ನಮ್ಮ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ ಎಂದು ಶುಕ್ರವಾರ(ಆಗಸ್ಟ್ 25) ತಿಳಿಸಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬಂಡಾಯವನ್ನು ಕೇವಲ “ವಿಭಿನ್ನ ನಿಲುವು” ಎಂದು ತಿಳಿಸಿದ್ದಾರೆ.
ಕೊಲ್ಹಾಪುರಕ್ಕೆ ಭೇಟಿ ನೀಡುವ ಮುನ್ನ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, ಅಜಿತ್ ಪವಾರ್ ನಮ್ಮ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ರಾಜಕೀಯ ಪಕ್ಷದಲ್ಲಿ ಒಡಕು ಎಂದರೆ ಏನು? ಒಂದು ಪಕ್ಷದಲ್ಲಿ ದೊಡ್ಡ ಗುಂಪು ರಾಷ್ಟ್ರೀಯ ಮಟ್ಟದಲ್ಲಿ ಬೇರ್ಪಟ್ಟಾಗ ಒಡಕು ಉಂಟಾಗುತ್ತದೆ. ಆದರೆ ಇಲ್ಲಿ ಅಂತಹದ್ದೇನೂ ನಡೆದಿಲ್ಲ ಎಂದು ತಿಳಿಸಿದರು.
“ಕೆಲವು ನಾಯಕರು ವಿಭಿನ್ನ ನಿಲುವು ತೆಗೆದುಕೊಂಡರೆ ಅದನ್ನು ವಿಭಜನೆ ಎಂದು ಕರೆಯಲಾಗುವುದಿಲ್ಲ. ಅವರು ಪ್ರಜಾಪ್ರಭುತ್ವದಲ್ಲಿ ಹಾಗೆ ಮಾಡಬಹುದು. ಸದ್ಯ ಅವರು ಪಕ್ಷಕ್ಕೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ನಾವು ವಿಧಾನಸಭಾ ಸ್ಪೀಕರ್ಗೆ ದೂರು ನೀಡಿದ್ದೇವೆ ಮತ್ತು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಐಪಿಸಿ, ಸಿಆರ್ಪಿಸಿ ಕಾಯ್ದೆಗಳಿಗೆ ಹಿಂದಿ ಪದ ಬಳಕೆ ಸಂವಿಧಾನ ವಿರೋಧಿ: ಮದ್ರಾಸ್ ಬಾರ್ ಅಸೋಸಿಯೇಷನ್ ಆಕ್ಷೇಪ
ಜುಲೈ 2 ರಂದು ಅಜಿತ್ ಪವಾರ್ ಮತ್ತು ಇತರ ಎಂಟು ಎನ್ಸಿಪಿ ಶಾಸಕರು ಪಕ್ಷದ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ಮಹಾರಾಷ್ಟ್ರದಲ್ಲಿ ಶಿವಸೇನೆ – ಬಿಜೆಪಿ ಸರ್ಕಾರವನ್ನು ಸೇರಿದರು. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಇತರ ಎನ್ಸಿಪಿ ಶಾಸಕರು ಸಚಿವರಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ವಿರುದ್ಧ ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ಸಮೀಕ್ಷೆಯೊಂದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶರದ್ ಪವಾರ್, “ನಾನು ಇನ್ನೂ ಸಮೀಕ್ಷೆಯನ್ನು ನೋಡಿಲ್ಲ. ಆದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಂವಿಎ ಮಹಾರಾಷ್ಟ್ರದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುತ್ತದೆ” ಎಂಬ ಭರವಸೆ ನೀಡಿದರು.
ಪವಾರ್ ಅವರು ಪಶ್ಚಿಮ ಮಹಾರಾಷ್ಟ್ರದ ತಮ್ಮ ಹಿಂದಿನ ಭದ್ರಕೋಟೆಯಾದ ಕೊಲ್ಲಾಪುರದಲ್ಲಿ ರ್ಯಾಲಿ ನಡೆಸಲಿದ್ದಾರೆ.