ನಾಯಿ ಕಡಿದು 15 ಮಂದಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದಿದೆ.
ಮೇದಿನಾಪುರ ಗ್ರಾಮಕ್ಕೆ ತೆರಳುತ್ತಿದ್ದವರ ಮೇಲೆರಗಿದ ನಾಯಿ 15 ಮಂದಿಗೆ ಕಚ್ಚಿದೆ. ನಾಯಿ ಕಡಿತಕ್ಕೆ ತುತ್ತಾದ ಗಾಯಾಳುಗಳು ಹಟ್ಟಿ ಚಿನ್ನದ ಗಣಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಟ್ಟಿಯಲ್ಲಿ ನಾಯಿ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ತಿರುಗಾಡದಂತೆ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಚ್ಚು ನಾಯಿ ಸೆರೆ ಹಿಡಿಯುವವರೆಗೂ ಮನೆಯಿಂದ ಚಿಕ್ಕ ಮಕ್ಕಳು ಹೊರಗಡೆ ಬರದಂತೆ ನೋಡಿಕೊಳ್ಳಬೇಕು ಎಂದು ಪಾಲಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಈ ನಡುವೆ, ಸಾರ್ವಜನಿಕರು ನಾಯಿಯನ್ನು ಹುಡುಕಿ ಕೊಂದಿದ್ದಾರೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳವಾಗಿರುವ ಕುರಿತು ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.