಕತೆ ನೆನಪಿಸಿಕೊಂಡ ಜಂಗ್ಲಿ, ‘ಈಗ ಅದೂ ಉಲ್ಟಾ ಆಗಿದೆ ಗುರುಗಳೇ, ಕಾದು ಗೆಲ್ಲಕ್ಕಾಗಲ್ಲ, ಬಡಿಬೇಕು ಬಾಯ್ಗಾಕಬೇಕು, ಬದುಕ್ ಕಟ್ಕಬೇಕು, ಆಮೇಲೆ ಸಂತನ ಥರ ಬೋಧನೆ ಬಿಗಿಬೇಕು, ಆಗ ನಮ್ ಜನ ವಾವ್ಹ್ ವಾವ್ಹ್ ಅಂತರೆ, ನಮ್ ಮಾತ್ ಎಲ್ರೂ ಕೇಳ್ತರೆ ಗುರುಗಳೇ, ಇಲ್ಲಾಂದ್ರೆ ನಾನ್ ಅತಂತ್ರ ಆಗಿ ಅಂತ್ರಪಿಶಾಚಿ ಥರ ಆಗ್ಬೇಕಾಯ್ತದೆ’ ಎಂದ.

‘ನಿನ್ನನ್ ಅತಂತ್ರ ಮಾಡಿ ನಾನ್ ಬದುಕೋದ್ಹೇಗೆ ಜಂಗ್ಲಿ, ನನ್ನಿಂದ ನೀನು, ನಿನ್ನಿಂದ ನಾನು, ಕೂಡಿ ಬಾಳಿದರೆ, ಸ್ವರ್ಗ ಸುಖ… ಬಾ ಏನಾದ್ರು ಮಾಡೋಣ’ ಎಂದರು ಗುರುಗಳು.

ಅವರ ಕೂಡಿಕೆಯ ಫಲವಾಗಿ ದಿನಪತ್ರಿಕೆಯಲ್ಲಿ ಪ್ರಮುಖವಾದ ಸುದ್ದಿಯೊಂದು ಪ್ರಕಟವಾಯಿತು. ‘ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರಿಗೆ ಟೈಂ ಚೆನ್ನಾಗಿದೆ. ಹಾಗಾಗಿ, ಈ ಸಂದರ್ಭವನ್ನು ಅವರು ಪಕ್ಷ ಸಂಘಟನೆ ಮಾಡುವುದಕ್ಕೆ ಬಳಸಿಕೊಂಡಲ್ಲಿ ಅವರಿಗೆ ಮುಂದೆ ಒಳ್ಳೆಯದಾಗುತ್ತದೆ ಎಂದು ಹೆಸರಾಂತ ಜ್ಯೋತಿಷಿ, ರಾಜಗುರು ದ್ವಾರಕಾನಾಥ್ ಅವರು ಹೇಳಿದ್ದಾರೆ. ಜೊತೆಗೆ, ಅವರಲ್ಲಿರುವ ‘ಅದೊಂದು’ ಗುಣವನ್ನು ಬಿಟ್ಟರೆ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ ಎಂದು ಅವರು ಹೇಳಿದ್ದಾರೆ’ ಎಂಬುದು.

ಸುದ್ದಿ ಓದಿದ ಸುಬ್ಬನಿಗೆ ‘ಅದೊಂದು’ ಗುಣ ಯಾವುದಿರಬಹುದು ಎಂಬ ಕುತೂಹಲ ಕೆರಳಿ ಗೆಳೆಯ ಗುಬ್ಬನನ್ನು ಕೇಳಿದ.

‘ಅದೇ ಕಣೋ, ಕುಮಾರಸ್ವಾಮಿಗೆ ಕ್ವಾಪ ಜಾಸ್ತಿ, ಅದ್ನ ಕಡಿಮೆ ಮಾಡ್ಕಳಕೇಳವ್ರೆ’ ಎಂದ ಗುಬ್ಬ.

‘ಅದ್ಸರಿ, ಇದೇ ರಾಜಗುರು ಎಲೆಕ್ಷನ್ನಿಗೆ ಮುಂಚೆ ಡಿಕೆಗೆ ಅಧಿಕಾರ ತಪ್ಪಿಹೋಗುವ ಮಾತೆ ಇಲ್ಲ, ಅವರ ಜಾತಕದಲ್ಲಿ ಮುಖ್ಯಮಂತ್ರಿ ಆಗುವ ಯೋಗವಿದೆ ಅಂದಿದ್ರಲ್ವಾ?’ ಎಂದ ಸುಬ್ಬ.

‘ಅದ್ಯಾಕಂಗ್ ಹೇಳುದ್ರು ಅಂದ್ರೆ, ಡಿಕೆ ಇತ್ತಿತ್ತಲಾಗಿ ಆ ನೊಣವಿನಕೆರೆ ಅಜ್ಜಯ್ಯನ್ನ ಗಟ್ಟಿಯಾಗಿ ಹಿಡಕಂಬುಟ್ಟು, ಕೆಮ್ಮಕ್ಕೂ, ಕೂರಕ್ಕೂ, ಕಣ್ಬುಡಕ್ಕೂ ಅಜ್ಜಯ್ಯನ್ನೇ ಕೇಳರಂತೆ, ರಾಜಗುರು ಕಡಿಕೆ ಹೋಯ್ತನೇ ಇತ್ತಿಲ್ವಂತೆ, ಅದಕ್ಕೆ ರಾಜಗುರು ಐಡಿಯಾ ಮಾಡಿ, ಹಿಂಗ್ ಹೇಳಿದ್ರಂತೆ’ ಎಂದ ಗುಬ್ಬ.

‘ಅಯ್ಯೋ ನೀನು, ನಮ್ಮ ದೊಡ್ಮನೆ ದೊಡ್ಡಗೌಡ್ರು ಅವ್ರಲ್ಲ… ಅವ್ರಿಗೆ ದಿನಾ ಪೇಪರ್ ಓದೋ ಹುಚ್ಚು, ಬೆಳ್ಬೆಳಗ್ಗೇಲೆ ಡಿಕೆ ಸಿಎಂ ಸುದ್ದಿ ಓದಿ ಶ್ಯಾನೆ ತಲೆಬಿಸಿ ಮಾಡ್ಕಂಡು, ಮನೆ ಜ್ಯೋತಿಷಿ ಕರೆಸಿ ಕೇಳೆಬುಟ್ರಂತೆ, ಅವರು ಕಣ್ಮುಚ್ಕಂಡ್ ಕವಡೆ ಬುಟ್ಟು, ‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ಆ ಬ್ರಹ್ಮ ಬಂದರೂ ತಪ್ಪಿಸುವುದಕ್ಕಾಗುವುದಿಲ್ಲ’ ಅಂದ್ರಂತೆ. ಖುಷಿಯಾದ ಗೌಡ್ರು ಜೇಬಿಗೆ ಕೈಯಾಕದ್ರಂತೆ…’

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಾವೇರಿ ವಿವಾದ, ಬರಗಾಲದಲ್ಲಾದರೂ ರಾಜ್ಯದ ಜನರ ಹಿತ ಕಾಯುವರೇ ಬಿಜೆಪಿ ಸಂಸದರು?

ಸುಬ್ಬನ ಮಾತನ್ನು ಅರ್ಧಕ್ಕೇ ತಡೆದ ಗುಬ್ಬ, ‘ಮುಂದಕ್ಕೇನಾಯ್ತು ಅಂತ ನನ್ಗ್ ಗೊತ್ತು ಬುಡಪ್ಪ’ ಅಂದ.

‘ಏನಾಯ್ತು’ ಅಂದ ಸುಬ್ಬ.

‘ಇನ್ನೇನಾಯ್ತದೆ, ನಮ್ ಗೌಡ್ರು ಹಣಕ್ಕೆ ಆಸೆಪಡರಾ, ಅವರ ಜನಮಾಪಿ ಜೇಬಲ್ಲಿ ದುಡ್ಡಿಟ್ಟೋರಲ್ಲ, ಇನ್ನ ಕೊಡದೆಲ್ಲಿ’ ಎಂದು ಗುಬ್ಬ ಗೌಡರ ಗುಟ್ಟನ್ನು ರಟ್ಟು ಮಾಡಿದ.

‘ಮತ್ತೆ ಅಂತ ಐಕ್ಲಾಸ್ ಸುದ್ದಿ ಹೇಳಿ ಬರಿಗೈಲಿ ಹೋದರೆ… ಜ್ಯೋತಿಷಿಗಳು?’ ಎಂದ ಸುಬ್ಬ.

‘ಅದಕ್ಕೇ ಅಂತಲೇ ಇಲ್ವೇನ್ಲಾ… ಸರವಣ, ಅಂಜನ, ರಮೇಶ್ ಗೌಡ. ಸುಮ್ನೆ ಗೌಡ್ರು ನೋಡುದ್ರೆ ಸಾಕು, ಅವರು ಅರ್ಥ ಮಾಡಿಕೊಂಡು, ಜ್ಯೋತಿಷಿಗಳನ್ನ ಮನಿಗೆ ಬುಟ್ಬತ್ತರೆ ಕಣಲೇ’ ಎಂದ ಗುಬ್ಬ.

‘ಓಹೋ… ಈಗ ನೆನಪಾತ್ ನೋಡು, ಗೌಡ್ರು ಹೇಳಿದ್ನ ಕೇಳಿ ಕುಮಾರಸ್ವಾಮಿ ಭಾಷಣದಲ್ಲಿ, ಬರೆದಿಟ್ಟುಕೊಳ್ಳಿ, ಮೇ ಹದಿನೆಂಟರಂದು ಮುಖ್ಯಮಂತ್ರಿಯಾಗಿ ನಾನು ಪ್ರಮಾಣವಚನ ಸ್ವೀಕರಿಸಲಿದ್ದೇನೆ ಅಂದಿದ್ರಲ್ವಾ?’ ಎಂದ ಸುಬ್ಬ.

‘ಗೌಡ್ರು ಕುಟುಂಬ ಅಂದ್ರೆ ಏನ್ ತಿಳಕಂಡಿದಿಯಾ, ಮಹಾನ್ ದೈವಭಕ್ತ ಕುಟುಂಬ. ಪೂಜೆ, ಹೋಮ, ಹವನ ಮಾಡದ್ರಲ್ಲಿ ಎತ್ತಿದ ಕೈ. ಭವಿಷ್ಯ, ಜ್ಯೋತಿಷ್ಯಗಳನ್ನು ನಂಬುವವರು. ದೇವವಾಕ್ಯ ಪರಿಪಾಲಕರು’ ಅಂದ ಗುಬ್ಬ.

‘ಜೊತಿಗೆ ಮಾಟ, ಮಂತ್ರ, ತಂತ್ರ ಎಲ್ಲ ಗೊತ್ತಂತಲೋ’ ಎಂದ ಸುಬ್ಬ.

‘ಥೂ ಥೂ ಥೂ… ಗೌಡ್ರ ಫ್ಯಾಮಿಲಿ ಕಂಡ್ರೆ ಆಗದವರು ಅದನ್ನ ಹಬ್ಬಸವ್ರೆ ಕಣಲೇ…’ ಎಂದ ಗುಬ್ಬ.

‘ಈ ಕುಮಾರಸ್ವಾಮಿ ಕಂಡ್ರಾಗದವರು ‘ಅದೊಂದು’ ಗುಣಾನ ಯಾಕ್ ಹಬ್ಬಿಸ್ತಾ ಇರಬಾರದು?’ ಎಂದ ಸುಬ್ಬ.

‘ನೋಡು ಸುಬ್ಬ, ಈ ರಾಜಕಾರಣಿಗಳು ಮತ್ತು ಜ್ಯೋತಿಷಿಗಳು ಇದಾರಲ್ಲ- ಅವರಿಂದ ಇವರು, ಇವರಿಂದ ಅವರು ಬದುಕಿ ಬಾಳುವ ಪರಾವಲಂಬಿ ಜೀವಿಗಳು. ಇಬ್ಬರೂ ಸುಳ್ಳಿನ ಕುಲಕ್ಕೆ ಸೇರಿದವರು. ಇಬ್ಬರೂ ಹೇಳುವುದು ಸುಳ್ಳು ಎಂದು ಗೊತ್ತಿದ್ದರೂ, ಸುಳ್ಳನ್ನೇ ಸತ್ಯವೆಂದು ಸಾರುವವರು. ಸತ್ಯವನ್ನು ಸಮಾಧಿ ಮಾಡಿ ಸುಳ್ಳಿನ ಅರಮನೆ ಕಟ್ಟಿಕೊಂಡು ಸುಖ-ಸಂಪತ್ತಿನಿಂದ ಬದುಕುತ್ತಿರುವವರು’ ಎಂದ ಗುಬ್ಬ.

‘ಹಂಗಂತಿಯಾ, ಇಬ್ಬರೂ ಸುಳ್ಳು ಹೇಳ್ತರೆ ಅಂತಿಯಾ, ಇಬ್ಬರೂ ನಮಿಗೆ ಟೋಪಿ ಹಾಕ್ತರೆ ಅಂತಿಯಾ’ ಎಂದ ಸುಬ್ಬ.

‘ಈಗ ನೋಡು, ಡೀಕೆ ಮುಖ್ಯಮಂತ್ರಿ ಆಗ್ತರೆ ಅಂದಿದ್ ಯಾರು, ರಾಜಗುರು. ಯಾಕಂದ್ರು, ನಮ್ ಕಡೀಕ್ ಬತ್ತಿಲ್ಲ ಬರ್‍ಲಿ ಅಂತಂದ್ರು. ರಾಜಗುರು ತಕ್ಕೋದ ಡಿಕೆ ಏನ್ಮಾಡ್ದ, ಈ ಗುರುಗಳ್ನ ಹಿಡಕ್ಕಂಡೇ ಏನಾದ್ರು ಮಾಡಬೇಕು ಅಂತ, ಈ ಕುಮಾರಸ್ವಾಮಿ ನಮ್ಗೆ ಉಣ್ಣಕ್ಕೂ ಬುಡ್ತಿಲ್ಲ ತಿನ್ನಕ್ಕೂ ಬುಡ್ತಿಲ್ಲ ಏನಾರ ಮಾಡಬೇಕಲ್ಲ ಗುರುಗಳೇ ಅಂದ. ಅದಕ್ಕೆ ಗುರುಗಳು ಏನಂದ್ರು, ಮುಳ್ಳನ್ನ ಮುಳ್ಳಿನಿಂದಲೇ ತೆಗೀಬೇಕು ಅಂದ್ರು’ ಎಂದ ಗುಬ್ಬ.

‘ನನಗೇನು ತಿಳಿತಿಲ್ಲಪ್ಪ’ ಎಂದ ಸುಬ್ಬ.

‘ಅಯ್ಯೋ ಮಂಕೇ, ಕುಮಾರಸ್ವಾಮಿ ಯಾರಿಗ್ ಹೆದರಕತ್ತರೆ? ಅವರನೆಂಗ್ ಬೀಳಿಸ್ಕಬೇಕೇಳು’ ಎಂದ ಗುಬ್ಬ.

‘2006ರಲ್ಲೇ ಬಿದ್ದಾಯ್ತಲ್ಲ, ದೊಡ್ ಗೌಡ್ತು, ಅನಿತಕ್ಕ ಒಪ್ಕೊಂಡಿದ್ದೂ ಆಯ್ತಲ್ಲ, ಇನ್ನೇನು?’ ಎಂದ ಸುಬ್ಬ.

‘ಅದ್ಕೆ ನಿಂಗೇಳದು ಬುದ್ದಿಲ್ಲ ಅಂತ, ಹನಿ ಟ್ರ್ಯಾಪ್ ಹಳೇದು, ಗುರು ಟ್ರ್ಯಾಪ್ ಹೊಸ್ದು. ಜ್ಯೋತಿಷಿಗಳ ಮಾತು ಕೇಳೋ ಕುಮಾರಸ್ವಾಮಿಗೆ, ಅವರ ಕಡಿಂದ್ಲೆ ಹೇಳ್ಸುದ್ರು, ಅದೇ ‘ಅದೊಂದು’ ಗುಣ. ಅವರ ಹನ್ನೊಂದನೇ ಮನೆಯಲ್ಲಿ ಗುರು ಇದ್ದಾನೆ. ಅದು ಅವರಿಗೆ ಶುಭಕಾರಕ. ಈ ಸಂದರ್ಭದಲ್ಲಿ ಅವರು ಯಾವುದೇ ಕಾರ್ಯಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ. ಹಾಗಾಗಿ, ಅವರು ಪಕ್ಷ ಸಂಘಟನೆಗೆ ಒತ್ತು ನೀಡಿದರೆ ಅವರಿಗೆ ಮುಂದೆ ಒಳ್ಳೆಯದಾಗುತ್ತದೆ ಎಂದು ಹೇಳಿಸಿದರು. ಉಣ್ಣದು-ತಿನ್ನದುರ ಬಗ್ಗೆ ಮಾತಾಡ್ದೆ, ಸುಮ್ನೆ ಪಕ್ಷ ಕಟ್ಟಿ ಅಂತಂದ್ರು… ನೋಡು, ಅವರು ಅಂಗೇಳ್ತಿದ್ದಂಗೇ ವಿಧಾನಸೌದ್ಧಲಿ ಅಕ್ಕ-ಪಕ್ಕ ಕೂತ್ಕೊಂಡು, ಕೈ ಕುಲುಕಂಡು, ಕುಲು ಕುಲು ಅಂತ ನಗಾಡ್ಕಂಡು, ಸರ್ಕಾರಕ್ಕೆ ನಮ್ ಸಂಪೂರ್ಣ ಬೆಂಬಲ ಅಂತೇಳ್ ಬರಲಿಲ್ವಾ’ ಅಂದ ಗುಬ್ಬ.

‘ನೀನ್ ಏನೇ ಹೇಳಪ್ಪಾ, ಇಲ್ಲಿವರ್‍ಗೂ ಈ ಜ್ಯೋತಿಷಿಗಳು, ರಾಜಕಾರಣಿಗಳು ಮಾತ್ರ ಸುಳ್ ಹೇಳ್ತರೆ, ಟೋಪಿ ಹಾಕ್ತರೆ ಅಂತಿದ್ದೋ, ಈ ಪೇಪರ್ ನೋರು ಹಂಗೇ ಆಗೋದ್ರಲ್ಲೋ…’ ಅಂದ ಸುಬ್ಬ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X