- 2013ರ ಅವಧಿಯಲ್ಲಿ ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿತ್ತು
- ವಿಚಾರಣೆಗಾಗಿ ಸಮಿತಿ ರಚಿಸಿ ದ್ವೇಷ ರಾಜಕಾರಣ ಮಾಡುತ್ತಿದೆ ಕಾಂಗ್ರೆಸ್
2013ರ ಅವಧಿಯಲ್ಲಿ ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿತ್ತು. ಕಾಂಗ್ರೆಸ್ ನಾಯಕರು ಸತ್ಯ ಹರಿಶ್ಚಂದ್ರರೇ ಆಗಿದ್ದರೆ 2013ರಿಂದ ಈವರೆಗೂ ತನಿಖೆ ಮಾಡಿಸಲಿ. ಆಗ ಕಾಂಗ್ರೆಸ್‌ನವರು ಕೂಡ ನ್ಯಾಯಬದ್ದವಾಗಿ ಇದ್ದಾರೆ ಎಂದು ಜನರು ಒಪ್ಪಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, “ಕೆಲಸವಿಲ್ಲದ ಕಾಂಗ್ರೆಸ್ ನಾಯಕರು ವಿಚಾರಣೆಗಾಗಿ ಸಮಿತಿ ರಚಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ಸರ್ಕಾರದ ಅಕ್ರಮ ಬಗ್ಗೆ ತನಿಖೆ ಮಾಡಿಸಲು ಎದೆಗಾರಿಕೆ ಇಲ್ಲ” ಎಂದು ಕಿಡಿಕಾರಿದರು.
“ಸರ್ಕಾರ ಎಷ್ಟೇ ವಿಚಾರಣಾ ಸಮಿತಿ ರಚಿಸಿದರೂ, ಅದನ್ನು ಎದುರಿಸುವ ತಾಕತ್ತು ಹಾಗೂ ಮನೋಸ್ಥೆರ್ಯ ನಮಗೆ ಇದೆ. ಕಳ್ಳರೇ ಸಾಚಾಗಳಂತೆ ಓಡಾಡುತ್ತಿರುವಾಗ, ಸಾಚಾಗಳಾದ ನಾವೇಕೆ ಹೆದರಬೇಕು? ನಮ್ಮ ವಿರುದ್ಧ ಒಂದಲ್ಲ, ನಾಲ್ಕು ವಿಚಾರಣೆಗಳನ್ನು ಮಾಡಿದರೂ ಹೆದರಿಕೆ ಇಲ್ಲ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾವು ಯಾರೂ ತಪ್ಪು ಮಾಡಿಲ್ಲ ಎಂದು ವಿಶ್ವಾಸದಿಂದ ಹೇಳುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ನೂರು, ಸಮಸ್ಯೆ ನೂರಾರು
“ಕೋವಿಡ್ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂಜಾನೆ ಐದೂವರೆಗೆ ಕರೆ ಮಾಡಿ ಸಭೆ ಕರೆಯುತ್ತಿದ್ದರು. ಆಗ ಕಾಂಗ್ರೆಸ್ ನಾಯಕರು ಮಾಸ್ಕ್ ಧರಿಸಿಕೊಂಡು, ಮನೆಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಿಕೊಂಡು ಕುಳಿತಿದ್ದರು. ಆದರೆ ನಾವೆಲ್ಲರೂ ಆಸ್ಪತ್ರೆ, ರೋಗಿಗಳ ಬಳಿ ತೆರಳಿ ಪರಿಶೀಲನೆ ನಡೆಸಿ ರಾಜ್ಯದ ಜನರ ರಕ್ಷಣೆ ಮಾಡಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಮಾಡಿದರೂ ನಾವು ಹೆದರುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ಆರಂಭಿಸಿದೆ” ಎಂದು ವಾಗ್ದಾಳಿ ನಡೆಸಿದರು.
“ಸರ್ಕಾರ ಯಾರಪ್ಪಂದೂ ಅಲ್ಲ. ಇದು ರಾಜ್ಯದ ಜನರ ಸರ್ಕಾರ. ತೆರಿಗೆ ಹಣ ಆರೂವರೆ ಕೋಟಿ ಜನರದ್ದು. ಯಾವುದೇ ಪಂಚಾಯಿತಿಗೆ ಅನುದಾನವನ್ನು ಖೋತಾ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ. ಗ್ಯಾರಂಟಿ ಗಿಮಿಕ್ ಮಾಡಿ 2 ಸಾವಿರ ರೂಪಾಯಿಗೆ ರಾಜ್ಯವನ್ನು ಮಾರಾಟ ಮಾಡುವ ಸ್ಥಿತಿ ಬಂದಿದೆ. ಕಾಂಗ್ರೆಸ್ ಸರ್ಕಾರ ಈಗಲೇ 85 ಸಾವಿರ ಕೋಟಿ ರೂ. ಸಾಲ ಮಾಡಿದ್ದು, ಇನ್ನು ಐದು ವರ್ಷದಲ್ಲಿ 5 ಲಕ್ಷ ಕೋಟಿ ರೂ. ಸಾಲ ಆಗಲಿದೆ” ಎಂದು ಹರಿಹಾಯ್ದರು.