ಮೆಕ್ಕೆಜೋಳ ಹಾಗೂ ಇನ್ನಿತರ ಬೆಳೆಹಾನಿಗೆ ಪರಿಹಾರ ಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಸೆಪ್ಟೆಂಬರ್ 4ರಂದು ಬೆಳಿಗ್ಗೆ 11.30ಕ್ಕೆ ತಹಶೀಲ್ದಾರ್ ಕಚೇರಿ ಬಳಿಯಿರುವ ರಾಜ್ಯ ರೈತ ಸಂಘದ ಕಚೇರಿಯಿಂದ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ರೈತ ಸಂಘದ ದಾವಣಗೆರೆ ಜಿಲ್ಲಾ ಗೌರವಾಧ್ಯಕ್ಷ ಕೊಗ್ಗನೂರು ಹನುಮಂತಪ್ಪ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳು ಬಹುತೇಕ ಮಳೆ ಬಾರದೆ ಒಣಗುತ್ತಿವೆ. ರೈತರು ಕೃಷಿ ಮಾಡಲು ದುಬಾರಿ ಬೀಜ, ರಸಗೊಬ್ಬರ, ಕೂಲಿ ಇತರೆ ವೆಚ್ಚ ಮಾಡಿ ಕಷ್ಟದಲ್ಲಿದ್ದಾರೆ. ಮಳೆ ಬಾರದೆ ಬೆಳೆದ ಬೆಳೆಗಳೆಲ್ಲಾ ಒಣಗುತ್ತಿವೆ. ಇದಲ್ಲದೇ ವಿದ್ಯುತ್ ಸರಬರಾಜಿನಲ್ಲಿಯೂ ತೊಂದರೆ ಮಾಡಲಾಗುತ್ತಿದೆ. ಪಂಪ್ ಸೆಟ್ ಕರೆಂಟ್‌ಗೆ ನೀಡುವಲ್ಲಿ ಅಧಿಕಾರಿಗಳು ಮನ ಬಂದಂತೆ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದಾವಣಗೆರೆ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು” ಎಂದು ಒತ್ತಾಯಿಸಿದರು.
“ಕಳೆದ ವರ್ಷ ಅತಿವೃಷ್ಟಿಯಾಗಿತ್ತು. ಈ ವರ್ಷ ಅನಾವೃಷ್ಟಿಯಾಗಿದೆ. ಇದರಿಂದಾಗಿ ರೈತರು ಬೆಳೆದ ಬೆಳೆ ಕೈಸೇರಿಲ್ಲ. ಆದ್ದರಿಂದ ರೈತರು ಬ್ಯಾಂಕ್‌ಗಳಲ್ಲಿ ಪಡೆದ ಸಾಲ ತೀರಿಸಲು ಸಾಧ್ಯವಾಗಿಲ್ಲ. ಆದರೆ ಬ್ಯಾಂಕ್‌ಗಳು ರೈತರು ಸಾಲ ಪಾವತಿಸಬೇಕೆಂದು ಮೇಲಿಂದ ಮೇಲೆ ನೊಟೀಸ್ ಕಳುಹಿಸುತ್ತಿವೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಧಾವಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಆಗ್ರಹ
“ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು” ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ, ಕರಿಲಕ್ಕನಹಳ್ಳಿ ರೇವಣಸಿದ್ದಪ್ಪ, ಎಸ್ ಟಿ ಪರಮೇಶ್ವರಪ್ಪ, ಹನುಮಂತಪ್ಪ, ಚಟ್ಟೋಬನಹಳ್ಳಿ ಕಂಪೇರಿ, ತಿಪ್ಪೇಸ್ವಾಮಿ, ಧನ್ಯಕುಮಾರ್ ಸೇರಿದಂತೆ ಇತರರು ಇದ್ದರು.