ಬ್ಯಾಂಕ್ ಅಧಿಕಾರಿ-ಸಿಬ್ಬಂದಿಗಳು ರೈತರು ಹಾಗೂ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳಿಗೆ ಸ್ಪಂಧಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ ಪಾಟೀಲ್ ಸೂಚನೆ ನೀಡಿದ್ದಾರೆ.
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಲೀಡ್ ಬ್ಯಾಂಕ್ ಪದಾಧಿಕಾರಿಗಳು, ಹೆಸ್ಕಾಂ, ಕೃಷಿ ಇಲಾಖೆ ಹಾಗೂ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. “ಮಳೆ ಕೊರತೆಯಿಂದಾಗಿ ರೈತರ ಪರಿಸ್ಥಿತಿಯು ಗಂಭೀರವಾಗಿದೆ. ಸರ್ಕಾರದಿಂದ ಫಲಾನುಭವಿಗಳ ಖಾತೆಗಳಿಗೆ ಬೆಳೆ ವಿಮೆ, ವೃದ್ಯಾಪ ವೇತನ, ಅನ್ನಭಾಗ್ಯ, ನರೇಗಾ ಕೂಲಿ ಮೊತ್ತವನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಮೊತ್ತವನ್ನು ಯಾವುದೇ ಕಾರಣಕ್ಕೂ ಅವರ ಸಾಲದ ಕಂತುಗಳಿಗಾಗಿ ಕಠಾವಣೆ ಹಾಗೂ ಖಾತೆಗಳನ್ನು ಸ್ಥಗಿತಗೊಳಿಸದಂತೆ ಸೂಚನೇ ನೀಡಿದರು. ಗ್ರಾಮೀಣ ಭಾಗದ ಕೆಲವೊಂದು ಬ್ಯಾಂಕ್ ಶಾಖೆಗಳಲ್ಲಿನ ಅಧಿಕಾರಿ ಸಿಬ್ಬಂದಿಗಳು ರೈತರೊಂದಿಗೆ ಸೌಜನ್ಯದಿಂದ ವರ್ತಿಸದೇ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳಿದ್ದು ಈ ಕುರಿತು ಜಿಲ್ಲೆಯ ಎಲ್ಲ ಬ್ಯಾಂಕ್ ಶಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದರು. ಲೀಡ ಬ್ಯಾಂಕ ಮ್ಯಾನೇಜರ ಅವರು ಲಕ್ಷ್ಮೇಶ್ವರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಸೂಚನೆ ನೀಡಲಾಗಿದೆ. ಇಂತಹ ಸಮಸ್ಯೆಗಳನ್ನು ಸಮಾಧಾನವಾಗಿ ಪರಿಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಸೂಚನೆ ನೀಡಿದರು.
“ಲಕ್ಷ್ಮೇಶ್ವರ ಭಾಗದ ರೈತರ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ರೈತರ ಹಿತದೃಷ್ಟಿಯಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ವಿದ್ಯುತ್ ಪೂರೈಸಬೇಕು. ರೈತರ ಅಭಿಪ್ರಾಯಗಳನ್ನು ಅರಿತು ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಲಕ್ಷ್ಮೇಶ್ವರ ಭಾಗದ ರೈತರಿಗೆ ಪಾಳೆ ಪ್ರಕಾರ ಹಗಲು ಹಾಗೂ ರಾತ್ರಿ ವಿದ್ಯುತ್ ಪೂರೈಸಬೇಕು” ಎಂದು ಹೇಳಿದರು.
ಲೀಡ ಬ್ಯಾಂಕ ಮ್ಯಾನೇಜರ ಮಾತನಾಡಿ, “ಸಾಮಾಜಿಕ ಭದ್ರತೆ ಯೋಜನೆಯಡಿಯ ಹಣವನ್ನು ಸಾಲ ಹೊಂದಾಣಿಕೆ ಮೊತ್ತಕ್ಕೆ ಕಡಿತ ಮಾಡದಂತೇ ಎಲ್ಲ ಬ್ಯಾಂಕಗಳಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೇ ಲಕ್ಷ್ಮೇಶ್ವರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಬರ ಪರಿಸ್ಥಿತಿ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ: ಕೃಷಿ ಸಚಿವ ಚಲುವರಾಯಸ್ವಾಮಿ
ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ಕಲ್ಯಾಣಶೆಟ್ಟರ್ ಮಾತನಾಡಿ, “ಬಾಗೇವಾಡಿ, ಬೆಳ್ಳಟ್ಟಿ ವಿಧ್ಯುತ್ ಸರಬರಾಜು ಕೇಂದ್ರಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಮುಂದಿನ ಹದಿನೈದು ದಿನಗಳೊಳಗಾಗಿ ಬಾಗೇವಾಡಿ ಬೆಳ್ಳಟ್ಟಿ ವಿಧ್ಯುತ್ ಸರಬರಾಜು ಕೇಂದ್ರಗಳಿಂದ ವಿಧ್ಯುತ್ ಸರಬರಾಜು ಸರಾಗವಾಗಿ ಮಾಡಲಾಗುವದು. ಸಧ್ಯ ಮುಂಡರಗಿ ಹಾಗೂ ಲಕ್ಷ್ಮೇಶ್ವರ ವಿಭಾಗಗಳಲ್ಲಿ ನಿಯಮಿತವಾಗಿ ವಿಧ್ಯುತ ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಂಟಿ ಕೃಷಿ ನಿರ್ದೇಶಕಿ, ತಾರಾಮಣಿ, ವಿವಿಧ ಬ್ಯಾಂಕುಗಳ ಅಧಿಕಾರಿಗಳು ಸೇರಿದಂತೆ ರೈತ ಮುಖಂಡರು ಹಾಗೂ ಪ್ರತಿನಿಧಿಗಳು ಹಾಜರಿದ್ದರು.