ಸಾಮಾಜಿಕ ಜಾಲತಾಣ ವಾಟ್ಸ್‌ಆಪ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಹಾಗಾಗಿ, ಪೊಲೀಸ್ ಇಲಾಖೆಯಿಂದ ನನಗೆ ರಕ್ಷಣೆ ಕೊಡಿ ಎಂದು ಸಾಮಾಜಿಕ ಹೋರಾಟಗಾರ, ನೈಜ ಹೋರಾಟಗಾರ ವೇದಿಕೆಯ ಎಚ್.ಎಂ ವೆಂಕಟೇಶ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ವಾಟ್ಸ್‌ಆಪ್‌ನಲ್ಲಿ ವ್ಯಕ್ತಿಯೊಬ್ಬ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ವೆಂಕಟೇಶ್ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಪತ್ರ ಬರೆದಿರುವ ಅವರು, “ನಾನು ಈ ಹಿಂದೆ ಬಹಳಷ್ಟು ಬಾರಿ ಪೊಲೀಸ್ ಇಲಾಖೆಗೆ ರಕ್ಷಣೆ ಕೋರಿ ಮನವಿ ಸಲ್ಲಿಸುತ್ತಲೇ ಬಂದಿದ್ದೇನೆ. ಗುಪ್ತಚರ ಇಲಾಖೆಯವರು ಎರಡು ಮೂರು ಬಾರಿ ನಮ್ಮ ಮನೆಗೆ ಆಗಮಿಸಿ ಹಲವಾರು ವಿವರಗಳನ್ನು ಕಲೆ ಹಾಕಿ ಹೋಗಿದ್ದಾರೆ” ಎಂದು ಬರೆದಿದ್ದಾರೆ.
“ಮುಖ್ಯಮಂತ್ರಿ ಕಚೇರಿಯಿಂದಲೂ ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ಸೂಚಿಸಲಾಗಿದೆ. ಆದರೆ, ಈವರೆಗೂ ನನಗೆ ಯಾವುದೇ ರೀತಿಯ ರಕ್ಷಣೆ ಒದಗಿಸಿಲ್ಲ. ಆಗಸ್ಟ್ 27ರಂದು (ಭಾನುವಾರ) ಸಂಜೆ ಒಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಒಬ್ಬ ವ್ಯಕ್ತಿ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ‘ಏನೆಲ್ಲಾ ಪೋಸ್ಟ್‌ಗಳನ್ನು ಹಾಕುತ್ತೀಯಾ ನಿನ್ನನ್ನು ನಾವು ಗಮನದಲ್ಲಿ ಇಟ್ಟಿದ್ದೇವೆ. ನೀನೊಬ್ಬ ನೀಚ ಇನ್ನು ಮುಂದೆ ಯಾವುದೇ ಪೋಸ್ಟ್‌ಗಳನ್ನು ಹಾಕಿದರೆ ಬಿ ಕೇರ್ ಫುಲ್’ ಎಂದೆಲ್ಲಾ ಬರೆದು ಸಂದೇಶ ಕಳುಹಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಈ ವ್ಯಕ್ತಿಯ ಯಾರೆಂದು ಹುಡುಕಿ ಅವನ ಮೇಲೆ ಪ್ರಾರ್ಥಮಿಕ ವರ್ತಮಾನ ವರದಿಯನ್ನು ದಾಖಲಿಸಿ ಅವನ ಮೇಲೆ ಕಾನೂನಿನ ಕ್ರಮವನ್ನು ಜರುಗಿಸಬೇಕು” ಎಂದು ಮನವಿ ಮಾಡಿದ್ದಾರೆ.
“ಹಲವಾರು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಮತ್ತು ಸರ್ಕಾರಿ ಜಮೀನುಗಳನ್ನು ಅತಿಕ್ರಮ ಮಾಡಿಕೊಂಡವರ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಜನಪ್ರತಿನಿಧಿಗಳು ತಮ್ಮ ಚರ ಸ್ಥಿರ ಆಸ್ತಿಗಳ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸದೆ, ಆದಾಯಕ್ಕೆ ಮೀರಿದ ಆಸ್ತಿಗಳನ್ನು ಮಾಡುವವರ ವಿರುದ್ಧ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ವಿಧಾನಸಭಾ ಸದಸ್ಯರವರೆಗೆ ಎಲ್ಲರ ಆಸ್ತಿಗಳ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂದು ಹೋರಾಟ ನಡೆಸಿ ಜಯ ಗಳಿಸಿದ್ದೇನೆ” ಎಂದು ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೀದಿನಾಯಿ ಬೊಗಳಿದ್ದಕ್ಕೆ ದಾರಿಹೋಕನ ಮೇಲೆ ಹಲ್ಲೆ; ಆರೋಪಿ ಬಂಧನ
“ಈ ನನ್ನ ಹೋರಾಟದಿಂದ ಕಾರ್ಪೊರೇಷನ್, ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಿಲ್ಲುವವರಿಗೆ ಈ ಆದೇಶದಿಂದ ಬಹಳಷ್ಟು ತೊಂದರೆ ಉಂಟಾಗಿದೆ. ಹೀಗಾಗಿ, ಬಹಳಷ್ಟು ಜನರು ನನ್ನ ಮೇಲೆ ಮತ್ತು ನನ್ನ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲ ಹೋರಾಟ ನಿಲ್ಲಿಸುವ ಪ್ರಕ್ರಿಯೆ ನಡೆಸುತ್ತಲೇ ಇದ್ದಾರೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಇದಕ್ಕೆ ಸಂಬಂಧಪಟ್ಟ ಪ್ರತಿಯೊಂದು ದಾಖಲೆಗಳನ್ನು ಪೊಲೀಸ್ ಇಲಾಖೆಗೆ ಈ ಹಿಂದೆಯೇ ಸಲ್ಲಿಸಿದ್ದೇನೆ. ಈ ಎಲ್ಲ ಹಿನ್ನೆಲೆಯಲ್ಲಿ ವಾಟ್ಸ್‌ಆಪ್ ಸಂದೇಶಗಳ ಮೂಲಕ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು. ಪೋಲಿಸ್ ರಕ್ಷಣೆಯನ್ನು ಉಚಿತವಾಗಿ ನೀಡಬೇಕು” ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ನೈಜ ಹೋರಾಟಗಾರ ವೇದಿಕೆಯ ಎಚ್.ಎಂ. ವೆಂಕಟೇಶ್, “ಈ ಹಿಂದೆಯೂ ಕೂಡ ಹಲವು ಬಾರಿ ಬೆದರಿಕೆ ಸಂದೇಶಗಳು ಬಂದಿವೆ. ಆಗ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಈಗ ಬೆದರಿಕೆ ಸಂದೇಶ ಕಳುಹಿಸಿರುವ ಅಪರಿಚಿತ ವ್ಯಕ್ತಿಯನ್ನು ಬಂಧಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇನೆ ಹಾಗೂ ಪೊಲೀಸ್ ಇಲಾಖೆಯಿಂದ ನನಗೆ ರಕ್ಷಣೆ ನೀಡಬೇಕು” ಎಂದು ಕೇಳಿದ್ದೇನೆ” ಎಂದು ತಿಳಿಸಿದರು.