ರೈತರಿಗೆ ಬರಗಾಲದ ದಿಗಿಲು; ಅಧಿಕಾರಿಗಳಿಗೆ ಪರಿಹಾರದ ಫಸಲು!

Date:

Advertisements
ಬರಗಾಲ ಬಂದರೆ, ಖುಷಿ ಪಡುವ ಏಕೈಕ ಜನವರ್ಗವೆಂದರೆ, ಅದು ಭ್ರಷ್ಟ ಅಧಿಕಾರಿಗಳದ್ದು. ಲಂಚ ಹೊಡೆಯಲು ಅವರಿಗೆ ಬರಗಾಲ ಅತ್ಯಂತ ಸೂಕ್ತ ಕಾಲ. ಬರ ಪರಿಹಾರವಾಗಿ ಬರುವ ಕೋಟ್ಯಂತರ ರೂಪಾಯಿಯನ್ನು ನುಂಗಿ ನೊಣೆಯಲು ಅವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಬರಗಾಲದ ಪರಿಸ್ಥಿತಿ ಅಸಹನೀಯವಾಗುವುದು, ಸಾವು ನೋವು ಹೆಚ್ಚಾಗುವುದು ಇಂಥ ಭ್ರಷ್ಟರಿಂದ. ಬರದಂಥ ಪ್ರಾಕೃತಿಕ ವಿಕೋಪವನ್ನು ಅವರು ಮಾನವ ನಿರ್ಮಿತ ದುರಂತವನ್ನಾಗಿ ಮಾರ್ಪಡಿಸುತ್ತಾರೆ.

ರಾಜ್ಯದಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಆಗಸ್ಟ್ ಅಂತ್ಯವಾಗುತ್ತಾ ಬಂದರೂ ಇನ್ನೂ ಅನೇಕ ತಾಲ್ಲುಕುಗಳಲ್ಲಿ ಬಿತ್ತನೆಯೇ ಪೂರ್ಣಗೊಂಡಿಲ್ಲ. ಮುಂದಿನ ದಿನಗಳಲ್ಲಿ ಕೂಡ ಮಳೆ ಬೀಳುವ ಸೂಚನೆಗಳಿಲ್ಲ. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪರೂಪವಾಗಿದ್ದ ತೀವ್ರ ಬರಗಾಲದ ಸೂಚನೆಯನ್ನು ತಜ್ಞರು ನೀಡಿದ್ದಾರೆ. 16ಕ್ಕೂ ಹೆಚ್ಚು ಜಿಲ್ಲೆಗಳ ಸುಮಾರು 120 ತಾಲ್ಲೂಕುಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರೇ ತಿಳಿಸಿದ್ದಾರೆ.

ರಾಜ್ಯದಲ್ಲಿ ಎರಡು ದಶಕಗಳಿಂದ ಬರ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. 2011 ರಲ್ಲಿ123 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿತ್ತು. ಅದೇ ರೀತಿ 2012ರಲ್ಲಿ 157 ತಾಲ್ಲೂಕು, 2013ರಲ್ಲಿ 125 ತಾಲ್ಲೂಕು, 2014ರಲ್ಲಿ 35 ತಾಲ್ಲೂಕು, 2015ರಲ್ಲಿ 136 ತಾಲ್ಲೂಕು, 2016ರಲ್ಲಿ 110 ತಾಲ್ಲೂಕು, 2017ರಲ್ಲಿ 162 ತಾಲ್ಲೂಕುಗಳನ್ನು ಹಾಗೂ 2018ರಲ್ಲಿ 156 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇನ್ನೊಂದು ಕಡೆ 2005, 2009, 2018 ಮತ್ತು 2019ರಲ್ಲಿ ರಾಜ್ಯದ ಕೆಲವೆಡೆ ಪ್ರವಾಹವುಂಟಾಗಿತ್ತು. ಹೀಗೆ ಒಂದಿಲ್ಲೊಂದು ಕಾರಣಕ್ಕೆ ರಾಜ್ಯದ ಜನ, ಅದರಲ್ಲೂ ಮುಖ್ಯವಾಗಿ ರೈತಾಪಿ ವರ್ಗ, ಸಂಕಷ್ಟ ಅನುಭವಿಸುತ್ತಿದೆ.

ಈ ಬಾರಿ ಬರ ಘೋಷಣೆಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿ ಬೆಳೆ ಸಮೀಕ್ಷೆ ನಡೆಸಲು ಸರ್ಕಾರವು ಅಧಿಕಾರಿಗಳಿಗೆ ಸೂಚಿಸಿದೆ. ಅದಕ್ಕೆ ತಕ್ಕಂತೆ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಬೆಳೆ ಸಮೀಕ್ಷೆ ಕೈಗೊಂಡಿವೆ.

Advertisements

ಬರ ಬರಗಾಲದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಅದರ ಪ್ರಕಾರ, ಸತತ ಮೂರು ವಾರ ಮಳೆ ಬಾರದಿದ್ದರೆ ಮತ್ತು ಮಳೆ ಕೊರತೆ ಶೇ.60ರಷ್ಟಿದ್ದರೆ ಮಾತ್ರ ಬರಗಾಲ ಎಂದು ಘೋಷಿಸಬಹುದಾಗಿದೆ. ಮಾರ್ಗಸೂಚಿಯನ್ನು ಸರಳೀಕರಿಸಿ, ಮಳೆ ಕೊರತೆ ಪ್ರಮಾಣವನ್ನು ಶೇ.30ಕ್ಕೆ ಇಳಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದು ಸವಾಲಿನ ಕಾಲ. ಬರಗಾಲದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರದಿಂದ ನೆರವು ನಿರೀಕ್ಷಿಸುತ್ತಿದೆ. ಅದರ ಜೊತೆಗೆ ತಾನೂ ಕೂಡ ಅಗತ್ಯ ಸಂಪನ್ಮೂಲಗಳನ್ನು ಹೊಂದಿಸಲು ಮುಂದಾಗಿದೆ.

ಸರ್ಕಾರ ಏನೋ ಮಾಡಿ, ಸಂಪನ್ಮೂಲ ಹೊಂದಿಸಿ, ಜನರಿಗೆ ಬರ ಪರಿಹಾರ ವಿತರಿಸಲು, ಜನರ ಬವಣೆ ನೀಗಲು ಮುಂದಾಗುತ್ತದೆ. ಆದರೆ, ಸರ್ಕಾರದ ನೆರವು ನಿಜಕ್ಕೂ ಜನರ ಕೈ ಸೇರುತ್ತಾ ಎನ್ನುವ ಅನುಮಾನ, ಆತಂಕ ಇದ್ದೇ ಇದೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಅವರ ಅಕ್ರಮ ಆಸ್ತಿಪಾಸ್ತಿಯ ಪ್ರಮಾಣವನ್ನು ನೋಡಿದರೆ, ಸೂಕ್ಷ್ಮಜ್ಞರ ಎದೆ ಒಡೆಯುತ್ತದೆ.

ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಗಿಟ್ಟಿಸಿ, ನಂತರ ಬೆಂಗಳೂರಿನ ಕೆ ಆರ್ ಪುರದಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ಅಜಿತ್ ರೈ ಆಸ್ತಿ 500 ಕೋಟಿಗೂ ಹೆಚ್ಚು. ಅದೇ ರೀತಿ ಬೀದರ್‌ನ ಒಬ್ಬ ಕಾನ್ಸ್‌ಟೆಬಲ್ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಕೆ ಆರ್ ಪುರದ ಭೂಮಾಪನ ಇಲಾಖೆ ಅಧೀಕ್ಷಕನ ಬಳಿ ಹಲವು ನಿವೇಶನಗಳು, ಹತ್ತಾರು ಎಕರೆ ಜಮೀನು, ಮನೆಗಳ ಜೊತೆಗೆ ನಾಲ್ಕು ಅಬಕಾರಿ ಲೈಸೆನ್ಸ್‌ ಕೂಡ ಸಿಕ್ಕಿವೆ. ಇವು ಕೆಲವು ನಿದರ್ಶನಗಳು ಮಾತ್ರ. ರಾಜ್ಯದಲ್ಲಿ ಇಂಥ ಭ್ರಷ್ಟ ಅಧಿಕಾರಿಗಳ ಸಂಖ್ಯೆ ತುಂಬಾ ದೊಡ್ಡ ಪ್ರಮಾಣದಲ್ಲಿದೆ. ಅದರಲ್ಲೂ ಕಂದಾಯ ಇಲಾಖೆ ಭ್ರಷ್ಟರ ಪಾಲಿನ ಸ್ವರ್ಗವಾಗಿದೆ.    

ರೈತರ ದಿನನಿತ್ಯದ ಬದುಕಿಗೆ ಹೆಚ್ಚು ಹತ್ತಿರವಿರುವ ಇಲಾಖೆಗಳೆಂದರೆ, ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. ಈ ಎರಡೂ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳ ಕೈ ಬೆಚ್ಚಗೆ ಮಾಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ಒಂದು ಪಹಣಿ ತಿದ್ದುಪಡಿಗಾಗಿ ಕೃಷಿ ಕೆಲಸ ಬಿಟ್ಟು ವರ್ಷಗಟ್ಟಲೇ ಕಚೇರಿ ಅಲೆಯಬೇಕಾದ, ಸಾವಿರಾರು ರೂಪಾಯಿ ಲಂಚ ನೀಡಬೇಕಾದ ಸ್ಥಿತಿ ಕಂದಾಯ ಇಲಾಖೆಯಲ್ಲಿದೆ. ತಮ್ಮ ಕಷ್ಟದ ಕೆಲಸಕ್ಕೆ ಅತ್ಯಂತ ಕಡಿಮೆ ಸಂಬಳ ಪಡೆಯುವ ಪೌರ ಕಾರ್ಮಿಕರು ಕೂಡ ತಮ್ಮ ಸಂಬಳಕ್ಕಾಗಿ 15 ತಿಂಗಳವರೆಗೆ  ಕಾಯಬೇಕಾದ ಹಾಗೂ ಅದಕ್ಕಾಗಿ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಬೇಕಾದ ಹೀನ ಸ್ಥಿತಿ ಪಂಚಾಯತ್ ರಾಜ್ ಇಲಾಖೆಯಲ್ಲಿದೆ. ಬರ ಇರಲಿ, ನೆರೆ ಇರಲಿ, ಯಾವುದೇ ಸಂಕಷ್ಟದ, ಸಂಕಟದ ಪರಿಸ್ಥಿತಿ ಇರಲಿ, ಲಂಚ ಕೊಡದಿದ್ದರೆ ಈ ಇಲಾಖೆಗಳಲ್ಲಿ ಕೆಲಸವೇ ನಡೆಯುವುದಿಲ್ಲ. ಆದರೆ, ಬರ ಪರಿಹಾರ ಕಾಮಗಾರಿ ಕೈಗೊಂಡರೆ ಹೆಚ್ಚಿನ ಕೆಲಸ ನಿರ್ವಹಿಸಬೇಕಾಗಿ ಬರುವುದು ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇಲಾಖೆಗಳೇ.

ಭ್ರಷ್ಟಾಚಾರರಾಜ್ಯದಲ್ಲಿ ಈಗಾಗಲೇ ಬರಗಾಲದ ಪರಿಣಾಮಗಳು ಕಾಣಿಸಿಕೊಂಡಿವೆ. ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಬಂದಿದೆ. ಮಳೆಗಾಲವಾದರೂ ಬೇಸಿಗೆ ಎಂಬಂತೆ ಬಿಸಿಲು ಸುಡುತ್ತಿದೆ. 18 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ, 147 ಗ್ರಾಮಗಳಿಗೆ ಬಾಡಿಗೆ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜನರಿಗಷ್ಟೇ ಕುಡಿಯುವ ನೀರು ಸಿಕ್ಕರೆ ಸಾಲದು, ಜಾನುವಾರುಗಳಿಗೂ ಕುಡಿಯಲು ನೀರು ಬೇಕು, ಅವು ತಿನ್ನಲು ಮೇವು ಒದಗಿಸಬೇಕು. ಬರಗಾಲದಲ್ಲಿ ಜಾನುವಾರುಗಳದ್ದು ಅತ್ಯಂತ ದಾರುಣ ಪರಿಸ್ಥಿತಿ.                                  

ಬರಗಾಲ ಬಂದರೆ, ಖುಷಿ ಪಡುವ ಏಕೈಕ ಜನವರ್ಗವೆಂದರೆ, ಅದು ಭ್ರಷ್ಟ ಅಧಿಕಾರಿಗಳದ್ದು. ಲಂಚ ಹೊಡೆಯಲು ಅವರಿಗೆ ಬರಗಾಲ ಅತ್ಯಂತ ಸೂಕ್ತ ಕಾಲ. ಬರ ಪರಿಹಾರವಾಗಿ ಬರುವ ಕೋಟ್ಯಂತರ ರೂಪಾಯಿಯನ್ನು ನುಂಗಿ ನೊಣೆಯಲು ಅವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಅವರಲ್ಲಿನ ಮನುಷ್ಯ, ಮಾನವೀಯತೆ ಸತ್ತು ಹಣಕ್ಕಾಗಿ ಸದಾ ನಾಲಗೆ ಚಾಚಿರುವ ರಾಕ್ಷಸ ಮಾತ್ರ ಜೀವಂತವಿರುತ್ತಾನೆ. ಬರಗಾಲದ ಸ್ಥಿತಿ ಅಸಹನೀಯವಾಗುವುದು, ಸಾವು ನೋವು ಹೆಚ್ಚಾಗುವುದು ಇಂಥ ಭ್ರಷ್ಟರಿಂದ. ಬರದಂಥ ಪ್ರಾಕೃತಿಕ ವಿಕೋಪವನ್ನು ಅವರು ಮಾನವ ನಿರ್ಮಿತ ದುರಂತವನ್ನಾಗಿ ಮಾರ್ಪಡಿಸುತ್ತಾರೆ.

ಭ್ರಷ್ಟಾಚಾರ ಎನ್ನುವುದು ಮೇಲಿನಿಂದ ಕೆಳಗಿನವರೆಗೆ ಹಬ್ಬಿರುವ ಒಂದು ಜಾಲ. ಮಂತ್ರಿ, ಶಾಸಕರಿಂದ ಆರಂಭವಾಗಿ ಸಣ್ಣ ಕಚೇರಿಯ ಕ್ಲರ್ಕ್‌ವರೆಗೆ ಅದರ ಜಾಲ ಹಬ್ಬಿರುತ್ತದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿತ್ತು ಎನ್ನುವ ಆರೋಪಗಳಿದ್ದವು; ಮಂತ್ರಿಗಳು ದೊಡ್ಡ ಪ್ರಮಾಣದಲ್ಲಿ ಪರ್ಸೆಂಟೇಜ್‌ಗೆ ಒತ್ತಾಯಿಸುತ್ತಿದ್ದರು ಎಂದು ಬಾಧಿತರೇ ಬೀದಿಗಿಳಿದಿದ್ದರು. ಅದು ಕೊನೆಗೆ ಅವರ ಸರ್ಕಾರದ ಪತನಕ್ಕೂ ಕಾರಣವಾಯಿತು. ಅದು ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಪಾಠವಾಗಬೇಕಿದೆ.

ಈ ಸುದ್ದಿ ಓದಿದ್ದೀರಾ: ʼಈ ದಿನʼ ವಿಶೇಷ ಸಂದರ್ಶನ ಭಾಗ-1 | ‘ಮಣಿಪುರವನ್ನು ಒಡೆದರೆ, ನಾವು ಭಾರತವನ್ನೇ ಒಡೆಯುತ್ತೇವೆ’- ತೌನೋಜಮ್ ಬೃಂದಾ

ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಜಾರಿ ಮಾಡುವ ಮೂಲಕ ಉತ್ತಮ ಆರಂಭ ಮಾಡಿದೆ. ಈಗ ಬರಗಾಲ ಬಂದಿರುವುದು, ಸರ್ಕಾರಕ್ಕೆ ಸವಾಲಾಗಿದೆ. ಆರಂಭದಲ್ಲೇ ಹಲವು ಕಡೆ ಕಲುಷಿತ ನೀರು ಕುಡಿದು ಹಲವರು ಸಾವನ್ನಪ್ಪಿದ ಪ್ರಕರಣಗಳು ನಡೆದಿರುವುದು ಸರ್ಕಾರಕ್ಕೆ ಬರ ಕಾಮಗಾರಿ ನಿರ್ವಹಣೆಯ ವಿಚಾರದಲ್ಲಿ ಒಂದು ಎಚ್ಚರಿಕೆಯಾಗಬೇಕಿದೆ.  

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಅಧಿಕಾರಗಳಿಗೆ ಚುರುಕು ಮುಟ್ಟಿಸಿ, ಅವರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ. ಸರ್ಕಾರ ಕೊಡುವ ಪ್ರತಿ ಪೈಸೆ ಪರಿಹಾರ ಫಲಾನುಭವಿಗಳ ಕೈ ಸೇರುವಂತೆ ನೋಡಿಕೊಳ್ಳಬೇಕಿದೆ. ಮುಖ್ಯವಾಗಿ ತನ್ನ ಮಂತ್ರಿಗಳು, ಶಾಸಕರು ಕಮಿಷನ್‌ ವ್ಯವಹಾರ ನಡೆಸದಂತೆ ತಡೆಯಬೇಕು. ಹಾಗಿದ್ದಾಗ ಮಾತ್ರ ಅವರಿಗೆ ಅಧಿಕಾರಿಗಳ ಭ್ರಷ್ಟಾಚಾರ ತಡೆಯಲು ಸಾಧ್ಯವಾಗುತ್ತದೆ. ಈ ಬರ ಪರಿಸ್ಥಿತಿಯನ್ನು ಸರ್ಕಾರ ಹೇಗೆ ನಿಭಾಯಿಸಲಿದೆ ಎನ್ನುವುದರ ಮೇಲೆ ಸರ್ಕಾರದ ಹಾಗೂ ರಾಜ್ಯದ ಮುಂದಿನ ಯಶಸ್ಸು ನಿಂತಿದೆ.       

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ದಾವಣಗೆರೆ | ದಲಿತ ಸಂಘಟನೆಗಳ ಒಳಮೀಸಲಾತಿ ಪ್ರತಿಭಟನೆ; ಎಸಿ ಕಛೇರಿಗೆ ಬೀಗ

"ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಒಂದು ವರ್ಷವಾದರೂ ಒಳಮೀಸಲಾತಿಯನ್ನು ಜಾರಿ ಮಾಡುವಲ್ಲಿ...

ಕರ್ನಾಟಕದಲ್ಲಿ ಒಂದು ವಾರ ಭಾರೀ ಮಳೆ: ಕರಾವಳಿ, ಒಳನಾಡಿನ ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್

ಕರ್ನಾಟಕದಾದ್ಯಂತ ಆಗಸ್ಟ್ 17ರಿಂದ 21ರವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ...

Download Eedina App Android / iOS

X