- ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಲು ಸೂಚನೆ
- ಸರ್ಕಾರ ಗಟ್ಟಿ ನಿರ್ಧಾರ ಮಾಡಿ, ಕಾವೇರಿ ನೀರು ಬಿಡುವುದನ್ನು ನಿಲ್ಲಿಸಲಿ
ರಾಜ್ಯದಲ್ಲಿರುವ ಬರದ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದೆ ವಾದ ಮಂಡಿಸಬೇಕು. ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು, ಅವರಿಗೆ ವ್ಯವಸಾಯಕ್ಕೆ ನೀರು ಬೇಕು ನಮಗೆ ಕುಡಿಯುವುದಕ್ಕೆ ನೀರು ಬೇಕಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟ್ಟರ್)ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಸರ್ಕಾರ ಗಟ್ಟಿ ನಿರ್ಧಾರ ಮಾಡಲಿ, ನಾವು ಸರ್ಕಾರದೊಂದಿಗೆ ಇದ್ದೇವೆ. ಕಾವೇರಿ ನೀರನ್ನು ಬಿಡುವುದನ್ನು ಮೊದಲು ನಿಲ್ಲಿಸಲಿ” ಎಂದಿದ್ದಾರೆ.
5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ
ಪ್ರತಿನಿತ್ಯ ಅರ್ಧ ಟಿಎಂಸಿ ಅಡಿ (5 ಸಾವಿರ ಕ್ಯೂಸೆಕ್) ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯು ಆರ್‌ಸಿ) ಸೋಮವಾರ ಶಿಫಾರಸು ಮಾಡಿದೆ. ನಮ್ಮ ರಾಜ್ಯದಿಂದ ತಮಿಳುನಾಡಿಗೆ ಎಷ್ಟು ನೀರನ್ನು ಹರಿಸಲಾಗಿದೆ ಎಂಬುದನ್ನು ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಮಾಪನ ಮಾಡಲಾಗುತ್ತದೆ. ಮಂಗಳವಾರದಿಂದ 15 ದಿನಗಳವರೆಗೆ (ಸೆಪ್ಟೆಂಬರ್ 9) ನೀರು ಹರಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ನೂರು, ಸಮಸ್ಯೆ ನೂರಾರು
ಸಮಿತಿಯ ಅಧ್ಯಕ್ಷ ವಿನಿತ್ ಗುಪ್ತ ಅಧ್ಯಕ್ಷತೆಯಲ್ಲಿ ವರ್ಚುವಲ್ ಮೂಲಕ ಕಾವೇರಿ ನೀರು ನಿರ್ವಹಣ ಸಭೆ ನಡೆದಿದೆ. ಕರ್ನಾಟಕ, ತಮಿಳುನಾಡು ಅಧಿಕಾರಿಗಳು ಮತ್ತು ಕೇಂದ್ರ ಜಲ ಆಯೋಗದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಎರಡು ರಾಜ್ಯಗಳ ಜಲಾಶಯಗಳ ನೀರಿನ ಸಂಗ್ರಹ, ಮಳೆಯ ಪ್ರಮಾಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ, ಎರಡು ರಾಜ್ಯಗಳ ವಾಸ್ತವ ಪರಿಸ್ಥಿತಿ ಲೆಕ್ಕ ಹಾಕಿ ಪ್ರತಿದಿನ 5000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣ ಸಮಿತಿ ಸೂಚನೆ ನೀಡಿದೆ.