ತೊಗರಿ ಬೆಳೆಗಾರರ ಹತ್ತಿರ ತೊಗರಿ ಇಲ್ಲದ ಸಮಯದಲ್ಲಿ ಬೆಲೆ ಗಗನಕ್ಕೇರಿದರೆ ತೊಗರಿ ಬೆಳೆಗಾರರಿಗೆ ಏನು ಲಾಭ? ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿದ್ದು, “ಬೆಲೆ ಹೆಚ್ಚಳವಾಗುವುದರಿಂದ ಕೇವಲ ವ್ಯಾಪಾರಸ್ಥರಿಗೆ ಮತ್ತು ಬಂಡವಾಳಶಾಹಿಗಳಿಗೆ, ಅದಾನಿ ಅಂಬಾನಿಗಳಿಗೆ, ದಲ್ಲಾಳಿಗಳಿಗೆ ಮಾತ್ರ ಲಾಭವಾಗುತ್ತದೆ. ಆದರೆ ತೊಗರಿ ಬೆಳೆಗಾರರಿಗೆ ಕವಡೆಯಷ್ಟೂ ಲಾಭವಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ವ್ಯಾಪಾರಸ್ಥರಿಗೆ ಮತ್ತು ದಲ್ಲಾಳಿಗಳಿಗೆ, ಬಂಡವಾಳಶಾಹಿಗಳಿಗೆ ಮಾತ್ರ ಲಾಭವಾಗುತ್ತಿದೆಯೇ ಹೊರತು ನಿಜವಾದ ಅನ್ನದಾತರಿಗೆ, ತೊಗರಿ ಬೆಳೆಗಾರರಿಗೆ ಲಾಭವಿಲ್ಲ. ಈ ಸಮಯದಲ್ಲಿಯೂ ತೊಗರಿ ಬೆಳೆಗಾರರು ಸಾಲದ ಮಡುವಿನಲ್ಲಿ ಒದ್ದಾಡುತ್ತಿದ್ದಾರೆ” ಎಂದರು.
“ಕರ್ನಾಟಕ ರಾಜ್ಯ ಮತ್ತು ದೇಶದಲ್ಲಿ 130 ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಪ್ರೊಟೀನ್ ಉಪಯುಕ್ತವಾದ ತೊಗರಿ ಬೆಳೆ ಉತ್ಪಾದನೆ 3 ವರ್ಷಗಳಲ್ಲಿ ಕಡಿಮೆಯಾಗಿದೆ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಮತ್ತು ಅತಿವೃಷ್ಟಿ ಮಳೆಯಿಂದ ಹಾನಿಯಾದ ತೊಗರಿ ಅಲ್ಲದೆ ನೇಟೆ ರೋಗದಿಂದ ಒಣಗಿ ಹೋದ ತೊಗರಿ ಬೆಳೆ ತೊಗರಿ ಬೆಳೆಗಾರರಿಗೆ ಕೈ ಕೊಟ್ಟಂತಾಗಿದೆ. ಹೀಗಾಗಿ ನಾನಾ ರೀತಿಯ ಸಮಸ್ಯೆಗಳಿಂದಾಗಿ ಇಡೀ ದೇಶದಲ್ಲಿ ತೊಗರಿ ಬೆಳೆ ಉತ್ಪಾದನೆ ನೆಲಕಚ್ಚಿದರೂ ಕೇಂದ್ರ ಸರ್ಕಾರ ರೈತರ ನೆರವಿಗೆ ಬಾರದಿರುವುದು ದುರಂತವೇ ಸರಿ” ಎಂದು ಬೇಸರ ವ್ಯಕ್ತಪಡಿಸಿದರು.
“ಕಲಬುರಗಿ ಜಿಲ್ಲೆಯ ಜನಸಂಖ್ಯೆ 25.66 ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ಜಿಲ್ಲೆಯಲ್ಲಿ ಒಟ್ಟು 6.37 ಲಕ್ಷ ಮಂದಿ ರೈತರಿದ್ದಾರೆ. ಆದರೆ ತಿಂಗಳಿಗೆ ಸರಾಸರಿ 20 ಲಕ್ಷ ಕ್ವಿಂಟಲ್ ತೊಗರಿ ಬೇಳೆ ಬೇಕಾಗುತ್ತದೆ. 5 ತಿಂಗಳವರೆಗೆ ಎಷ್ಟು ತೊಗರಿ ಬೇಕಾಗಬಹುದೆಂದು ಆಂತಕ ಪಡುವಂತಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? 100ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುತ್ತೇವೆ: ಕೃಷಿ ಸಚಿವ ಚಲುವರಾಯಸ್ವಾಮಿ
“ಬರ್ಮಾ ದೇಶದಿಂದ ತೊಗರಿಯನ್ನು ಆಮದು ಮಾಡಿಕೊಂಡು ಪ್ರತಿ ಕ್ವಿಂಟಾಲ್ ತೊಗರಿಗೆ ಅಂದಾಜು ₹11,000 ಬೆಲೆ ಕೊಡುತ್ತಾರೆ. ಆದರೆ, ಇದೇ ನೆಲದ ಅನ್ನದಾತರಿಗೆ ಬೆಂಬಲ ಬೆಲೆ ನೀಡುವುದಿಲ್ಲ. ನಮ್ಮಲ್ಲಿಯೇ ಬೆಳೆಯುವ ಬೆಳೆಗಳನ್ನೂ ಹೊರದೇಶದಿಂದ ಆಮದು ಮಾಡಿಕೊಂಡರೆ ಇಲ್ಲಿಯ ರೈತರ ಗತಿ ಏನಾಗಬಹುದು ಎಂಬುದನ್ನು ಸರ್ಕಾರ ಯೋಚಿಸಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.
“ಈ ವರ್ಷ ತೊಗರಿ ನಾಡು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇನ್ನೂ ಕೆಲವು ತಾಲೂಕುಗಳಲ್ಲಿ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬಿತ್ತನೆಯೂ ಆಗಿಲ್ಲ. ಈ ವರ್ಷವೂ ಕೂಡ ತೊಗರಿ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆಯೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವುದು ತಿಳಿದುಬಂದಿದೆ. ಇದರಿಂದ ಮತ್ತಷ್ಟು ಆತಂಕ ಎದುರಾಗಿದೆ” ಎಂದು ಹೇಳಿದರು.