ಪ್ರಸ್ತುತ ವರ್ಷ ಮುಂಗಾರು ಪ್ರಾರಂಭದ ಮಳೆಗೆ ಜಿಲ್ಲೆಯ ಒಣ ಬೇಸಾಯದಲ್ಲಿ ಸಂಪೂರ್ಣ ಬಿತ್ತನೆಯಾಗಿದೆ. ಈ ಭಾಗದ ಒಣ ಬೇಸಾಯದ ಮಸಾರಿ ಬೆಳೆಗಳಾದ ಮೆಕ್ಕಜೋಳ, ಸಜ್ಜೆ, ಶೇಂಗಾ ಎಳ್ಳು, ತೊಗರಿ ಇತ್ಯಾದಿ ಬೆಳೆಗಳು, ಎರೆ ಭೂಮಿಯಲ್ಲಿ ಮುಂಗಾರು ಹೆಸರು ಹಾಗು ಇನ್ನಿತರ ಬೆಳೆಗಳು ಸಕಾಲಕ್ಕೆ ಮಳೆಯಾಗದೆ ಸಂಪೂರ್ಣ ಒಣಗಿ ಹೋಗಿವೆ ಎಂದರು.
ಕೊಪ್ಬಳ ಜಿಲ್ಲೆ ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
“ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭದಿಂದ ಈವರೆಗೆ ಮಳೆ ಕೊರತೆಯ ಉಂಟಾಗಿರುವುದರಿಂದ ಭೀಕರ ಬರಗಾಲ ಆವರಿಸಿದ್ದು, ಜಾನುವಾರುಗಳ ಮೇವಿನ ಕೊರತೆ, ಅಂತರ್ಜಲ ಕುಸಿತ, ಪ್ರಾರಂಭದಲ್ಲಿ ಬಿದ್ದ ಮಳೆಗೆ ಬಿತ್ತಿದ ಬೆಳೆಗಳು ಸಂಪೂರ್ಣ ಒಣಗಿ ಹೋಗಿದ್ದು, ರೈತರು ಸಾವು ನೋವು ಅನುಭವಿಸವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ರಾಸಾಯನಿಕ ಗೊಬ್ಬರ, ಬೀಜ, ಕೃಷಿ ಉಪಕರಣ, ಕೂಲಿ ವೆಚ್ಚ ಹೆಚ್ಚಾಗಿದ್ದು, ಮೆಕ್ಕಜೋಳಕ್ಕೆ ₹25,000, ಸಜ್ಜೆಗೆ ₹15,000, ಶೇಂಗಾಕ್ಕೆ ₹35,000 ಖರ್ಚು ಸೇರಿದಂತೆ ಇನ್ನಿತರ ಬೆಲೆಗಳೂ ಹೆಚ್ಚಾಗಿವೆ. ಈ ವರ್ಷ ಅತಿ ಬರಗಾಲ ಉಂಟಾಗಿದೆ. ಅಳಿದು ಉಳಿದಿರುವ ಬೆಳೆಗಳನ್ನು ಕುರಿ ದನ ಬಿಟ್ಟು ಮೇಯಿಸಿ ನಾಶಪಡಿಸಿದ್ದಾರೆ. ಹಿಂಗಾರು ಬೆಳೆ ಬೆಳೆಯಬೇಕೆಂದರೆ, ಮಳೆಗಾಲ ಮುಗಿಯುವ ಹಂತದಲ್ಲಿದೆ. ಹೀಗಾಗಿ ಮಸಾರಿ ಆಗಿರುವುದರಿಂದ ಹಿಂಗಾರು ಬೆಳೆಯೂ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು” ಎಂದು ಆಗ್ರಹಿಸಿದರು.
“ಜಿಲ್ಲೆಯ ರೈತರಿಗೆ ಆರ್ಥಿಕ ಸಂಕಷ್ಟದಿಂದ ಬ್ಯಾಂಕಿನ ಬೆಳೆ ಸಾಲ ತೀರಿಸುವ ಚಿಂತೆಯಾಗಿದೆ. ಬ್ಯಾಂಕುಗಳು ಬೆಳೆ ಸಾಲ ಮರುಪಾವತಿಗೆ ನೊಟೀಸ್ ಕಳುಹಿಸುತ್ತಿದ್ದು, ಬೆಳೆ ಕೈಕೊಟ್ಟಿದ್ದರಿಂದ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸರ್ಕಾರ ಇಂತಹ ತುರ್ತು ಪರಿಸ್ಥಿತಿಯಲ್ಲಿ ರೈತರ ಎಲ್ಲ ಸಾಲವನ್ನೂ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.
“ಪ್ರತಿ ರೈತರಿಗೆ ಬೆಳೆ ನಷ್ಟದ ಪರಿಹಾರವಾಗಿ ಆಂಧ್ರ ಪ್ರದೇಶದ ಮಾದರಿಯಲ್ಲಿ ₹15 ಸಾವಿರ ಘೋಷಣೆ ಮಾಡಿದಂತೆ ನಮ್ಮ ರಾಜ್ಯದಲ್ಲಿಯೂ ಸರ್ಕಾರ ಈಗಿನ ಕೃಷಿ ವೆಚ್ಚಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರದಿಂದಲೇ ಪ್ರತಿ ರೈತ ಕುಟುಂಬಕ್ಕೆ ಬೆಳೆ ನಷ್ಟದ ಪರಿಹಾರವಾಗಿ ₹30 ಸಾವಿರ ಹೆಚ್ಚಿಸಿ ಪರಿಹಾರ ಘೋಷಣೆ ಮಾಡಬೇಕು” ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
“ಜಿಲ್ಲಾ ಕೇಂದ್ರದಿಂದ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯದಿಂದ ತಾಲೂಕಿನ ಎಲ್ಲ ಗ್ರಾಮಗಳ ಏತ ನೀರಾವರಿ ಮಾಡಿ, ಊರಿಗೊಂದು ಕರೆ ನಿರ್ಮಿಸಿ ಉಳಿದ ನೀರಿನಿಂದ ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಬೇಕು. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕಳಪೆ ಬೀಜ ಸರಬರಾಜು ಮಾಡುತ್ತಿದ್ದು, ಕಾರಂಜಿ ಮತ್ತು ಇತರೆ ಯಂತ್ರಗಳು ಕಳಪೆ ಗುಣಮಟ್ಟ ಹೊಂದಿವೆ. ಹಾಗಾಗಿ ಗುಣಮಟ್ಟದ ಯಂತ್ರಗಳು ಮತ್ತು ಉತ್ತಮ ಬೀಜಗಳನ್ನು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಗಳಿಗೆ ನೀರು ಹರಿಸುವಂತೆ ಸೂಚನೆ
ತೋಟಗಾರಿಕೆ ಇಲಾಖೆಯಲ್ಲಿ ಶೇ90ರಷ್ಟು ರಿಯಾಯತಿ ದರದಲ್ಲಿ ನೀಡುತ್ತಿದ್ದ ಕಾರಂಜಿಗಳು ರೈತರಿಗೆ ದೊರಕದೆ ಕೆಲ ರಾಜಕಾರಣಿಗಳಿಗೆ ದೊರಕುತ್ತಿದ್ದ ತಪ್ಪನ್ನು ಸರಿಪಡಿಸಿ ಅರ್ಹ ರೈತರಿಗೆ ಅನುದಾನದ ಮೂಲಕ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಕನಕಪ್ಪ ಪೂಜಾರ, ನಾಗರಾಜ ಇರಕಲಗಡ, ಮಂಜುನಾಥ ಸೇರಿದಂತೆ ಇತರರು ಇದ್ದರು.