ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ಕಾಲ ‘ಸಂಸತ್ತಿನ ವಿಶೇಷ ಅಧಿವೇಶನ’ ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
“ಸಂಸತ್ತಿನ ವಿಶೇಷ ಅಧಿವೇಶನವನ್ನು ಸಪ್ಟೆಂಬರ್ 18 ರಿಂದ 22ರ ವರೆಗೆ ಕರೆಯಲಾಗಿದ್ದು ಒಟ್ಟು 5 ಅವಧಿಗಳು ಇರಲಿವೆ. 17ನೇ ಲೋಕಸಭೆಯ 13ನೇ ಅಧಿವೇಶನ ಹಾಗೂ ರಾಜ್ಯಸಭೆಯ 261 ನೇ ಅಧಿವೇಶನ ಇದಾಗಿರಲಿದೆ. ಅಮೃತ್ ಕಾಲದ ಈ ಮಹತ್ವದ ಕಾಲಫಟ್ಟದಲ್ಲಿ ಒಂದು ರಚನಾತ್ಮಕ ಅಧಿವೇಶವನ್ನು ಮುನ್ನೋಡುತ್ತಿದ್ದೇವೆ” ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮಣಿಪುರ ಹಿಂಸಾಚಾರದ ವಿರುದ್ಧ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆ ಗದ್ದಲಗಳ ನಡುವೆ ಮುಂಗಾರು ಅಧಿವೇಶನವು ಇತ್ತೀಚೆಗೆ ಮುಕ್ತಾಯಗೊಂಡಿತ್ತು. ಅದಾಗಿ ಒಂದು ತಿಂಗಳಲ್ಲಿ ವಿಶೇಷ ಅಧಿವೇಶನ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ವಿಶೇಷ ಕಲಾಪಗಳು ನಡೆಯಲಿದ್ದು, ಒಟ್ಟು ಐದು ದಿನ ಅಧಿವೇಶನ ಜರುಗಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ವಾಪಸ್ ನೀಡಲು ಹಾಗೂ ಶೀಘ್ರದಲ್ಲಿಯೇ ಚುನಾವಣೆ ನಡೆಸಲು ಕಾಲಮಿತಿ ಸಿದ್ಧಪಡಿಸಲಾಗುವುದು ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಭರವಸೆ ನೀಡಿದ ಬೆನ್ನಲ್ಲೇ ವಿಶೇಷ ಅಧಿವೇಶನ ಕರೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಹಿಂಡೆನ್ಬರ್ಗ್ 2.0? ಒಸಿಸಿಆರ್ಪಿ ವರದಿಯ ನಂತರ ಅದಾನಿ ಷೇರುಗಳು ತೀವ್ರ ಕುಸಿತ
ಇತ್ತೀಚಿಗೆ ನಡೆದ ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 20 ರಂದು ಪ್ರಾರಂಭವಾಗಿ ಆಗಸ್ಟ್ 12 ರಂದು ಮುಕ್ತಾಯವಾಯಿತು. ಆ ಸಂದರ್ಭದಲ್ಲಿ ಸರ್ಕಾರದಿಂದ 23 ಮಸೂದೆಗಳನ್ನು ಅಂಗೀಕರಿಸಲಾಯಿತು. ಮಣಿಪುರದ ಹಿಂಸಾಚಾರ ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ (ತಿದ್ದುಪಡಿ) 2023ರ ವಿವಾದಾತ್ಮಕ ಮಸೂದೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆದಿತ್ತು. ವಿಪಕ್ಷಗಳು ಸರ್ಕಾರ ಮಂಡಿಸಿದ ಯಾವುದೇ ಚರ್ಚೆಗಳಲ್ಲಿ ಪಾಲ್ಗೊಂಡಿರದೆ ಪ್ರತಿಭಟನೆ ನಡೆಸಿದ್ದವು.