ಬೆಂಗಳೂರಿನ 15 ವಾರ್ಡ್‌ಗಳಲ್ಲಿ ಫುಟ್‌ಪಾತ್ ಮತ್ತು ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲು 93.17 ಕೋಟಿ ರೂಪಾಯಿಗಳು ಬೇಕಾಗುತ್ತದೆ ಸೆನ್ಸಿಂಗ್ ಲೋಕಲ್, ಅರ್ಬನ್ ಲಿವಿಂಗ್ ಲ್ಯಾಬ್ ಸಂಸ್ಥೆಯು ಅಂದಾಜಿಸಿದೆ.
ಸಂಸ್ಥೆಯು ಬೆಂಗಳೂರಿನಲ್ಲಿ ಈ ವರ್ಷದ ಮಾರ್ಚ್‌ನಿಂದ ಮೇವರೆಗೆ 19 ವಾರ್ಡ್‌ಗಳಲ್ಲಿ ‘ಸ್ಟ್ರಾಟೆಜಿಕ್ ವಾಕ್‌ಬಿಲಿಟಿ ಆಡಿಟ್‘ ನಡೆಸಿದೆ. ಈ ವೇಳೆ, 315 ಕಿಲೋಮೀಟರ್ ಫುಟ್‌ಪಾತ್‌ಗಳು ಮತ್ತು 174 ಜಂಕ್ಷನ್‌ಗಳಲ್ಲಿ 300ಕ್ಕೂ ಹೆಚ್ಚು ಸ್ವಯಂಸೇವಕರು ಆಡಿಟ್ ನಡೆಸಿದ್ದಾರೆ.
ಆ ಮೂಲಕ ಪಾದಚಾರಿ ಮಾರ್ಗಗಳು ಯಾವ ರೀತಿಯಲ್ಲಿರಬೇಕು ಎಂಬುದನ್ನೂ ಕಂಡುಕೊಂಡಿದೆ. ಉತ್ತಮ ಫುಟ್‌ಪಾತ್ ಮತ್ತು ಜಂಕ್ಷನ್ ನಿರ್ಮಾಣಕ್ಕಾಗಿ ಬಜೆಟ್‌ಅನ್ನು ಹೇಗೆ ಹೊಂದಿಸಬಹುದು ಎಂಬುದರ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜೊತೆ ಮಾತುಕತೆ ನಡೆಸುತ್ತಿದೆ.
ಪ್ರತಿ ವಾರ್ಡ್‌ಗಳಲ್ಲಿ ಸಮುದಾಯ ಸ್ವಯಂಸೇವಕರು ಸಂಗ್ರಹಿಸಿದ ದತ್ತಾಂಶಗಳನ್ನು ಒಗ್ಗೂಡಿಸಲಾಗಿದೆ. ಐದು ವಿಭಾಗಗಳ ಅಡಿಯಲ್ಲಿ 20 ಸಮಸ್ಯೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಫುಟ್‌ಪಾತ್ ಗುಣಮಟ್ಟ, ಅತಿಕ್ರಮಣವೂ ಸೇರಿದೆ. ಅಲ್ಲದೆ, ಜಂಕ್ಷನ್‌ಗಳಲ್ಲಿ ಏಳು ರೀತಿಯ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ.
“ಬಿಬಿಎಂಪಿ ನಿಗದಿಪಡಿಸಿದ ದರಗಳ ಪಟ್ಟಿ ಪ್ರಕಾರ ಫುಟ್‌ಪಾತ್‌ಗಳು ಮತ್ತು ಜಂಕ್ಷನ್‌ಗಳ ಅಭಿವೃದ್ಧಿಗೆ ಬಜೆಟ್‌ಗಳನ್ನು ಅಂದಾಜು ಮಾಡಲು ಸಹಾಯ ಮಾಡಿದೆ. ಫುಟ್‌ಪಾತ್ ಅಭಿವೃದ್ಧಿಗೆ 84.02 ಕೋಟಿ ರೂ., ಬೀದಿ ಮೂಲಸೌಕರ್ಯ ದುರಸ್ತಿಗೆ 63.11 ಕೋಟಿ ಹಾಗೂ ಸುಲಭ ಮೂಲಸೌಕರ್ಯ ನಿರ್ಮಿಸಲು 15 ಕೋಟಿ ರೂ.ಗಳ ಅಗತ್ಯವಿದೆ” ಎಂದು ಸಂಸ್ಥೆಯ ಸಹ-ಸಂಸ್ಥಾಪಕಿ ಸೋಬಿಯಾ ರಫೀಕ್ ಹೇಳಿದ್ದಾರೆ.
“ಜಂಕ್ಷನ್‌ಗಳನ್ನು ಸುಧಾರಿಸಲು ಕನಿಷ್ಠ 9.15 ಕೋಟಿ ರೂ.ಗಳು ಬೇಕಾಗುತ್ತವೆ. ಗುರುತಿಸಲಾದ 15 ವಾರ್ಡ್‌ಗಳಲ್ಲಿನ ನಿರ್ಣಾಯಕ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ನಿರ್ವಹಣೆಗೆ ಕನಿಷ್ಠ 50% ಖರ್ಚು ಮಾಡಬೇಕಾಗಿದೆ” ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸೋಂಕುಗಳು, ಅಪಘಾತಗಳೂ ಕಾರ್ನಿಯಲ್ ಕುರುಡುತನಕ್ಕೆ ಕಾರಣವಾಗುತ್ತವೆ: ಕಣ್ಣಿನ ತಜ್ಞ
“ಸ್ವಯಂಸೇವಕರು ಪ್ರತಿ ವಾರ್ಡ್‌ನಲ್ಲಿ ಫುಟ್‌ಪಾತ್‌ಗಳಲ್ಲಿ ಸಂಪರ್ಕ, ದಟ್ಟಣೆಯ ಸಾಂದ್ರತೆ ಮತ್ತು ಪ್ರಮುಖ ಸ್ಥಳಗಳ ಮೇಲೆ ಅಧ್ಯಯನ ಮಾಡಿದ್ದಾರೆ. ಈ ಫುಟ್‌ಪಾತ್‌ಗಳು ಒಳ ವಾರ್ಡ್‌ಗಳಲ್ಲಿ ಒಟ್ಟು ರಸ್ತೆ ಜಾಲದ ಶೇ.32 ಮತ್ತು ಹೊರ ವಾರ್ಡ್‌ಗಳಲ್ಲಿ ಶೇ.19 ರಷ್ಟು ವ್ಯಾಪ್ತಿಯನ್ನು ಹೊಂದಿವೆ. ಕುತೂಹಲಕಾರಿಯಾಗಿ, ನಗರದ ಒಳಗಿನ ವಾರ್ಡ್‌ಗಳಲ್ಲಿನ ರಸ್ತೆ ಜಾಲಗಳು ಹೆಚ್ಚು ನಡೆದಾಡಲು ಯೋಗ್ಯವಾಗಿವೆ” ಎಂದು ಸಂಸ್ಥೆ ಹೇಳಿದೆ.
ಆಡಿಟ್ ವರದಿಯು ಸೂಚಿಸಿರುವ ಪರಿಹಾರಗಳನ್ನು ಅಧಿಕಾರಿಗಳು ಮುಂದಿನ ಐದು ವರ್ಷಗಳಲ್ಲಿ ಕಾರ್ಯಗತಗೊಳಿಸದರೆ, ಹೆಚ್ಚಿನ ಸಂಖ್ಯೆಯ ನಡಿಗೆಯ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಸಂಸ್ಥೆ ತಿಳಿಸಿದೆ.