ಭಾರತದ ಅರುಣಾಚಲ ಪ್ರದೇಶ ರಾಜ್ಯ ಹಾಗೂ ಅಕ್ಸಾಯ್ ಚಿನ್ ಪ್ರದೇಶವನ್ನು ತನ್ನ ಭೂಪ್ರದೇಶದ ಭಾಗವಾಗಿ ತೋರಿಸುವ ಅಧಿಕೃತ ನಕ್ಷೆಯನ್ನು ಚೀನಾ ಬಿಡುಗಡೆ ಮಾಡಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವುತ್, ಕೇಂದ್ರ ಸರಕಾರಕ್ಕೆ ಧೈರ್ಯವಿದ್ದರೆ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಿ ಎಂದು ಮಂಗಳವಾರ ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವುತ್, ಲಡಾಖ್‌ನ ಪ್ಯಾಂಗಾಂಗ್ ಕಣಿವೆಗೆ ಚೀನಾ ಮಿಲಿಟರಿ ಪ್ರವೇಶಿಸಿದೆ ಎಂದು ಲಡಾಖ್‌ನಲ್ಲಿ ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆ ನಿಜವಾಗಿದೆ ಎಂದು ಹೇಳಿದರು.
“ನಮ್ಮ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ್ದರು. ಶಾಂತಿ ಕಾಪಾಡುವ ಬಗ್ಗೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ವರದಿಯಾಗಿತ್ತು. ಆದರೆ ಆ ಭೇಟಿಯ ಬಳಿಕವೂ ಚೀನಾ ನೂತನ ನಕ್ಷೆ ಬಿಡುಗಡೆ ಮಾಡಿದೆ. ಚೀನಾ ಅರುಣಾಚಲವನ್ನು ಪ್ರವೇಶಿಸಲು ಯತ್ನಿಸುತ್ತಿದೆ. ನಿಮಗೆ ಧೈರ್ಯವಿದ್ದರೆ ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಎಂದು ರಾವುತ್ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚೀನಾದ ಹೊಸ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ಸೇರ್ಪಡೆ: ಭಾರತ ಆಕ್ರೋಶ
ಆಗಸ್ಟ್ 28ರಂದು ಚೀನಾ ಬಿಡುಗಡೆ ಮಾಡಿದ ನಕ್ಷೆಯಲ್ಲಿ ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಳ್ಳುವ ಅರುಣಾಚಲ ಪ್ರದೇಶವನ್ನು ತೋರಿಸಲಾಗಿದೆ. 1962ರ ಯುದ್ಧದಲ್ಲಿ ಅಕ್ಸಾಯ್ ಚಿನ್ ಭೂಪ್ರದೇಶವನ್ನು ವಶಪಡಿಸಿಕೊಂಡಿದ್ದು, ಅದೂ ತನ್ನ ದೇಶದ ಭಾಗವಾಗಿದೆ ಎಂದು ಚೀನಾ ಹೇಳಿಕೊಂಡಿದೆ. ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಸಹ ಹೊಸ ನಕ್ಷೆಯಲ್ಲಿ ಚೀನಾದ ಭೂಪ್ರದೇಶವೆಂದು ಬಿಂಬಿಸಲಾಗಿದೆ.
ಚುನಾವಣೆಗೂ ಮುನ್ನ ಗಲಭೆ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣೆಗೂ ಮುನ್ನ ಗಲಭೆಗಳು ನಡೆಯಬಹುದು ಎಂದು ಸಂಜಯ್ ರಾವುತ್ ಆತಂಕ ವ್ಯಕ್ತಪಡಿಸಿದ್ದಾರೆ.
“ರಾಮ ಮಂದಿರ ಉದ್ಘಾಟನೆ ವೇಳೆ ರಾಮ ಭಕ್ತರ ರೈಲಿನ ಮೇಲೆ ಕಲ್ಲು ತೂರಾಟ, ಬಾಂಬ್ ದಾಳಿ ಮತ್ತು ದೇಶಾದ್ಯಂತ ಗಲಭೆ ಎಬ್ಬಿಸುವ ಸಾಧ್ಯತೆ ಇದೆ ಎಂಬ ಭಯ ಜನಸಾಮಾನ್ಯರಲ್ಲಿದೆ. ಇದೆಲ್ಲವೂ ಲೋಕಸಭೆ ಚುನಾವಣೆ ಗೆಲ್ಲಲು ಮಾಡುವ ತಂತ್ರವಾಗಿದೆ” ಎಂದರು.
“ಈ ಆತಂಕವು ಪ್ರಮುಖ ರಾಜಕೀಯ ಪಕ್ಷಗಳ ಮನಸ್ಸಿನಲ್ಲೂ ಇದೆ. ಎಲ್ಲವನ್ನೂ ಜನರ ಮುಂದೆ ಇಡುವುದು ನಮ್ಮ ಕೆಲಸ. ಹಾಗಾಗದಿದ್ದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ. ಹರಿಯಾಣದಲ್ಲಿ ನಡೆದ ಅಥವಾ ಪ್ರಚೋದಿಸಲ್ಪಟ್ಟ ಗಲಭೆಗಳು ಇದಕ್ಕೆ ಉದಾಹರಣೆಯಾಗಿದೆ” ಎಂದು ಅವರು ಹೇಳಿದರು.