- ‘ಮನೆ ಯಜಮಾನಿಗೆ 2000 ರೂ. ನೇರವಾಗಿ ವರ್ಗಾವಣೆ’
- ‘ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗಲಿದೆ’
ವೈಯಕ್ತಿಕ ಆಸೆ, ಆಕಾಂಕ್ಷೆ, ಅವಶ್ಯಕತೆಗಳನ್ನು ತ್ಯಾಗ ಮಾಡಿ ಕುಟುಂಬಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ನಾಡಿನ ಕೋಟ್ಯಂತರ ತಾಯಂದಿರು ಇಂದು ನಮ್ಮ “ಗೃಹಲಕ್ಷ್ಮಿ” ಯೋಜನೆಯಿಂದ ಸ್ವತಂತ್ರ, ಸ್ವಾವಲಂಬಿ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
“ಗೃಹಲಕ್ಷ್ಮಿ” ಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, “ನಮ್ಮ ಸರ್ಕಾರ ರಾಜ್ಯದ ಪ್ರತಿಯೊಬ್ಬ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ 2000 ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡಿ ನುಡಿದಂತೆ ನಡೆಯಲಿದೆ” ಎಂದಿದ್ದಾರೆ.
“ಇದೊಂದು ಐತಿಹಾಸಿಕ ದಿನ. ಕಾರ್ಯಕ್ರಮದ ಚಾಲನೆಗೆ ಇನ್ನೇನು ಕೆಲವೇ ನಿಮಿಷಗಳು ಉಳಿದಿರುವ ಈ ಹೊತ್ತಿನಲ್ಲಿ ನಾಡಿನ ತಾಯಂದಿರ ಮುಖದಲ್ಲಿ ಮೂಡುವ ನೆಮ್ಮದಿಯ ನಗೆ ಕಾಣಲು ಉತ್ಸುಕನಾಗಿದ್ದೇನೆ. ಮಹಿಳೆಯರ ಸಬಲೀಕರಣದಿಂದ ಬಲಿಷ್ಠ ಸಮಾಜ ನಿರ್ಮಾಣ. ಮಹಿಳಾ ಸಮಾನತೆಯಿಂದ ಸಮ ಸಮಾಜ ಸ್ಥಾಪನೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ನೂರು, ಸಮಸ್ಯೆ ನೂರಾರು
“ಕುಟುಂಬ ನಿರ್ವಹಣೆಯ ಹೊಣೆಹೊತ್ತ ನಾಡಿನ ಕೋಟಿಗೂ ಅಧಿಕ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಬೆಲೆಯೇರಿಕೆಯ ಸಂಕಷ್ಟಗಳ ನಡುವೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಅವರ ಕನಸನ್ನು ಗೃಹಲಕ್ಷ್ಮಿ ಯೋಜನೆ ನನಸಾಗಿಸಲಿದೆ” ಎಂದು ತಿಳಿಸಿದ್ದಾರೆ.
ಬುಧವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯಸಿಎ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ.