ಚಂದ್ರಯಾನ–3 ರಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳಿಗೆ ಕಳೆದ 17 ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಈ ಕುರಿತು ಟ್ವಿಟರ್‌ನಲ್ಲಿ ಮಾಧ್ಯಮವೊಂದರ ವರದಿಯ ಚಿತ್ರವನ್ನು ಹಂಚಿಕೊಂಡು ಪೋಸ್ಟ್ ಮಾಡಿರುವ ಅವರು, “ರಾಂಚಿ ಮೂಲದ ಹಿಂದೂಸ್ತಾನ್ ಎಂಜಿನಿಯರಿಂಗ್ ಕಾರ್ಪೊರೇಷನ್ (ಎಚ್‌ಇಸಿ) ಚಂದ್ರಯಾನ–3 ರ ಉಡ್ಡಯನ ವಾಹನ ತಯಾರಿಸಿದ್ದು, ಇದರಲ್ಲಿ ಭಾಗಿಯಾದ ಎಂಜಿನಿಯರ್‌ಗಳಿಗೆ 17 ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ” ಎಂದು ಆರೋಪಿಸಿದ್ದಾರೆ.
“ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ಮುಂದಾಳತ್ವದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದೇವೆ. ಸೋಮನಾಥ್ ಮತ್ತು ಅವರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆದರೆ ವಂಚನೆ ತೋರಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು” ಎಂದು ವೇಣುಗೋಪಾಲ್ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆರ್‌ಟಿಐ ಕಾಯ್ದೆ ಕೊಲ್ಲುತ್ತಿರುವ ಮೋದಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ
ಲ್ಯಾಂಡಿಂಗ್ ನಂತರ ನೀವು ಪರದೆಯ ಮೇಲೆ ತ್ವರಿತವಾಗಿ ಬಂದು ಕ್ರೆಡಿಟ್ ತೆಗೆದುಕೊಂಡಿದ್ದೀರಿ. ಆದರೆ ವಿಜ್ಞಾನಿಗಳು ಮತ್ತು ಇಸ್ರೋವನ್ನು ಬೆಂಬಲಿಸುವಲ್ಲಿ ನಿಮ್ಮ ಸರ್ಕಾರವು ಏಕೆ ವಿಫಲವಾಗಿದೆ ಎಂದು ಪ್ರಶ್ನಿಸಿದ್ದಾರೆ.
ಚಂದ್ರಯಾನ 3ರಲ್ಲಿ ಕೆಲಸ ಮಾಡಿದ ಹೆಚ್‌ಇಸಿ ಇಂಜಿನಿಯರ್‌ಗಳು ಕಳೆದ 17 ತಿಂಗಳಿನಿಂದ ಸಂಬಳವನ್ನು ಏಕೆ ಸ್ವೀಕರಿಸಲಿಲ್ಲ. ಚಂದ್ರಯಾನ–3ರ ಬಜೆಟ್‌ನ್ನು ಶೇ. 32ರಷ್ಟು ಕಡಿತಗೊಳಿಸಿದ್ದೇಕೆ ಎಂದು ಪ್ರಶ್ನಿಸಿರುವ ಅವರು, ಇವರೆಲ್ಲ ದೇಶಕ್ಕೆ ಕೀರ್ತಿ ತಂದವರು. ವಿಶ್ವದರ್ಜೆಯ ಬಾಹ್ಯಾಕಾಶ ಯೋಜನೆಯನ್ನು ಮಾಡಿದ್ದಾರೆ. ಆದರೆ ಅವರ ಪ್ರತಿಭೆ ಮತ್ತು ಶ್ರಮದ ಬಗ್ಗೆ ನಿಮಗೆ ಯಾವುದೇ ಗೌರವವಿಲ್ಲ” ಎಂದು ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ.
ಇಸ್ರೋ ವಿಜ್ಞಾನಿಗಳು 17 ತಿಂಗಳಿನಿಂದ ತಮ್ಮ ಸಂಬಳವನ್ನು ಪಡೆದಿಲ್ಲ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಆರೋಪಿಸಿದ್ದರು. ಇಸ್ರೋ ವಿಜ್ಞಾನಿಗಳ ವೇತನದ ಬಗ್ಗೆ ಪ್ರಧಾನಿ ಗಮನಿಸಬೇಕು ಎಂದು ಹೇಳಿದ್ದರು.