- ಯಾರನ್ನೂ ಭೇಟಿ ಮಾಡದಂತೆ ವೈದರು ಕುಮಾರಸ್ವಾಮಿಗೆ ಸಲಹೆ
- ತಂದೆಯ ಆರೋಗ್ಯ ವಿಚಾರಿಸಿದ ಪುತ್ರ ನಿಖಿಲ್ ಕುಮಾರಸ್ವಾಮಿ
ಅನಾರೋಗ್ಯ ಕಾರಣದಿಂದ ಬುಧವಾರ ಬೆಂಗಳೂರಿನ ಜಯನಗರ ಅಪೊಲೊ ಆಸ್ಪತ್ರೆ ದಾಖಲಾಗಿದ್ದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಗುರುವಾರ ಅವರನ್ನು ಐಸಿಯುನಿಂದ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.
ಕುಮಾರಸ್ವಾಮಿ ಅವರಿಗೆ ಮೂರು ದಿನಗಳ ಕಾಲ ವಾರ್ಡ್ನಲ್ಲೇ ಚಿಕಿತ್ಸೆ ಮುಂದುವರೆಯಲಿದ್ದು, ಯಾರನ್ನೂ ಭೇಟಿ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.
ತಂದೆಯ ಅನಾರೋಗ್ಯದ ವಿಷಯ ಕೇಳಿ ವಿದೇಶ ಪ್ರವಾಸದಲ್ಲಿದ್ದ ನಿಖಿಲ್ ಕುಮಾರಸ್ವಾಮಿ, ಇಂದು ಬೆಳಗ್ಗೆ ಬೆಂಗಳೂರಿಗೆ ಮರಳಿ, ತಂದೆಯ ಆರೋಗ್ಯ ವಿಚಾರಿಸಿದರು. ಹಾಗೆಯೇ ನಿರ್ಮಲಾನಂದ ಸ್ವಾಮಿಗಳು ಸಹ ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಿದ್ದಾರೆ.
ಕುಮಾರಸ್ವಾಮಿ ಅವರಿಗೆ ಬುಧವಾರ ಬೆಳಗ್ಗೆ 3.40ರ ಸುಮಾರಿಗೆ ಸುಸ್ತು ಕಾಣಿಸಿಕೊಂಡು, ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ.ಸತೀಶ್ ಚಂದ್ರ ಮತ್ತು ಅವರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, “ಕುಮಾರಸ್ವಾಮಿ ಅವರಿಗೆ ಲಘುವಾದ ಸ್ಟ್ರೋಕ್ ಆಗಿದ್ದು, ಮಿದುಳಿನ ಎಡಭಾಗದಲ್ಲಿ ತೊಂದರೆ ಉಂಟಾಗಿ ಶರೀರದ ಬಲಭಾಗಕ್ಕೆ ಸಮಸ್ಯೆ ಆಗಿತ್ತು” ಎಂದು ವಿವರಿಸಿದ್ದಾರೆ.
“ಚಿಕಿತ್ಸೆ ಮುಂದುವರಿದಿದ್ದು, ಕುಮಾರಸ್ವಾಮಿ ಚೆನ್ನಾಗಿ ಮಾತನಾಡುತ್ತಿದ್ದಾರೆ. ಹೃದಯ ಬಡಿತ, ರಕ್ತದೊತ್ತಡ ಎಲ್ಲವೂ ಉತ್ತಮವಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ” ಎಂದು ಡಾ.ಸತೀಶ್ಚಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಗೆ 9 ವರ್ಷಗಳಿಂದ ಕಾಣದ ಅಕ್ಕತಂಗಿಯರ ಸಂಕಟ ಈಗ ಕಂಡಿದ್ದು ಹೇಗೆ?
ಗುಣಮುಖರಾಗಲಿ ಎಂದು ಗಣ್ಯರ ಹಾರೈಕೆ
ಜಯನಗರದ ಅಪೊಲೊ ಆಸ್ಪತ್ರೆಗೆ ದಾಖಲಾಗಿರುವ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಹಾರೈಸಿದ್ದಾರೆ.
“ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
“ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸಿದ್ದೇನೆ” ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.