ಸರ್ಕಾರಿ ಶಾಲೆಗಳ ವಿಲೀನದ ಹೆಸರಿನಲ್ಲಿ ಮುಚ್ಚುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ವೃದ್ಧಿಸಿ, ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಿ, ಶಾಲೆಗಳನ್ನು ಬಲಪಡಿಸಬೇಕು. ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚಬಾರದು ಎಂದು ಎಐಡಿಎಸ್‌ಒ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಆಗ್ರಹಿಸಿದರು.
“ಕರ್ನಾಟಕ ರಾಜ್ಯದಲ್ಲಿ, ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಹಲವು ಶಾಸಕರು ತಮ್ಮ ಬಳಿ ಮನವಿ ಸಲ್ಲಿಸಿದ್ದಾರೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿಕೆ ನೀಡಿದ್ದು, ಈ ಕುರಿತು ಮುಖ್ಯಮಂತ್ರಿಯವರ ಜೊತೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ವಿಲೀನ ಎಂಬ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ” ಎಂದು ಆರೋಪಿಸಿದರು.
“ವಿಲೀನ ಎಂಬುದೂ ಕೂಡ ಎನ್‌ಇಪಿ-2020ರ ಹಲವು ಶಿಫಾರಸುಗಳಲ್ಲಿ ಒಂದಾಗಿದೆ. ಕಳೆದ ವರ್ಷ ಹಿಂದಿನ ಸರ್ಕಾರ ಇದೇ ವಿಲೀನದ ಹೆಸರಿನಲ್ಲಿ ರಾಜ್ಯದ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಾಗ ಆ ನಿರ್ಧಾರದ ವಿರುದ್ಧ ಸಾರ್ವಜನಿಕ ಶಿಕ್ಷಣ ಉಳಿಸಿ ಎಂಬ ಘೋಷಣೆಯ ಅಡಿಯಲ್ಲಿ ಬೃಹತ್ ಜನಾಂದೋಲನ ಜರುಗಿ, ಸರ್ಕಾರ ತನ್ನ ನಿಲುವನ್ನು ಮುಂದುವರಿಸಲಿಲ್ಲ. ಪ್ರಸ್ತುತ ಸರ್ಕಾರ ಎನ್‌ಇಪಿ-2020ನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವುದಿಲ್ಲ ಎಂದು ಹೇಳುತ್ತಲೇ, ಸರ್ಕಾರಿ ಶಾಲೆಗಳ ವಿಲೀನದ ಪ್ರಸ್ತಾವನೆಯನ್ನು ಚರ್ಚಿಸುತ್ತೇವೆಂದು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸರ್ಕಾರಿ ಶಾಲೆಗಳ ವಿಲೀನ ಪ್ರಸ್ತಾಪವನ್ನು ಸರ್ಕಾರ ಕೈಬಿಡಬೇಕು; ಎಐಡಿಎಸ್‌ಒ ಆಗ್ರಹ
“ಸರ್ಕಾರಿ ಶಾಲೆಗಳ ದಾಖಲಾತಿ ಕುಸಿದರೆ, ಅದಕ್ಕೆ ಸಂಪೂರ್ಣ ಹೊಣೆಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಶಾಲೆಗಳ ಮೂಲಭೂತ ಪರಿಸ್ಥಿತಿ ಸುಧಾರಿಸಿದರೆ ತಾನಾಗೇ ಶಾಲೆಗಳು ಬಲಿಷ್ಠಗೊಳ್ಳುತ್ತವೆ ಹಾಗೂ ದಾಖಲಾತಿ ಪ್ರಮಾಣ ಏರಿಕೆಯಾಗುತ್ತದೆ. ಶಿಕ್ಷಣ ಮಂತ್ರಿಗಳೇ ಹೇಳಿರುವಂತೆ, ಸಾವಿರಾರು ಶಿಕ್ಷಕರ ಹುದ್ದೆಗಳು ಭರ್ತಿಯಾಗದೇ ಉಳಿದಿದ್ದು, ರಾಜ್ಯವ್ಯಾಪಿ ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಇಲ್ಲದೆ ಒಬ್ಬರೇ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ಈ ಭೀಕರ ಶಿಕ್ಷಕರ ಕೊರತೆಯ ಕುರಿತು ಪ್ರತಿ ದಿನ ಹಲವು ವರದಿಗಳು ಬರುತ್ತಿವೆ. ಈ ಪರಿಸ್ಥಿತಿಗೆ ಹಲವು ಸರ್ಕಾರಗಳ ನೀತಿಗಳೇ ಕಾರಣವಾಗಿವೆ” ಎಂದು ಆರೋಪಿಸಿದರು.
ಶಿಕ್ಷಣ ಸಚಿವರೇ ಹೇಳಿರುವಂತೆ ಅವರು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಿರುವ ಕಾರಣ, ಮುಖ್ಯಮಂತ್ರಿಯವರು ಯಾವುದೇ ಕಾರಣಕ್ಕೂ ವಿಲೀನದ ಪ್ರಸ್ತಾಪವನ್ನು ಅಂಗೀಕರಿಸಬಾರದು. ಸರ್ಕಾರಿ ಶಾಲೆ-ಕಾಲೇಜುಗಳನ್ನು ಹಾಗೂ ಸರ್ಕಾರಿ ವಿವಿಗಳನ್ನು ಬಲಪಡಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿ ಹಾಗೂ ಆದ್ಯತೆಯಾಗಬೇಕು” ಎಂದು ಆಗ್ರಹಿಸಿದರು.