ಮೋದಿ ಸರ್ಕಾರ ʼಬೇಟಿ ಬಚಾವೋ ಬೇಟಿ ಪಢಾವೋʼಎಂಬ ಪೊಳ್ಳು ಘೋಷಣೆಯ ಕಿರುಚಿದ್ದು ಬಿಟ್ಟರೆ, ಬೇಟಿಯರ ರಕ್ಷಣೆಗೆ ವಾಸ್ತವವಾಗಿ ಏನು ಮಾಡಿದೆ? ತನ್ನ 'ಮನ್ ಕಿ ಬಾತ್'ನಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸುವ ಕನಿಷ್ಠ ತುಟಿ ಮೇಲಿನ ಅನುಕಂಪವನ್ನೂ ತೋರಿಲ್ಲ ಮೋದಿ. ಹೆಣ್ಣುಮಕ್ಕಳು ತಾವು ಉನ್ನತ ಶಿಕ್ಷಣ ಪಡೆದ ನಂತರವೂ ಘನತೆಯಿಂದ ಬದುಕುವುದು, ಜಾತಿಪದ್ಧತಿಯ ಭಯೋತ್ಪಾದನೆಯಿಂದ ಬಚಾವಾಗಿ ಬದುಕುವುದು ಸಾಧ್ಯವಾಗದ ಮೇಲೆ ಘೋಷಣೆಗಳಿಗೆ ಅರ್ಥ ಏನಿದೆ?
ಉತ್ತರಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯೊಬ್ಬರ ಮೇಲೆ ಇಬ್ಬರು ಸಹೋದ್ಯೋಗಿಗಳು ಮತ್ತು ಇಬ್ಬರು ವಿದ್ಯಾರ್ಥಿಗಳು ಸೇರಿ ʼದಲಿತೆʼ ಎಂಬ ಕಾರಣಕ್ಕೆ ನಿಂದಿಸಿ, ದೈಹಿಕ ಹಲ್ಲೆ ನಡೆಸಿರುವ ಆಘಾತಕಾರಿ ಅಷ್ಟೇ ನಾಚಿಕೆಗೇಡಿನ ಸುದ್ದಿ ಹೊರಬಿದ್ದಿದೆ. ಈ ಸುದ್ದಿಗೂ ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆಯ ಸುದ್ದಿಗೂ ಎರಡು ಅಂಶಗಳಲ್ಲಿ ಹೋಲಿಕೆಯಿದೆ. ಹಿಂದೂ ವಿವಿಯಲ್ಲಿ ನಡೆದ ದುಷ್ಕೃತ್ಯದ ಬಗ್ಗೆ ವಾರಾಣಸಿ ಪೊಲೀಸರಿಗೆ ಮೂರು ತಿಂಗಳ ಹಿಂದೆಯೇ ದೂರು ನೀಡಿದರೂ ಎಫ್‌ಐಆರ್ ದಾಖಲಿಸಿಕೊಂಡಿರಲಿಲ್ಲವಂತೆ. ನಂತರ ಆಕೆ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದ ಬಳಿಕ ಪೊಲೀಸರು ಆ. 27 ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪುರದ ಘಟನೆಯಂತೆ ಇಲ್ಲೂ ಆರೋಪಿಗಳು ಪ್ರಾಧ್ಯಾಪಕಿಯನ್ನು ಬೆತ್ತಲುಗೊಳಿಸಿ ವಿಶ್ವವಿದ್ಯಾಲಯದ ಸುತ್ತ ಮೆರವಣಿಗೆ ಮಾಡಬೇಕು ಎಂದು ಯೋಜಿಸಿದ್ದರಂತೆ! 2023ರ ಮೇ 22ರಂದು ಆರೋಪಿಗಳಲ್ಲಿ ಒಬ್ಬ ಆಕೆಯ ಕೊಠಡಿಗೆ ನುಗ್ಗಿ, ಹುದ್ದೆಯಿಂದ ತೆಗೆದು ಹಾಕಿಸುವುದಾಗಿ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಇತರ ಆರೋಪಿಗಳು ಕೊಠಡಿಯ ಬಾಗಿಲು ಮುಚ್ಚಿ ಆಕೆಯ ಬಟ್ಟೆಗಳನ್ನು ಹರಿದು ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದಾರೆ ಎಂದು ಪ್ರಾಧ್ಯಾಪಕಿ ದೂರಿನಲ್ಲಿ ಆರೋಪಿಸಿದ್ದಾರೆ.
ಇದು ಬಿಜೆಪಿ ಪಾಲಿನ ʼವಿಶ್ವಗುರುʼ, ಮತ್ತು ಮುಂದಿನ ಅವಧಿಗೆ ಆರಿಸಿದರೆ ‘ವಿಶ್ವದ ಮುಂಚೂಣಿಯ ಮೂರು ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸಲಿರುವ’ ಮೋದಿ ಭಾರತದ ಹೆಣ್ಣುಮಕ್ಕಳ ದುಸ್ಥಿತಿ. ಮೋದಿ ಸರ್ಕಾರ ʼಬೇಟಿ ಬಚಾವೋ ಬೇಟಿ ಪಢಾವೋʼ ಎಂಬ ಪೊಳ್ಳು ಘೋಷಣೆಯ ಕಿರುಚಿದ್ದು ಬಿಟ್ಟರೆ, ಬೇಟಿಯರ ರಕ್ಷಣೆಗೆ ವಾಸ್ತವವಾಗಿ ಏನು ಮಾಡಿದೆ? ತನ್ನ ‘ಮನ್ ಕಿ ಬಾತ್’ನಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸುವ ಕನಿಷ್ಠ ತುಟಿ ಮೇಲಿನ ಅನುಕಂಪವನ್ನೂ ತೋರಿಲ್ಲ ಮೋದಿ. ಹೆಣ್ಣುಮಕ್ಕಳು ತಾವು ಉನ್ನತ ಶಿಕ್ಷಣ ಪಡೆದ ನಂತರವೂ ಘನತೆಯಿಂದ ಬದುಕುವುದು, ಜಾತಿಪದ್ಧತಿಯ ಭಯೋತ್ಪಾದನೆಯಿಂದ. ಬಚಾವಾಗಿ ಬದುಕುವುದು ಸಾಧ್ಯವಾಗದ ಮೇಲೆ ಘೋಷಣೆಗಳಿಗೆ ಅರ್ಥ ಏನಿದೆ?
ಈ ದೇಶದಲ್ಲಿ ಮಹಿಳೆಯರ ಮೇಲೆ ಕಂಡು ಕೇಳರಿಯದ ರೀತಿಯ ದೌರ್ಜನ್ಯ ನಡೆಯುತ್ತಿದೆ. ಹೆಣ್ಣುಮಕ್ಕಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳುಮಟ್ಟದಲ್ಲಿ ನಿಂದಿಸುವುದು ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಗಳಹುವುದರಲ್ಲಿ ಮೋದಿ ಭಕ್ತರದೇ ಎತ್ತಿದ ಕೈ. ಮೋದಿಯವರನ್ನು ಟೀಕಿಸಿದ ಕಾರಣಕ್ಕೆ ವಿದೇಶೀ ಪತ್ರಕರ್ತರು, ಮುಖಂಡರನ್ನೂ ಕೀಳು ಮಟ್ಟದ ಟ್ರೋಲ್ ಮಾಡಿದ ವಿಕೃತ ಭಕ್ತಪ್ರತಿಭೆಗಳು ನಮ್ಮಲ್ಲಿದ್ದಾರೆ.
ಅಭಿವೃದ್ಧಿಗೆ ʼಗುಜರಾತ್ ಮಾಡೆಲ್ʼ, ಅಪರಾಧ ತಡೆಯುವಲ್ಲಿ ಬುಲ್ಡೋಜರ್ ಖ್ಯಾತಿಯ ʼಯು ಪಿ ಮಾಡೆಲ್ʼ ಬೇಕು ಎಂದು ಬಡಬಡಿಸುವ ಭಕ್ತರಿಗೆ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿರುವ ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳ ಮೇಲೆ, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಾತಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆ, ಕೊಲೆಗಳನ್ನು ತಡೆಯುವ ನಿಟ್ಟಿನಲ್ಲಿ ಸಮರ್ಥ ನಾಯಕರು ಎಂದು ತಮ್ಮ ಅನುಯಾಯಿಗಳಿಂದ ಬೆನ್ನು ತಟ್ಟಿಸಿಕೊಳ್ಳುತ್ತಿರುವ ಮೋದಿಯಾಗಲಿ, ಯೋಗಿಯಾಗಲಿ ಏನು ಮಾಡಿದ್ದಾರೆ? ತಮ್ಮ ಸಂಪುಟ, ಸರ್ಕಾರ, ಪಕ್ಷಗಳಲ್ಲಿಯೇ ನೂರಾರು ಸ್ತ್ರೀಪೀಡಕರನ್ನು ಇಟ್ಟುಕೊಂಡವರು ಬಿಗಿ ಕ್ರಮ ಕೈಗೊಳ್ಳುವುದು ಬೂಟಾಟಿಕೆಯ ಮಾತು.
ಮಣಿಪುರದ ಜನಾಂಗೀಯ ಸಂಘರ್ಷದ ಈ ಸಮಯದಲ್ಲಿ ಎರಡೂ ಪಂಗಡದ ನೂರಾರು ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ವರದಿಯಾಗಿದೆ. ವರದಿಯಾಗದ ಇಂತಹ ಅದೆಷ್ಟು ಪ್ರಕರಣಗಳಿವೆಯೋ ಗೊತ್ತಿಲ್ಲ. ಆದರೆ ಇತ್ತೀಚೆಗೆ ನಡೆದ ಲೋಕಸಭಾ ಅಧಿವೇಶನದಲ್ಲಿ ಮಣಿಪುರದ ಬಗ್ಗೆ ಮಾತನಾಡುವಂತೆ ವಿರೋಧ ಪಕ್ಷಗಳು ನಿಲುವಳಿ ಸೂಚನೆ ಸಲ್ಲಿಸಿದರೆ ಅದರ ಬಗ್ಗೆ ಚರ್ಚೆ ನಡೆಸುವ ಸಚಿವೆ ಸ್ಮೃತಿ ಇರಾನಿ ಮಧ್ಯಪ್ರದೇಶ, ಬಂಗಾಳದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಮಾತನಾಡಿ ಎಂದು ವಿರೋಧ ಪಕ್ಷಗಳಿಗೆ ಕಿಚಾಯಿಸುತ್ತಾರೆ. ಒಬ್ಬ ಮಹಿಳೆಯಾಗಿ, ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಬೆತ್ತಲೆ ಮೆರವಣಿಗೆಯಂತಹ ಘಟನೆಗಳ ಬಗ್ಗೆ ಮಾತನಾಡುವಾಗಲೂ ಕನಿಷ್ಠ ಪಕ್ಷ ತಮ್ಮ ಹುದ್ದೆಯ ಜವಾಬ್ದಾರಿ ಅಥವಾ ಸ್ತ್ರೀ ಘನತೆಯಿಂದ ನಡೆದುಕೊಂಡಿಲ್ಲ. ಬದಲಾಗಿ ತಮ್ಮ ನಾಯಕನನ್ನು ರಕ್ಷಣೆಗೆ ಧಾವಿಸುವ ಗುಲಾಮಗಿರಿಗೆ ಬಿದ್ದು ವಿರೋಧ ಪಕ್ಷದವರನ್ನು ವಿನಾಕಾರಣ ನಿಂದಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ವಿಚಾರದಲ್ಲಿಯೂ ಸ್ಮೃತಿ ಇರಾನಿ ನಡೆದುಕೊಂಡ ರೀತಿಯನ್ನು, ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದನ್ನು ದೇಶವೇ ಕಂಡಿದೆ. ಇಂತಹ ನಾಯಕರು, ನಾಯಕಿಯರು ಮತ್ತು ಅವರ ಬೆಂಬಲಿಗರು ಇರುವಾಗ ಜಾತಿಯ ತಾರತಮ್ಯ, ದೌರ್ಜನ್ಯ ಹೇಗೆ ತಗ್ಗೀತು?
ಬನಾರಸ್ ವಿವಿಯ ಪ್ರಾಧ್ಯಾಪಕಿ ತನ್ನ ಮೇಲೆ ನಡೆದ ದೈಹಿಕ ಹಲ್ಲೆ, ಬೆತ್ತಲೆಗೊಳಿಸುವ ಯತ್ನ, ಜಾತಿ ನಿಂದನೆ, ಕೆಲಸದಿಂದ ತೆಗೆಸುವ ಬೆದರಿಕೆ ಹಾಕಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಗಂಭೀರ ಅಪರಾಧದ ಬಗ್ಗೆ ದೂರು ಕೊಟ್ಟರೂ ಅದನ್ನು ಗಂಭೀರವಾಗಿ ಪರಿಗಣಿಸದೇ ಮೂರು ತಿಂಗಳು ಕಾಲಹರಣ ಮಾಡಿದ ಪೊಲೀಸರನ್ನು ಕೆಲಸದಿಂದ ವಜಾಗೊಳಿಸುವ ಶಿಕ್ಷೆ ನೀಡಬೇಕು. ಆಗ ಮಾತ್ರ ಜಾತಿ ತಾರತಮ್ಯ, ಹೆಣ್ಣು ಅಬಲೆ ಎಂಬ ಕಾರಣದಿಂದ ನಡೆಯುವ ಪುರುಷಾಹಂಕಾರದ ನಡವಳಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯ.
