ಮಳೆಯ ಅಭಾವದಿಂದ ಅತ್ಯಂತ ಸಂಕಷ್ಟ ಎದುರಾಗಿದ್ದು, ತುಮಕೂರು ಜಿಲ್ಲೆ ಪಾವಗಡ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ತಾಲೂಕು ರೈತ ಸಂಘದ ಕಾರ್ಯಕರ್ತರು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ತಾಲೂಕು ರೈತ ಸಂಘದಿಂದ ಕಂದಾಯ ಇಲಾಖೆಯ ಗ್ರಿಡ್ 2 ತಹಶೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಮಾತನಾಡಿ, “ಜೀವನ ಸಾಗಿಸಲು ನಮಗೆ ಪರ್ಯಾಯ ವ್ಯವಸ್ಥೆಯಿಲ್ಲ. ಯಾವುದೇ ಕೈಗಾರಿಕೆ ಆಗಲಿ ಅಥವಾ ನದಿ ಮೂಲದ ನೀರಿನ ಸೌಲಭ್ಯ ಆಗಲಿ ಇಲ್ಲ. ಬಹುತೇಕ ಮಳೆ ಆಶ್ರಿತ ಬೆಳೆಗಳೇ ಜೀವನಾಂಶದ ಬೆಳೆಗಳಾಗಿದ್ದು, ಮಳೆಯ ಅಭಾವದಿಂದ ಶೇಂಗಾ, ತೊಗರಿ, ಭತ್ತ, ರಾಗಿ, ಜೋಳದ ಬೆಳೆಗಳು ಮೊಳಕೆ ಹಂತದಲ್ಲಿ ನಷ್ಟಕ್ಕೀಡಾಗಿದೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿದ್ದು, ನೀರಾವರಿ ಬೆಳೆಗಳು ಒಣಗಿ ಹೋಗುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮಳೆಯ ಕೊರತೆಯಿಂದ ಸದಾ ಬರಗಾಲ ಎದುರಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮಳೆಯ ಅಭಾವದಿಂದ ಪ್ರಸಕ್ತ ಸಾಲಿಗೆ ಎಲ್ಲ ರೀತಿಯ ಬೆಳೆಗಳು ಒಣಗಿ ಹೋಗಿದ್ದು, ಜೀವನ ನಡೆಸುವುದು ಅಸಾಧ್ಯವಾಗಿದೆ. ಕಳೆದ ವರ್ಷ ಅತಿವೃಷ್ಟಿ ಹಾಗೂ ಪ್ರಸ್ತುತ ಅನಾವೃಷ್ಟಿಯ ಪರಿಣಾಮ ಕಸಬಾ ಹೋಬಳಿ, ವೈ ಎನ್ ಹೊಸಕೋಟೆ, ನಿಡಗಲ್, ನಾಗಲಮಡಿಕೆ ಸೇರಿ ತಾಲೂಕಿನ ನಾಲ್ಕು ಹೋಬಳಿಯ ರೈತರು ಮತ್ತು ಕೂಲಿಕಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿ, ಅನೇಕ ರೀತಿಯ ಸಮಸ್ಯೆ ಎದುರಿಸುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜೀವನಕ್ಕಾಗಿ ಸಾವಿರಾರು ಮಂದಿ ಬೆಂಗಳೂರು, ಆಂಧ್ರದ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಪ್ರಸಕ್ತ ಸಾಲಿಗೆ ಬರದ ತೀವ್ರತೆ ವ್ಯಾಪಕವಾಗಿ ಕಾಡುತ್ತಿದ್ದು, ಕುಡಿವ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಕುಡಿಯಲು ನೀರು ಸಿಗುತ್ತಿಲ್ಲ. ಪ್ರಾಣಿ ಪಕ್ಷಿಗಳ ನರಳಾಟ ಹೆಚ್ಚಾಗಿ ನೀರು ಮತ್ತು ಆಹಾರಕ್ಕಾಗಿ ಊರುಗಳಿಗೆ ಪ್ರವೇಶಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಬರಪೀಡಿತ ಪಟ್ಟಿಯಿಂದ ಪಾವಗಡವನ್ನು ಕೈಬಿಟ್ಟಿದ್ದು, ದುರಂತವೇ ಸರಿ. ಕೂಡಲೇ ತಾಲೂಕಿನ ಸ್ಥಿತಿಗತಿಯ ಸಮಗ್ರ ವರದಿ ಪಡೆದು ಕೂಡಲೇ ಬರಪೀಡಿತ ಪ್ರದೇಶ ವ್ಯಾಪ್ತಿಗೆ ಒಳಪಡಿಸುವ ಮೂಲಕ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು” ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಈರುಳ್ಳಿ ಬೆಳೆ ನಾಶ; ರೈತ ಆತ್ಮಹತ್ಯೆ
ರೈತ ಮುಖಂಡರುಗಳಾದ ಈರಕ್ಯಾತಪ್ಪ, ಚಿತ್ತಯ್ಯ, ಕೆ ಜಿ ಸಿದ್ದಪ್ಪ, ಹನುಮಂತರಾಯಪ್ಪ, ಸದಾಶಿವಪ್ಪ, ಈರಣ್ಣ, ರಾಮಾಂಜಿನಪ್ಪ, ನಾಗರಾಜಪ್ಪ, ರಮೇಶ್ ಕುಮಾರ್, ಮಂಜುನಾಥ್, ರೈತ ಸಂಘದ ಪದಾಧಿಕಾರಿಗಳು ಇದ್ದರು.