ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ಹಳೆ ತಹಶೀಲ್ ಕಾರ್ಯಾಲಯದ ಎದುರು ಮತ್ತು ಶಹಾಪೂರ ಪ್ರವಾಸಿ ಮಂದಿರದ ಐಬಿಯಲ್ಲಿ ಇರುವ ಮರಳು ವಿಲೇವಾರಿ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಮಿತಿ ಕಾರ್ಯಕರ್ತರು ಕರ್ನಾಟಕ ಸರ್ಕಾರ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.
“ತಾಲೂಕಿನ ಹಳೆ ತಹಶೀಲ್ ಕಾರ್ಯಾಲಯದ ಪಿಡಬ್ಲ್ಯೂಡಿ ಕಚೇರಿ ಮತ್ತು ಶಹಾಪೂರ ಪ್ರವಾಸಿ ಮಂದಿರ(ಐಬಿ)ದಲ್ಲಿ 2015-16 ರಿಂದ ಪ್ರಸ್ತುತ 2023 ರವರೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವಾಗ ಅಕ್ರಮ ಮರಳನ್ನು ಕೋರ್ಟ್ ಸಾಧರ ಪಡಿಸಿ ಪ್ರಕರಣ ದಾಖಲಿಸಿ ಕೋರ್ಟ್ ನಿರ್ದೇಶನ ಮೇರೆಗೆ ಶಹಾಪೂರದ ಪಿಡಬ್ಲ್ಯೂಡಿ ಅವರ ಸುಪರ್ದಿಯಲ್ಲಿ ಸಂಗ್ರಹಿಸಲಾಗಿತ್ತು” ಎಂದು ದಸಂಸ ಕಾರ್ಯಕರ್ತರು ತಿಳಿಸಿದರು.
“ಪ್ರಸ್ತುತ ಸದರಿ ಮರಳನ್ನು ಕೋರ್ಟ್ ಪರವಾನಿಗೆ ಪಡೆಯದೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮರಳನ್ನು ವಿಲೇವಾರಿ ಮಾಡುತ್ತಿದ್ದೇವೆ. ಸ್ಥಳೀಯ ಸರ್ಕಾರಿ ಕಾಮಗಾರಿಗಳ ಹೆಸರಿನಿಂದ ವರ್ಕ್ ಆರ್ಡರ್ ನಮೂದಿಸಿ ರಾಯಲ್ಟಿ ಕಟ್ಟಿ ನೀಡುತ್ತಿದ್ದೇವೆಂದು ಸ್ಥಳೀಯ ಪಿಡಬ್ಲ್ಯೂಡಿ ಅಧಿಕಾರಿ ಹೇಳುತ್ತಿದ್ದಾರೆ. ಈ ಹಿಂದೆ ಹಲವು ಜಿಲ್ಲಾಧಿಕಾರಿಗಳು ಬಂದು ಹೋಗಿದ್ದು, ಅಂದು ಇಲ್ಲದ ಆದೇಶವನ್ನು ಪ್ರಸ್ತುತದಲ್ಲಿ ನೀಡುತ್ತಿರುವುದು ಎಷ್ಟು ಸರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿರಳೆ ಬಿದ್ದ ಹಾಲು ಸೇವನೆ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
“ಪ್ರಸ್ತುತ ಮರಳು ವಿಲೇವಾರಿ ಆದೇಶ ನ್ಯಾಯಾಲಯಕ್ಕೆ ಅಗೌರವ ತೋರಿಸಿದಂತಾಗುತ್ತಿದೆ. ಹಾಗಾಗಿ ಕೂಡಲೇ ಇದನ್ನು ಪೂರ್ವಕವಾಗಿ ಪರಿಗಣಿಸಬೇಕು. ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ನ್ಯಾಯಾಲಯಕ್ಕೆ ಗೌರವ ನೀಡುವ ದೃಷ್ಟಿಯಿಂದ ನ್ಯಾಯಾಲಯದ ಮೊರೆಹೋಗುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಹೋತಪೇಟ್, ವಿದ್ಯಾರ್ಥಿ ಘಟಕ ಜಿಲ್ಲಾ ಸಂಚಾಲಕ ಶೇಖರ್ ಬಡಿಗೇರ್, ಡಿಎಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಸಿದ್ದು ಮುಂಡಾಸ್ ಇದ್ದರು.