ಶೋಷಿತರು, ಬಡವರು, ದಲಿತರು, ಕೂಲಿಕಾರ್ಮಿಕರು ವಿದ್ಯಾರ್ಥಿ ಯುವಜನರು ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕು ಮತ್ತು ಶೋಷಿತರು ಸಾಮಾಜಿಕವಾಗಿ, ವೈಚಾರಿಕವಾಗಿ ಮಾತ್ರವಲ್ಲದೆ ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸಿ ಈ ದೇಶದಲ್ಲಿರುವ ಅಸಮಾನತೆ, ಅನಾಗರಿಕತೆ, ಮೌಢ್ಯತೆಯನ್ನು ಧಿಕ್ಕರಿಸಿ ಸಾಮರಸ್ಯದ ಬದುಕು ನಡೆಸಲು ಈ ಶಿಕ್ಷಣ ದಾರಿ ದೀಪವಾಗಬೇಕು ಎನ್ನುವ ನಿಟ್ಟಿನಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸುದೀರ್ಘ ಹೋರಾಟ ಇಂದು ನಮ್ಮೆಲ್ಲರನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಅಣಿ ಮಾಡಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್ ಕಲಾದಗಿ ತಿಳಿಸಿದರು.
ಡಾ. ಬಿ ಆರ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ನಿಮಿತ್ಯ ರಾಜ್ಯಾದ್ಯಂತ ಡಾ. ಬಿ ಆರ್ ಅಂಬೇಡ್ಕರ್ ಕುರಿತು ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

“ವಿದ್ಯೆಯೇ ವಿಮೋಚನೆಗೆ ಹೆದ್ದಾರಿ, ಶಿಕ್ಷಣವೇ ಪ್ರತಿಯೊಂದು ಕ್ರಾಂತಿಗೆ ಮೂಲಾಧಾರ ಎನ್ನುವ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿ ಯುವಜನರು ಸಾಗಬೇಕಾಗಿರುವುದರ ಭಾಗವಾಗಿ ದಲಿತ ವಿದ್ಯಾರ್ಥಿ ಪರಿಷತ್ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆಯ ಪ್ರಯುಕ್ತವಾಗಿ ರಾಜ್ಯಾದ್ಯಂತ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಆಗಸ್ಟ್ 27ರ ಭಾನುವಾರದಂದು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಕೈಗೊಂಡಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸಬೇಕು
“ಬಾಗಲಕೋಟೆಯಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ ಪರೀಕ್ಷಾ ಕೇಂದ್ರವಾಗಿ ನಿಗದಿಯಾಗಿದೆ. ಈ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಕ್ರಮವಾಗಿ 5 ಲಕ್ಷ ರೂಪಾಯಿ 2.5 ರೂಪಾಯಿ 1 ಲಕ್ಷ ರೂಪಾಯಿ ಬಹುಮಾನ ಮತ್ತು ಉಚಿತ ಐಎಎಸ್ ಕೆಎಎಸ್ ಕೋಚಿಂಗ್ ಕೊಡಿಸುವುದು ಹಾಗೂ ಜಿಲ್ಲಾ ಮಟ್ಟದ ಮೂರು ಬಹುಮಾನಗಳನ್ನೂ ಕೂಡ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅವರನ್ನು ಶಿಕ್ಷಣಕ್ಕೆ ಪ್ರೇರೇಪಿಸಲು ಪರೀಕ್ಷೆ ಕೈಗೊಳ್ಳಲಾಗಿದೆ” ಎಂದರು.
“ಪರೀಕ್ಷೆಗೆ ಈಗಾಗಲೇ ನೊಂದಾಯಿಸಿಕೊಂಡ ಸ್ಪರ್ಧಾರ್ಥಿಗಳು ಸರಿಯಾಗಿ 11 ಗಂಟೆ ಒಳಗಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು” ಎಂದು ಸೂಚಿಸಿದರು.