ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತನ್ನ ಐದು ಗ್ಯಾರಂಟಿಗಳ ಪೈಕಿ ಮೊದಲನೆಯದಾಗಿ ಶಕ್ತಿ ಯೋಜನೆಯನ್ನು ಜುಲೈ 11ರಂದು ಜಾರಿ ಮಾಡಿತ್ತು. ಈ ಯೋಜನೆ ಜಾರಿಯಾದ ಬಳಿಕ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ, ಖಾಸಗಿ ಸಾರಿಗೆ ಒಕ್ಕೂಟ ಸೆ.11 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದೆ.
32 ಖಾಸಗಿ ಸಾರಿಗೆ ಒಕ್ಕೂಟಗಳು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಸೆಪ್ಟೆಂಬರ್ 11ರಂದು ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ಆಟೋ ಟ್ಯಾಕ್ಸಿ, ಖಾಸಗಿ ಬಸ್, ಶಾಲಾ ಬಸ್ ಬಂದ್ ಇರಲಿವೆ.
ಒಕ್ಕೂಟ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜತೆಗೆ ಮಾತುಕತೆ ನಡೆಸಿತ್ತು. ಆಗಸ್ಟ್ 31ರೊಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಇಷ್ಟು ದಿನ ಕಳೆದರೂ ಸರ್ಕಾರ ಭರವಸೆ ಈಡೇರಿಸದ ಹಿನ್ನೆಲೆ, ಸರ್ಕಾರದ ವಿರುದ್ಧ ಬಂದ್ ನಡೆಸಲು ಸಿದ್ಧತೆ ನಡೆಸಿದೆ.
32 ಸಂಘಟನೆಗಳಿರುವ ರಾಜ್ಯದ ಖಾಸಗಿ ಸಾರಿಗೆ ಒಕ್ಕೂಟ ಸುದ್ದಿಗೋಷ್ಠಿ ನಡೆಸಿ, “ಶಕ್ತಿ ಯೋಜನೆ ಜಾರಿಯಾದಾಗಿನಿಂದ ಖಾಸಗಿ ಸಾರಿಗೆ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಈ ಸಮಸ್ಯೆಯನ್ನು ಸರ್ಕಾರ ಆದಷ್ಟು ಬೇಗ ಪರಿಹಾರ ಮಾಡಬೇಕು. ಇಲ್ಲದಿದ್ದರೆ, ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್ ಮಾಡಲಾಗುವುದು. ಸೋಮವಾರ ಆಟೋ, ಟ್ಯಾಕ್ಸಿ, ಏರ್ ಪೋರ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಕಾರ್ಪೋರೇಟ್ ವಾಹನಗಳು, ಸ್ಕೂಲ್ ಬಸ್ ಚಾಲಕರು, ಫ್ಯಾಕ್ಟರಿ ವಾಹನ, ಸ್ಟೇಜ್ ಗ್ಯಾರೇಜ್ ಬಸ್‌ಗಳು ಇರುವುದಿಲ್ಲ. ಭಾನುವಾರ ಮಧ್ಯರಾತ್ರಿಯಿಂದಲೇ ಬೆಂಗಳೂರು ಬಂದ್ ಇರಲಿದೆ. ಸರ್ಕಾರ ಲಿಖಿತ ಆದೇಶ ನೀಡುವವರೆಗೂ ಬಂದ್ ಕೈ ಬಿಡಲ್ಲ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಲ್ಯಾಣ ಕಾರ್ಯಕ್ರಮ ತಕ್ಷಣವೇ ಜಾರಿಗೊಳಿಸಿ: ಆಡಳಿತಾಧಿಕಾರಿ ಸೂಚನೆ
ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ, ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳ ನಿಷೇಧ, ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ, ಸೌಲಭ್ಯ ಯೋಜನೆಯಡಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು, ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಮಾಡುವುದಕ್ಕೆ ಅನುಮತಿ ನೀಡಬಾರದು, ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಓಲಾ, ಊಬರ್ ಆಪ್ ಆಧಾರಿತ ಸೇವೆಗಳ ನಿರ್ಬಂಧ, ಖಾಸಗಿ ಬಸ್ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ, ಖಾಸಗಿ ವಾಹನಗಳನ್ನ ಕಿ.ಮೀ ಆಧಾರದಲ್ಲಿ ಸರ್ಕಾರ ಬಾಡಿಗೆಗೆ ಪಡೆಯುವುದು ಹಾಗೂ ನಿಯಮಬಾಹಿರವಾಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಒಕ್ಕೂಟ ಸರ್ಕಾರದ ಮುಂದಿಟ್ಟಿದೆ.