ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ಪಿತೂರಿಯ ಭಾಗವಾಗಿ ನರೇಂದ್ರ ಮೋದಿ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯನ್ನು(ಆರ್‌ಟಿಐ) ಹಂತಹಂತವಾಗಿ ಕೊಲ್ಲುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಆರ್‌ಟಿಐ ವೆಬ್‌ಸೈಟ್‌ನಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಕಣ್ಮರೆಯಾದ ಬಗ್ಗೆ ಮಾಧ್ಯಮವೊಂದರ ವರದಿಯ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಖರ್ಗೆಯವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೋದಿ ಸರ್ಕಾರವು ಆರ್‌ಟಿಐ ಕಾಯ್ದೆಯನ್ನು ಹಂತಹಂತವಾಗಿ ಕೊಲ್ಲುತ್ತಿದೆ. ಇದು ಕೇವಲ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಯಲ್ಲ, ಆದರೆ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ಪಿತೂರಿಯ ಮತ್ತೊಂದು ಹೆಜ್ಜೆ” ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಅಣಕ | ಹನಿ ಟ್ರ್ಯಾಪ್ ಎಲ್ಲ ಹಳೇದು, ಈಗ ಏನಿದ್ರು ಗುರು ಟ್ರ್ಯಾಪ್!
ದತ್ತಾಂಶ ಸಂರಕ್ಷಣಾ ಕಾನೂನಿನ ನೆಪದಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವುದು ನಿರಂಕುಶ ಸರ್ಕಾರದಿಂದ ಮಾಹಿತಿ ಹಕ್ಕಿನ ಮೇಲೆ ಹೇಡಿತನದ ದಾಳಿಯಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಅಧಿವೇಶನದಲ್ಲಿ ಅಂಗೀಕರಿಸಲಾದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯು ಆರ್‌ಟಿಐ ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಹಲವಾರು ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳು ಟೀಕೆ ವ್ಯಕ್ತಪಡಿಸಿವೆ.
“ಮೋದಿ ಸರ್ಕಾರದ ಆಡಳಿತದ ಬಗ್ಗೆ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೂ ನಾಚಿಕೆಯಿಲ್ಲದೆ ಪಾರದರ್ಶಕ ಆಡಳಿತದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ” ಎಂದು ಖರ್ಗೆ ಆರೋಪಿಸಿದರು.