ಮೇಕೆಗಳು ಮತ್ತು ಪಾರಿವಾಳಗಳನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಿ ನಾಲ್ವರು ದಲಿತ ಸಮುದಾಯದ ಬಾಲಕರನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಅಮಾನುಷವಾಗಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಶ್ರೀರಾಂಪುರದಲ್ಲಿ ನಡೆದಿದೆ.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶ್ರೀರಾಮಪುರ ತಹಸಿಲ್ನ ಹರೇಗಾಂವ್ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವ ವಂಚಿತ್ ಬಹುಜನ ಅಘಾಡಿ (ವಿಬಿಎ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು, ಸಂತ್ರಸ್ತರಲ್ಲಿ ಓರ್ವ ಬಾಲಕ ಮತ್ತು ಅವರ ಅಜ್ಜಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ತಿಳಿಸಿದ್ದಾರೆ.
ಬಾಲಕ ತನ್ನ ಮೇಲೆ ಹಲ್ಲೆ ನಡೆಸಿ, ಮೂತ್ರ ವಿಸರ್ಜನೆ ಮಾಡಲಾಗಿದೆ ಮತ್ತು ಉಗುಳಲಾಗಿದೆ, ವಿವಸ್ತ್ರಗೊಳಿಸಿ, ತಲೆಕೆಳಗಾಗಿ ನೇತುಹಾಕಲಾಯಿತು ಎಂದು ಹೇಳಿರುವುದಾಗಿ ಪ್ರಕಾಶ್ ಅಂಬೇಡ್ಕರ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
“ಈ ಜಾತಿ ತಾರತಮ್ಯ, ಬಹಿಷ್ಕಾರ, ನಿಂದನೆ, ಅವಮಾನ, ಹಿಂಸೆ ಮತ್ತು ಕ್ರೌರ್ಯ ಹೊಸದಲ್ಲ ಅಥವಾ ಸರ್ಕಾರದ ಉದಾಸೀನತೆಯೂ ಅಲ್ಲ. ನಾವು ಈ ಅಸಡ್ಡೆಯನ್ನು ಸವಾಲು ಮಾಡುತ್ತೇವೆ ಮತ್ತು ಬದಲಾಯಿಸುತ್ತೇವೆ. ನಾನು ನಿಮಗೆ ಭರವಸೆ ನೀಡುತ್ತೇನೆ. ಇಂತಹ ಕೃತ್ಯಗಳು ಮಹಾರಾಷ್ಟ್ರದಲ್ಲಿ ಈ ಹಿಂದೆಯೂ ನಡೆದಿವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ದಲಿತ ಸಮುದಾಯಗಳ ಮೇಲೆ ದೌರ್ಜನ್ಯವೆಸಗುವ ಅಪರಾಧಗಳಿಗೆ ಶಿಕ್ಷೆಯಾಗದಿರುವ ಕಾರಣಕ್ಕೆ ಜಾತಿ ತಾರತಮ್ಯದ ಹಿಂದಿರುವ ಕೊಳಕು ಮನಸ್ಥಿತಿ ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತಿದೆ” ಎಂದು ಪ್ರಕಾಶ್ ಅಂಬೇಡ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ಅಂಬೇಡ್ಕರ್ ಅವರು ತಮ್ಮ ಟ್ವೀಟ್ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.