ಹಾಕಿ ಮಾಂತ್ರಿಕ ಮೇಜರ್ ಧ್ಯಾನ ಚಂದ್ ಅವರು ವೃತ್ತಿಯಿಂದ ಸೈನಿಕನಾಗಿದ್ದರೂ ಹಾಕಿ ಆಟದಲ್ಲಿ ಆಸಕ್ತಿ ಹೊಂದಿದ್ದರು. ಒಲಂಪಿಕ್ ಕ್ರೀಡಾ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ, ಸತತ ಮೂರು ಸಾರಿ ಸ್ವರ್ಣ ಪದಕ ಗಳಿಸಿದರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ಯಾನ ಚಂದ್ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಆಸ್ಟ್ರೇಲಿಯಾ ದೇಶದ ಕ್ರಿಕೆಟ್ ತಾರೆ ಬ್ರಾಡ್ ಮಾನ್, ಬ್ರೆಜಿಲ್ ದೇಶದ ಫೂಟ್ ಬಾಲ್ ಆಟಗಾರ ಪೀಲೆ ಅವರಂತೆ ಭಾರತ ದೇಶದ ಹಾಕಿ ಆಟದಲ್ಲಿ ಧ್ಯಾನ ಚಂದ್ ಅಪ್ರತಿಮರು” ಎಂದು ಹೇಳಿದರು.
“ಧ್ಯಾನ್ ಚಂದ್ ಅವರ ಆಟಕ್ಕೆ ಜರ್ಮನಿ ದೇಶದ ಹಿಟ್ಲರ್ ಕೂಡ ಮನಸೋತಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಕೂಡ ತಮಗೆ ಇಷ್ಟವಾದ ಆಟಗಳಲ್ಲಿ ಆಸಕ್ತಿ ತೋರಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾಸಕ್ತಿ ಹೊಂದಿರುವ ವಿದ್ಯಾರ್ಥಿಗಳಾದ ಸುನಿಲ್, ಪುರುಷೋತ್ತಮ, ಅಪೂರ್ವ, ಮೇಘನಾ,ಶಶಾಂಕ್, ಸುಚಿತ್ರ, ಹರೀಶ್‌ಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಮೋದಿನ್ ಸಾಬ್, ಚನ್ನಮ್ಮ, ಸುಮತಿ,ಶ್ವೇತಾ, ಉಮ್ಮೆಹಾನಿ, ಶಶಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಇದ್ದರು.