ಗುಂಡ್ಲುಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಹೆರಿಗೆಗೆ ವೈದ್ಯರಿಲ್ಲದೆ ಗರ್ಭಿಣಿಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ರಾತ್ರಿ ಕರೆಂಟ್ ಹೋದರೆ ಕಗ್ಗತ್ತಲಲ್ಲಿಯೇ ಕಾಲ ಕಳೆಯುವ ಸ್ಥಿತಿ ಬಂದಿದೆ.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭಾನುವಾರ ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ವನಜಾ ಎಂಬಾಕೆಯನ್ನು ಕರೆದೊಯ್ಯಲಾಗಿದೆ. ಈ ವೇಳೆ ಹೆರಿಗೆ ಮಾಡಿಸುವ ಸ್ತ್ರೀ ರೋಗ ತಜ್ಞರು ಹಾಗು ಅನಸ್ತೇಷಿಯಾ (ಅರವಳಿಕೆ) ವೈದ್ಯರಿಲ್ಲದ ಕಾರಣ ಗರ್ಭಿಣಿಯ ಕುಟುಂಬಸ್ಥರು ಆಸ್ಪತ್ರೆ ಆಡಳಿತ ಮಂಡಳಿ ಹಾಗು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿ, ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರನ್ನು ಪ್ರಶ್ನಿಸಿದರೆ ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾತ್ರಿ ವೇಳೆ ಹೆರಿಗೆ ಮಾಡುವುದಿಲ್ಲ
ಆಸ್ಪತ್ರೆಯಲ್ಲಿ ಬೆಳಗಿನ ವೇಳೆ ಹೆರಿಗೆ ಮಾಡುವ ವೈದ್ಯರು ಮಾತ್ರ ಲಭ್ಯವಿದ್ದು, ರಾತ್ರಿ ವೇಳೆ ಯಾವುದೇ ಹೆರಿಗೆ ಪ್ರಕರಣ ಬಂದರೂ ಜಿಲ್ಲಾಸ್ಪತ್ರೆಗೆ ರವಾನಿಸುವುದು ಇಲ್ಲಿನ ವ್ಯವಸ್ಥೆಯಾಗಿದೆ. ಈ ಬಗ್ಗೆ ವೈದ್ಯರನ್ನು ಕೇಳಿದರೆ ಉಢಾಪೆಯಿಂದ ಉತ್ತರ ನೀಡುತ್ತಾರೆ ಎಂದು ಪಟ್ಟಣದ ನಿವಾಸಿ ನಂದೀಶ್ ದೂರಿದ್ದಾರೆ.
ಯುಪಿಎಸ್ ವ್ಯವಸ್ಥೆ ಇಲ್ಲ
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಯುಪಿಎಸ್ ಹಾಗು ಜನರೇಟರ್ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಕರೆಂಟ್ ಹೋದರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಗರ್ಭೀಣೀಯರು, ಬಾಣಂತಿಯರು ಕಗ್ಗತ್ತಲಿನಲ್ಲಿ ಕಾಲ ಕಳೆಯಬೇಕಾಗಿದೆ. ಇನ್ನೂ ಈ ಮಧ್ಯೆ ಶಸ್ತ್ರ ಚಿಕಿತ್ಸೆ ನಡೆಯುವಾಗ ಕರೆಂಟ್ ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಆದ್ದರಿಂದ ಆಸ್ಪತ್ರೆಗೆ ಯುಪಿಎಸ್ ವ್ಯವಸ್ಥೆ ಕಲ್ಪಿಸುವಂತೆ ಆನಂದ್ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಪ್ರಚಾರಕ್ಕಾಗಿ ಸಚಿವರನ್ನ ರೇಣುಕಾಚಾರ್ಯ ಭೇಟಿ ಮಾಡುತ್ತಿದ್ದಾರೆ: ಶಾಸಕ ಬಸವರಾಜ್ ಶಿವಗಂಗಾ
ಈ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ಪ್ರತಿಕ್ರಿಯೆ ನೀಡಿ, “ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವ ಕಾರಣ ರಾತ್ರಿ ವೇಳೆ ಹೆರಿಗೆ ಮಾಡಲು ಸಾಧ್ಯವಾಗುತ್ತಿಲ್ಲ. ತುರ್ತು ಪರಿಸ್ಥಿತಿ ಬಂದರೆ ಜಿಲ್ಲಾಸ್ಪತ್ರೆಗೆ ಸೂಚನೆ ನೀಡುತ್ತೇವೆ. ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ” ಎಂದು ಹಾರಿಕೆ ಉತ್ತರ ನೀಡಿದರು.
ಉತ್ತಮ ಕಟ್ಟಡ ಸೌಲಭ್ಯ ಮಾತ್ರ ಮರೀಚಿಕೆ
ಲಕ್ಷಾಂತರ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಿದರು ತಾಲ್ಲೂಕು ಕೇಂದ್ರದಲ್ಲಿ ರಾತ್ರಿಯ ಪಾಳಿಯದಲ್ಲಿ ಇಷ್ಟು ದೊಡ್ಡ ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡದೇ ಇರುವುದು ದುರಾದೃಷ್ಟ ಶಾಸಕ ಗಣೇಶ್ ಪ್ರಸಾದ್ ಅವರು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ವರದಿ: ಮಾಸ್ ಮೀಡಿಯಾ ಸಿಟಿಜನ್ ಜರ್ನಲಿಸ್ಟ್ ಮಲ್ಲೇಶ್ ವೀರನಪುರ