ಬಿಜೆಪಿಯ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಶುಕ್ರವಾರ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ‘ಆಪರೇಷನ್ ಹಸ್ತ’ ಕುರಿತು ನಿತ್ಯ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ದಿಢೀರ್ ಅಗಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, “ಯಾರು ಬಿಜೆಪಿ ಬಿಡುತ್ತಾರೋ ನನಗೆ ಗೊತ್ತಿಲ್ಲ. ನಾನು ಬಿಜೆಪಿಯಲ್ಲೇ ಇದ್ದೇನೆ. ಕಾಂಗ್ರೆಸ್ ಸೇರುವಂತೆ ಯಾರು ನನಗೆ ಆಫರ್ ಕೊಟ್ಟಿಲ್ಲ” ಎಂದರು.
“ಸಿಎಂ ಸರ್ಕಾರಿ ನಿವಾಸದಲ್ಲಿ 20 ನಿಮಿಷಗಳ ಕಾಲ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿರುವೆ. ಕ್ಷೇತ್ರದ ಸಂಬಂಧ ಚರ್ಚೆ ನಡೆಸಿದ್ದೇನೆ. ರಾಜಕೀಯವೇ ಬೇರೆ, ಪರಸ್ಪರ ವಿಶ್ವಾಸವೇ ಬೇರೆ. ರಾಜಕೀಯೇತರ ಹಲವು ವಿಚಾರಗಳನ್ನು ಸಿಎಂ, ಡಿಸಿಎಂ ಜೊತೆ ಚರ್ಚೆ ಮಾಡಲಾಗಿದೆ” ಎಂದು ಹೇಳಿದರು.

“ಬರದ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಲು ಬಂದಿದ್ದೆ. ಹಾಗೆಯೇ ಇಂದು ವರಮಹಾಲಕ್ಷ್ಮಿ ಪೂಜೆ ಇದ್ದು, ಯಡಿಯೂರಪ್ಪ, ಕೃಷ್ಣಭೈರೇಗೌಡ ಅವರನ್ನೂ ಭೇಟಿಯಾಗಲಿದ್ದೇನೆ” ಎಂದರು.
“ನಾನು ದಾವಣಗೆರೆ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಟಿಕೆಟ್‌ಗಾಗಿ ಪಕ್ಷದಲ್ಲಿ ಬೇಡಿಕೆ ಇಟ್ಟಿದ್ದೇನೆ. ಪಕ್ಷದ ತೀರ್ಮಾನ ಏನು ಎಂಬುದು ಇನ್ನೂ ತಿಳಿದಿಲ್ಲ” ಎಂದು ಹೇಳಿದರು.