ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್‌ಪಿ) ಅದಾನಿ ಸಮೂಹದ ಮತ್ತೊಂದು ವಂಚನೆಯ ಬಗ್ಗೆ ನೀಡಿರುವ ತನಿಖಾ ವರದಿಯ ಬಗ್ಗೆ ಜಂಟಿ ಸಂಸದೀಯ ಸಮಿತಿ ರಚಿಸಿ, ಸಮಗ್ರ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಂಬೈನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ಮೂರನೇ ಸಭೆಯಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
“ಒಸಿಸಿಆರ್‌ಪಿ ಅದಾನಿ ಸಮೂಹದ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಿ ಸಮಗ್ರ ತನಿಖೆ ನಡೆಸಬೇಕು. ಪ್ರಧಾನಿ ಏಕೆ ಈ ಬಗ್ಗೆ ತನಿಖೆಗೆ ಒತ್ತಾಯಿಸುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು ಏಕೆ ಸುಮ್ಮನಿದ್ದಾರೆ? ಈ ವಿಷಯದ ಬಗ್ಗೆ ತನಿಖೆ ನಡೆಸಿ ಕಾರಣರಾದವರನ್ನು ಸೆರೆಮನೆಗೆ ಕಳಿಸಲು ಅವರು ಏಕೆ ಹೇಳುತ್ತಿಲ್ಲ? ಜಿ20 ನಾಯಕರು ಇಲ್ಲಿಗೆ ಬರುವ ಮುನ್ನವೇ ಅದಾನಿ ಹಗರಣವು ಭಾರತದ ಪ್ರಧಾನಿಯ ಮೇಲೆ ಗಂಭೀರವಾದ ಪ್ರಶ್ನೆಯನ್ನು ಎತ್ತುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಿಂಡೆನ್‌ಬರ್ಗ್ 2.0? ಒಸಿಸಿಆರ್‌ಪಿ ವರದಿಯ ನಂತರ ಅದಾನಿ ಷೇರುಗಳು ತೀವ್ರ ಕುಸಿತ
“ಒಸಿಸಿಆರ್‌ಪಿ ವರದಿಯು “ಅಪಾರದರ್ಶಕ” ಮಾರಿಷಸ್ ನಿಧಿಗಳನ್ನು ಅದಾನಿ ಸಮೂಹಕ್ಕೆ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಸ್ಟಾಕ್‌ಗಳಿಗೆ ಗಣನೀಯ ಹೂಡಿಕೆಗಳನ್ನು ಮಾಡಲು ಬಳಸಲಾಗಿದೆ ಎಂದು ಆರೋಪಿಸಿದೆ. ಇದು ಅದಾನಿ ಕುಟುಂಬದೊಂದಿಗೆ ಸಂಬಂಧಿಸಿದ ವ್ಯಾಪಾರ ಪಾಲುದಾರರ ಒಳಗೊಳ್ಳುವಿಕೆಯನ್ನು ಮರೆಮಾಚುತ್ತದೆ. ಅದಾನಿ ಸಮೂಹದ ವಿರುದ್ಧದ ಹೊಸ ಆರೋಪಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೆಸರನ್ನು ತೆರವುಗೊಳಿಸುವುದಕ್ಕಾಗಿ ಸತ್ಯ ಏನೆಂಬುದನ್ನು ಸ್ಪಷ್ಟವಾಗಿ ವಿವರಿಸಬೇಕು” ಎಂದು ರಾಹುಲ್ ಆಗ್ರಹಿಸಿದರು.
“ಇದು ಯಾರ ಹಣ ಎಂಬುದು ಮೊದಲ ಪ್ರಶ್ನೆ. ಇದು ಅದಾನಿಯವರದ್ದೋ ಅಥವಾ ಬೇರೆಯವರದ್ದೋ? ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಎಂಬ ವ್ಯಕ್ತಿಯೇ ಇದರ ಹಿಂದಿನ ಸೂತ್ರಧಾರ. ಈ ಹಣದ ದಂಧೆಯಲ್ಲಿ ಇನ್ನಿಬ್ಬರು ಭಾಗಿಯಾಗಿದ್ದಾರೆ. ಒಬ್ಬರು ನಾಸಿರ್ ಅಲಿ ಶಾಬಾನ್ ಅಹ್ಲಿ, ಇನ್ನೊಬ್ಬರು ಚಾಂಗ್ ಚುಂಗ್ ಲಿಂಗ್ ಎಂಬ ಚೀನಾದ ವ್ಯಕ್ತಿ. ಎರಡನೇ ಪ್ರಶ್ನೆ ಏನೆಂದರೆ ಬಹುತೇಕ ಎಲ್ಲ ಭಾರತೀಯ ಮೂಲಸೌಕರ್ಯಗಳನ್ನು ನಿಯಂತ್ರಿಸುವ ಕಂಪನಿಯೊಂದರ ಮೌಲ್ಯಮಾಪನದೊಂದಿಗೆ ಈ ಇಬ್ಬರು ವಿದೇಶಿ ಪ್ರಜೆಗಳಿಗೆ ವ್ಯವಹರಿಸಲು ಯಾಕೆ ಅನುಮತಿ ನೀಡಲಾಗಿದೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಅದಾನಿ ಹಗರಣದ ಬಗ್ಗೆ ತನಿಖೆ ನಡೆಸಿ ಸೆಬಿಗೆ ಸಾಕ್ಷ್ಯಾಧಾರಗಳನ್ನು ನೀಡಲಾಯಿತು. ಸೆಬಿಯು ಗೌತಮ್ ಅದಾನಿಗೆ ಕ್ಲೀನ್ ಚಿಟ್ ನೀಡಿತು. ಹಾಗಾಗಿ, ಇಲ್ಲಿ ಏನೋ ತಪ್ಪಾಗಿದೆ ಎಂಬುದು ಸ್ಪಷ್ಟವಾಗಿದೆ. ಜಿ20 ನಾಯಕರು ಭಾರತಕ್ಕೆ ಬರುವ ಮುನ್ನವೇ, ಪ್ರಧಾನಿ ಮೋದಿಯವರ ನಿಕಟವರ್ತಿಗಳ ಮಾಲೀಕತ್ವದ ಈ ವಿಶೇಷ ಕಂಪನಿ ಯಾವುದು ಮತ್ತು ಭಾರತದಂತಹ ಆರ್ಥಿಕತೆಯಲ್ಲಿ ಈ ವ್ಯಕ್ತಿಗೆ ವ್ಯವಹಾರ ಮಾಡಲು ಅನುಮತಿ ನೀಡಿದ್ದು ಯಾರು ಎಂದು ಕೇಳುತ್ತಿದ್ದೇನೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ.