ಭೀಮದೇವರಪಲ್ಲಿ ಬ್ರಾಂಚಿ ಚಿತ್ರವು ಪ್ರಧಾನಿ ಮೋದಿ ಕಪ್ಪು ಹಣ ವಾಪಸ್ ತಂದು ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುತ್ತೇನೆ ಎಂದು ನೀಡಿದ್ದ ಭರವಸೆಯನ್ನು ವ್ಯಂಗ್ಯ ಮಾಡುತ್ತದೆ. ಬಿಜೆಪಿಯ ಹುಸಿಘೋಷಣೆಗಳು ಹೇಗೆ ಜನರನ್ನು ಮೋಸ ಮಾಡುತ್ತವೆ ಎನ್ನುವುದನ್ನು ಚಿತ್ರ ತೋರಿಸುತ್ತದೆ. ಬಿಜೆಪಿಯ ಮುಖವಾಡ ಕಳಚಲೆಂದೇ ಬಿಆರ್‌ಎಸ್ ಮುಖಂಡರು ಮಾಡಿದ ಸಿನಿಮಾ ಇದು ಎನ್ನಲು ಹಲವು ಕಾರಣಗಳಿವೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿ ಬರಲಿರುವ ಚುನಾವಣೆಗಳ ದೃಷ್ಟಿಯಿಂದ ತೆಲುಗು ಚಿತ್ರರಂಗದ ಮೇಲೆ ವಿಶೇಷ ಕಣ್ಣು ನೆಟ್ಟು, ಏನೇನು ಮಾಡುತ್ತಿದೆ ಎನ್ನುವುದರ ಬಗ್ಗೆ ಈದಿನ.ಕಾಮ್ ಇತ್ತೀಚೆಗೆ ಎರಡು ಕಂತುಗಳಲ್ಲಿ ವಿಶೇಷ ಲೇಖನಗಳನ್ನು ಪ್ರಕಟಿಸಿತ್ತು. ರಾಜಮೌಳಿ ಅವರ ತಂದೆ ವಿಜಯೇಂದ್ರಪ್ರಸಾದ್, ನಟ ನಿಖಿಲ್ ಸಿದ್ಧಾರ್ಥ್ ಅಂಥವರ ಮೂಲಕ ಹಿಂದುತ್ವವಾದಿ ಕಂಟೆಂಟ್ ಅನ್ನು ಸಿನಿಮಾಗಳಲ್ಲಿ ಹೇಗೆ ಬಿತ್ತುತ್ತಿದೆ; ಆ ಚಿತ್ರಗಳು ಹಿಂದಿ ಭಾಷಿಕ ರಾಜ್ಯಗಳಲ್ಲಿ ಎಷ್ಟು ಜನಪ್ರಿಯವಾಗುತ್ತಿವೆ ಎಂದು ವಿವರಿಸಿದ್ದೆವು. ಈಗ ಅದಕ್ಕೆ ವಿರುದ್ಧವಾದ ಟ್ರೆಂಡ್‌ವೊಂದು ತೆಲುಗು ಚಿತ್ರರಂಗದಲ್ಲಿ ಸಣ್ಣ ಮಟ್ಟದಲ್ಲಿ ಚಾಲ್ತಿಗೆ ಬಂದಿದೆ. ಅದರ ಭಾಗವಾಗಿ ಬಂದಿರುವ ಚಿತ್ರವೇ ‘ಭೀಮದೇವರಪಲ್ಲಿ ಬ್ರಾಂಚಿ’.
ಪ್ರಧಾನಿ ಮೋದಿ ಕಪ್ಪು ಹಣ ವಾಪಸ್ ತರುವ ಮತ್ತು ದೇಶದ ಪ್ರತಿಯೊಬ್ಬರ ಖಾತೆಗಳಿಗೆ 15 ಲಕ್ಷ ರೂಪಾಯಿ ಹಾಕುವ ಭರವಸೆಯ ಕುರಿತಾದ ಚಿತ್ರ ‘ಭೀಮದೇವರಪಲ್ಲಿ ಬ್ರಾಂಚಿ’. ಇದೇನು ಕಲ್ಪಿತ ಕಥೆಯಲ್ಲ. 2022ರಲ್ಲಿ ಮಹಾರಾಷ್ಟ್ರದ ರೈತನೊಬ್ಬನ ಅಕೌಂಟ್‌ಗೆ 15 ಲಕ್ಷ ರೂಪಾಯಿ ಜಮೆಯಾಗಿತ್ತು. ಆ ರೈತ ಮೋದಿಯವರೇ ತನ್ನ ಖಾತೆಗೆ ಹಣ ಡೆಪಾಸಿಟ್ ಮಾಡಿದ್ದಾರೆ ಎಂದು ತಿಳಿದು ಆ ಹಣವನ್ನು ಖರ್ಚು ಮಾಡಿದ್ದ. ನಂತರ ಅದೊಂದು ದೊಡ್ಡ ರಗಳೆಯಾಗಿತ್ತು. ಅದೇ ಘಟನೆ ಆಧರಿಸಿ ನಿರ್ದೇಶಕ ರಮೇಶ್ ಚೆಪ್ಪಲ ‘ಭೀಮದೇವರಪಲ್ಲಿ ಬ್ರಾಂಚಿ’ ಸಿನಿಮಾ ರೂಪಿಸಿದ್ದಾರೆ.
ಪ್ರಧಾನಿ ಮೋದಿ ಆರಂಭಿಸಿದ ಜನ್ ಧನ್ ಯೋಜನೆಯ ಮೂಲಕವೇ ಚಿತ್ರ ಆರಂಭವಾಗುತ್ತದೆ. ಭೀಮದೇವರಪಲ್ಲಿಯ ನಾಗರಿಕರು ಬ್ಯಾಂಕ್‌ಗೆ ಮುಗಿಬಿದ್ದು ಖಾತೆ ತೆರೆಯುತ್ತಾರೆ. ಅಕೌಂಟ್ ತೆರೆದರೆ ತಮ್ಮ ಖಾತೆಗಳಿಗೆ ಸರ್ಕಾರ ಹಣ ಹಾಕುತ್ತದೆ ಎನ್ನುವ ಪ್ರಚಾರವನ್ನು ಅವರು ನಂಬಿರುತ್ತಾರೆ. ಹೀಗಿರಬೇಕಾದರೆ, ಆ ಊರಿನ ದಲಿತ ಜಂಪಣ್ಣನ ತಾಯಿ ಸಮ್ಮಕ್ಕನ ಖಾತೆಗೆ ಒಂದು ದಿನ 15 ಲಕ್ಷ ರೂಪಾಯಿ ಜಮೆಯಾಗುತ್ತದೆ. ಜಂಪಣ್ಣನಿಗೆ, ಆಕಾಶಕ್ಕೆ ಮೂರೇ ಗೇಣು. ಪ್ರಧಾನಿಯೇ ತನ್ನ ಅಕೌಂಟ್‌ಗೆ ಹಣ ಹಾಕಿದ್ದಾರೆ ಎಂದು ಸ್ನೇಹಿತನೊಬ್ಬನಿಂದ ಪ್ರಧಾನಿಗೆ ಒಂದು ಧನ್ಯತಾ ಪತ್ರವನ್ನು ಬರೆಸುತ್ತಾನೆ.
ಹಣ ಬಂದ ಗಳಿಗೆಯಿಂದ ಆತನ ಜೀವನ ಶೈಲಿಯೇ ಬದಲಾಗುತ್ತದೆ. ಹಣವನ್ನು ಬೇಕಾಬಿಟ್ಟಿ ಚೆಲ್ಲತೊಡಗುತ್ತಾನೆ. ಮೈಮೇಲೆ ಬಣ್ಣ ಬಣ್ಣದ ಬಟ್ಟೆ, ಓಡಾಡಲು ದ್ವಿಚಕ್ರ ವಾಹನ, ಮುಖದ ಮೇಲೆ ಕಪ್ಪು ಕಣ್ಣಡಕ; ಊರಿನ ಗುಡಿಸಲಿನಲ್ಲಿ ಹೆಂಡ ಕುಡಿಯುತ್ತಿದ್ದವನು ದುಬಾರಿ ವಿಸ್ಕಿಗೆ ಬಡ್ತಿ ಪಡೆಯುತ್ತಾನೆ. ಆ ಹಣದಲ್ಲಿ ಮನೆಯನ್ನಾದರೂ ಕಟ್ಟೋಣ ಎಂದು ಆತನ ಹೆಂಡತಿ ಮತ್ತು ತಾಯಿ ಒತ್ತಾಯಿಸುತ್ತಾರೆ. ಆದರೆ, ಜಂಪಣ್ಣ ಅವರ ಮಾತನ್ನು ಕೇಳದೇ ಬ್ಯುಸಿನೆಸ್ ಮಾಡುತ್ತೇನೆ ಎಂದು ಹೋಗಿ ಅಲ್ಲೂ ತನ್ನ ಸ್ನೆಹಿತನಿಂದಲೇ ಮೋಸ ಹೋಗುತ್ತಾನೆ.

ಇವೆಲ್ಲದರ ಜೊತೆಗೆ ಒಂದು ಅಂತರಜಾತಿ ಪ್ರೇಮ ಕಥೆಯೂ ಚಿತ್ರದಲ್ಲಿದೆ. ಹೀಗೆ ಹಲವು ಕೋನಗಳಲ್ಲಿ ಹಳ್ಳಿಯ ಬದುಕನ್ನು ತೋರಿಸುತ್ತಾ, ಮೋದಿ ಸರ್ಕಾರದ 15 ಲಕ್ಷದ ಭರವಸೆ ಆ ಊರಿನ ಬದುಕಿನಲ್ಲಿ ಏನೆಲ್ಲ ಪಲ್ಲಟಗಳಿಗೆ ಕಾರಣವಾಯಿತು ಎನ್ನುವುದು ಚಿತ್ರದಲ್ಲಿ ತೋರಿಸಲಾಗಿದೆ.
ಚಿತ್ರದ ಶಕ್ತಿ, ಅದರ ಸರಳ ಕಥೆ ಮತ್ತು ಅದನ್ನು ತೆಲಂಗಾಣದ ಪ್ರಾದೇಶಿಕತೆಯಲ್ಲಿ ಹೇಳಿರುವುದು. ಬಹುತೇಕ ಹೊಸ ನಟ ನಟಿಯರೇ ಇರುವ ಇದು ರಮೇಶ್ ಚೆಪ್ಪಲ ನಿರ್ದೇಶನದ ಎರಡನೇ ಸಿನಿಮಾ. ಕಡಿಮೆ ಬಜೆಟ್‌ನಲ್ಲಿ ಚಿತ್ರೀಕರಿಸಿರುವುದು ಚಿತ್ರದಲ್ಲಿ ಎದ್ದು ಕಾಣುತ್ತದೆ.ಹಲವು ಕೊರತೆಗಳ ನಡುವೆಯೂ ಇದೊಂದು ಸರಳ, ಸುಂದರ ಚಿತ್ರ. ತೆಲಂಗಾಣದ ಗ್ರಾಮೀಣ ಪರಿಸರವನ್ನು ಚಿತ್ರದಲ್ಲಿ ಅಥೆಂಟಿಕ್ಕಾಗಿ ತೋರಿಸಿದ್ದಾರೆ. ಮುಖ್ಯವಾಗಿ, ತೆಲಂಗಾಣ ತೆಲುಗು ಚಿತ್ರದ ವಿಶೇಷ ಆಕರ್ಷಣೆಯಾಗಿದೆ. ಈ ಚಿತ್ರದ ಮೂಲಕ ಪ್ರಧಾನಿ ಮೋದಿಯವರು ಕಪ್ಪು ಹಣ ವಾಪಸ್ ತಂದು ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುತ್ತೇನೆ ಎಂದು ನೀಡಿದ್ದ ಭರವಸೆಯನ್ನು ವ್ಯಂಗ್ಯ ಮಾಡಲಾಗಿದೆ. ಬಿಜೆಪಿಯ ಹುಸಿಘೋಷಣೆಗಳು ಹೇಗೆ ಜನರನ್ನು ಮೋಸ ಮಾಡುತ್ತವೆ ಎನ್ನುವುದನ್ನು ಚಿತ್ರ ತೋರಿಸುತ್ತದೆ. ಬಿಜೆಪಿಯ ಮುಖವಾಡ ಕಳಚಲು ಮಾಡಿದ ಸಿನಿಮಾ ಇದು ಎನ್ನಲು ಹಲವು ಕಾರಣಗಳಿವೆ.

ಈ ಚಿತ್ರದ ನಿರ್ಮಾಪಕಿ ಬತ್ತಿನಿ ಕೀರ್ತಿಲತಾ ಗೌಡ್, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ ಮುಖಂಡರು. ಈ ಚಿತ್ರದ ಟೀಸರ್ ಅನ್ನು ಕೆಸಿಆರ್ ಮಗ, ತೆಲಂಗಾಣದ ಐಟಿಬಿಟಿ ಸಚಿವ ಕೆ ಟಿ ರಾಮರಾವ್ ಬಿಡುಗಡೆ ಮಾಡಿದ್ದರು. ಜೊತೆಗೆ ಚಿತ್ರದಲ್ಲಿ ರಾಜಕೀಯ ಪಕ್ಷಗಳ ಭರವಸೆಗಳು ಜನರ ಮೇಲೆ ಎಂಥ ಪರಿಣಾಮ ಬೀರುತ್ತವೆ ಎನ್ನುವುದರ ಬಗ್ಗೆ ಒಂದು ಟಿವಿ ಚರ್ಚೆ ನಡೆಯುತ್ತದೆ. ಅದರಲ್ಲಿ ತೆಲಂಗಾಣದ ಸಾರ್ವಜನಿಕ ಜೀವನದಲ್ಲಿ ಹೆಸರು ಮಾಡಿರುವ ಮಾಜಿ ಶಾಸಕ ಕೆ ನಾಗೇಶ್ವರ್, ನಿವೃತ್ತ ಹಿರಿಯ ಅಧಿಕಾರಿ, ಹಾಲಿ ರಾಜಕಾರಣಿ ಜೆ ಡಿ ಲಕ್ಷ್ಮೀನಾರಾಯಣ್, ಕಾಂಗ್ರೆಸ್ ಮುಖಂಡ ಅಡ್ಡಂಕಿ ದಯಾಕರ್ ಭಾಗವಹಿಸಿ ತಮ್ಮ ವಾದಸರಣಿ ಮುಂದಿಡುತ್ತಾರೆ. ಆ ಸುದೀರ್ಘ ದೃಶ್ಯವು ಸಿನಿಮಾದ ಕಥೆಯ ಓಟಕ್ಕೆ ಧಕ್ಕೆ ತರುವಂತಿದ್ದರೂ, ಚಿತ್ರದ ಕಥೆಯನ್ನು ತಾತ್ವೀಕರಿಸಲು ನೋಡುಗರಿಗೆ ನೆರವಾಗುತ್ತದೆ.
ಕೇಂದ್ರ ಸರ್ಕಾರವನ್ನು ನೇರವಾಗಿ ಟೀಕಿಸಿರುವ ಈ ಚಿತ್ರ ಬಿಡುಗಡೆಯಾಗುವುದೋ ಇಲ್ಲವೋ ಎನ್ನುವ ಆತಂಕ ಚಿತ್ರತಂಡಕ್ಕಿತ್ತು. ಅದಕ್ಕೆ ತಕ್ಕಂತೆ ಜನಧನ್ ಅನ್ನೋ ಪದ ಬಳಸಿದ್ದಕ್ಕಾಗಿ ಸೆನ್ಸಾರ್‌ನವರು ಆಕ್ಷೇಪಣೆ ಮಾಡಿದ್ದರು. ಹಲವು ಕಟ್‌ಗಳನ್ನು ಸೂಚಿಸಿದ್ದರು. ಕೊನೆಗೆ ಹೇಗೋ ಮಾಡಿ ಚಿತ್ರ ಬಿಡುಗಡೆ ಮಾಡಿದ್ದಾರೆ. ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯಗಳು ಬಂದಿದ್ದು, ನೋಡುಗರಿಂದಲೂ ಮೆಚ್ಚುಗೆ ಬಂದಿದೆ. ಥಿಯೇಟರ್‌ಗಳಲ್ಲೂ ಬಿಡುಗಡೆ ಕಂಡಿದ್ದು ಈ ಚಿತ್ರ ಸದ್ಯ ಓಟಿಟಿಯಲ್ಲಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.
ಒಂದು ವಾಸ್ತವ ಘಟನೆಯನ್ನೇ ಆಯ್ದುಕೊಂಡು, ಅದಕ್ಕೆ ಸಮಕಾಲೀನ ರಾಜಕಾರಣದ ಆಯಾಮ ನೀಡಿ ಹೇಗೆ ಒಂದು ಪರಿಣಾಮಕಾರಿ ಚಿತ್ರ ಮಾಡಬಹುದೆಂಬುದನ್ನು ‘ಭೀಮದೇವರಪಲ್ಲಿ ಬ್ರಾಂಚಿ’ ತೋರುತ್ತದೆ. ಆರ್‌ಎಸ್‌ಎಸ್‌ನ ಪ್ರಾಪಗಾಂಡಾ ಚಿತ್ರಗಳಿಗೆ ಕೌಂಟರ್ ಕೊಡಲು ನಿರ್ಮಿಸಲಾಗಿರುವ ಈ ಸಣ್ಣ ಚಿತ್ರ ತನ್ನ ಆಶಯದಿಂದಲೂ ಜನರ ಗಮನ ಸೆಳೆಯುತ್ತಿದೆ.
ಅತೀ ಅಗತ್ಯದ ಪ್ರಯತ್ನ. ಚಿತ್ರ ಯಶಸ್ವಿಯಾಗಲಿ. ಸುಳ್ಳಿಗೆ ಸೋಲಾಗಲಿ. ಸತ್ಯ ಗೆಲ್ಲಲಿ. ಜನರು ಎಚ್ಚರಗೊಳ್ಳಲಿ.
ಹಿಂದಿ ಅರ್ಥಗಲ್ಲ ಅಂದ್ರೆ ಗೊತ್ತಿರೋರ್ನ ಕೇಳಿ – ಮೋದಿ ಜಿ ಏನು ಅಂದ್ರ ತಿಳ್ಕೊಳಿ. ಬುದ್ದಿ ಇಲ್ಲದಿರೋರು ಟ್ರಾನ್ಸಾಷಣೆ ಕರೆಕ್ಟ್ ಅನ್ಕೊಂಡು ಅದನ್ನೇ ಫಿಲಂ ಅಲ್ಲಿ ತೋರ್ಸೋದು ಅಂದ್ರೆ ಇನ್ನೆಷ್ಟು ಬುದ್ದಿ ಹೀನ ಕೆಲಸ ಇನ್ನು ಅದನ್ನ ನೋಡದಂತೂ ಬಿಡು…. ದೇವರೇ ಕಾಪಾಡು.
ಕರ್ನಾಟಕದಲ್ಲಿ ಎಲ್ಲರು ೨೦೦ ಯೂನಿಟ್ ಫ್ರೀ ಅಂತ ಹೇಳಿದ ಮಾತು ಎಲ್ಲಿಗೆ ಬಂದು ನಿಲ್ತು ಅಂತ ಮಾತ್ರ ಹೇಳೋ ಜೌರ್ನಲಿಸ್ಟ್ ಕಾಣಿಸ್ಲಿಲ್ಲ. ಪಾಪ ಆ ವಿಡಿಯೋ ಸಿಗ್ಲಿಲ್ವೋ ಇಲ್ಲ ಜಾಣಬರಹವೋ !!!