ಆಗಸ್ಟ್ 31ರಂದು ಕರ್ನಾಟಕ ವಿಧಾನ ಪರಿಷತ್‌ನ ನೂತನ ಸದಸ್ಯರಾಗಿ ಉಮಾಶ್ರೀ, ಎಂ ಆರ್ ಸೀತಾರಾಮ್ ಹಾಗೂ ಹೆಚ್ ಪಿ ಸುಧಾಮ್ ದಾಸ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಭಾಪತಿ ಅವರು ನೂತನ ಸದಸ್ಯರಿಗೆ ಸಂಪ್ರದಾಯದಂತೆ ವಿಧಾನಪರಿಷತ್ತಿನ ನಡಾವಳಿ ಪುಸ್ತಕ ಒಳಗೊಂಡ ಸೂಟ್ ಕೇಸ್ ನೀಡಿ ಶುಭ ಹಾರೈಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸದಸ್ಯರಿಗೆ ಹೂಗುಚ್ಚ ನೀಡಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.
ಉಮಾಶ್ರೀ ಅವರಿಗೆ ಕಲಾವಿದರ ಕೋಟಾದಡಿ ಸ್ಥಾನ ನೀಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ ಆರ್ ಸೀತಾರಾಮ್ ಹಾಗೂ ಸಮಾಜಸೇವೆ ಹೆಸರಲ್ಲಿ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್ ಅವರಿಗೆ ಸ್ಥಾನ ನೀಡಲಾಗಿದೆ.
ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಸೇರಿದಂತೆ ಹಲವು ಶಾಸಕರು, ನೂತನ ಸದಸ್ಯ ಎಂ.ಆರ್. ಸೀತಾರಾಂ ಅವರ ಪತ್ನಿ ಶೃತಿ ಸೀತಾರಾಂ, ಪುತ್ರ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ, ಅವರ ಪತ್ನಿ ಆಶಿತ ರಕ್ಷಾ ರಾಮಯ್ಯ, ಮತ್ತೋರ್ವ ಪುತ್ರ ಸುಂದರ್ ರಾಮ್ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಎಂ.ಆರ್. ಸೀತಾರಾಂ ಅವರ ಮೊಮ್ಮಗ, ರಕ್ಷಾ ರಾಮಯ್ಯ ಅವರ ಪುತ್ರ ಸಮ್ಮರ್ ರಾಮಯ್ಯ ಅವರನ್ನು ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿಕೊಂಡು ಇದೇ ಸಂದರ್ಭದಲ್ಲಿ ಆಶಿರ್ವದಿಸಿದ್ದು ವಿಶೇಷವಾಗಿತ್ತು.