- ವೃದ್ಧೆಯ ಸಂಕಷ್ಟವನ್ನು ಟ್ವಿಟರ್ ಮೂಲಕ ಸಿಎಂ ಕಚೇರಿಗೆ ತಿಳಿಸಿದ್ದ ಸ್ಥಳೀಯ ಯುವಕ
- ಮನವಿಗೆ ಸ್ಪಂದಿಸಿ ವಿದ್ಯುತ್ ಕಲ್ಪಿಸಲು ನೆರವಾದ ಸಿಎಂ ಕಚೇರಿ: ವ್ಯಾಪಕ ಮೆಚ್ಚುಗೆ
ಬಡತನದ ಕಾರಣಕ್ಕೆ ವಿದ್ಯುತ್ ಸಂಪರ್ಕ ಪಡೆಯದೆ ವೃದ್ಧೆಯೊಬ್ಬರು ದೀಪದ ಆಸರೆಯಲ್ಲಿ ಬದುಕು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ 24 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಸಿಎಂ ಸಿದ್ದರಾಮಯ್ಯನವರ ಕಚೇರಿ ನೆರವಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೊಣಮ್ಮ ಎಂಬ ವೃದ್ಧ ಮಹಿಳೆ ವಿದ್ಯುತ್ ಸೌಲಭ್ಯದ ಫಲಾನುಭವಿ.
ವೃದ್ಧ ಮಹಿಳೆಯ ಸ್ಥಿತಿಯನ್ನು ಕಂಡಿದ್ದ ಸ್ಥಳೀಯ ಯುವಕ ಮಹೇಂದ್ರ ಎಂಬವರು ಟ್ವೀಟ್ ಮಾಡಿ, ‘ನಾಗರಿಕತೆ ಬೆಳೆದು ಶತಮಾನಗಳು ಕಳೆದರೂ, ಕರೆಂಟ್ ವೈರ್ ಹಾಕಿಸಿಕೊಳ್ಳಲು ಹಣವಿಲ್ಲದೆ ಇಂದಿಗೂ ದೀಪದ ಬೆಳಕಿನಲ್ಲಿ ದೋಣಮ್ಮ ಬದುಕುತ್ತಿರುವುದು ಈ ದೇಶದ ದುರಂತವೇ ಸರಿ’ ಎಂದು ಬರೆದು ಸಿಎಂ ಕಚೇರಿಯ ಗಮನಕ್ಕೆ ತಂದಿದ್ದರು.
ಇದಕ್ಕೆ ಸ್ಪಂದಿಸಿದ ಸಿಎಂ ಕಚೇರಿ, ಸಂಬಂಧಪಟ್ಟ ವಿದ್ಯುತ್ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ, ವೃದ್ಧೆಯ ಮನೆಗೆ ತೆರಳಿದ ಅಧಿಕಾರಿಗಳು ಕೇವಲ 24 ಗಂಟೆಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
‘ಟ್ವೀಟ್ ಮಾಡಿ 24 ಗಂಟೆಗಳ ಒಳಗೆ ಸಂಬಂಧಪಟ್ಟ ಎಲ್ಲ ಇಲಾಖೆಯವರು ಹಾಜರಾಗಿದ್ದಾರೆ. ನಿನ್ನೆ ರಾತ್ರಿಯೇ ಕರೆಂಟ್ ವ್ಯವಸ್ಥೆ ಮಾಡಿದ್ದಾರೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ವೃದ್ಧೆಯ ಬಹುದಿನಗಳ ಕನಸಿಗೆ ನೆರವಾದ ಮಹೇಂದ್ರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೊಣಮ್ಮ ಎಂಬ ವೃದ್ಧ ಮಹಿಳೆ ಬಡತನದ ಕಾರಣಕ್ಕೆ ವಿದ್ಯುತ್ ಸಂಪರ್ಕ ಪಡೆಯದೆ ದೀಪದ ಆಸರೆಯಲ್ಲಿ ಬದುಕು ಸಾಗಿಸುತ್ತಿದ್ದ ವಿಚಾರವನ್ನು ಸ್ಥಳೀಯರಾದ ಮಹೇಂದ್ರ ಅವರು ನಮ್ಮ ಕಚೇರಿಯ ಗಮನಕ್ಕೆ ತಂದರು. ತಕ್ಷಣ ಅವರ ಮನವಿಗೆ ಸ್ಪಂದಿಸಿ, ಕೇವಲ 24 ಗಂಟೆಗಳ ಒಳಗೆ ಆ ತಾಯಿಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಬದಲಾವಣೆ ಮೂಡಿಸಲು ನಾವು ಸಿದ್ಧರಿದ್ದೇವೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಸಹಕಾರವೂ ಇರಲಿ’ ಎಂದು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ಈ ಮೊದಲು @cmofkarnataka ಮತ್ತು @siddaramaiah ಎಂಬ ಎರಡು ಟ್ವಿಟರ್ ಖಾತೆಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯ, ಸಾರ್ವಜನಿಕರ ಅಹವಾಲು ಹಾಗೂ ದೂರನ್ನು ಸ್ವೀಕರಿಸಲು @osd_cmofkarnataka ಎಂಬ ಟ್ವಿಟರ್ ಖಾತೆ ತೆರೆದಿದ್ದಾರೆ. ಇದಕ್ಕೆ ಟ್ಯಾಗ್ ಮಾಡಿ ಬರುವ ದೂರುಗಳಿಗೆ ಸಿಎಂ ಕಚೇರಿಯ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ.
ಇಂತಹ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ಕಂಡು ಬಂದರೆ ಟ್ವಿಟರ್ ಮೂಲಕ ಮಾಹಿತಿ ನೀಡಲು ಸಿಎಂ ಕಚೇರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ.