- ‘ಕಾಂಗ್ರೆಸ್ ಸರ್ಕಾರಕ್ಕೆ ಒಂದು ತಿಂಗಳು ಸಮಯ ಕೊಡುತ್ತೇವೆ’
- ‘ಲೋಕಸಭಾ ಚುನಾವಣೆಗೆ ಮುನ್ನ ಅಥವಾ ನಂತರ ಸರ್ಕಾರ ಇರಲ್ಲ’
ಕಾಂಗ್ರೆಸ್‌ಗೆ ಒಂದು ತಿಂಗಳು ಸಮಯ ಕೊಡುತ್ತೇವೆ. ಬಿಜೆಪಿಯಿಂದ ಒಬ್ಬ ಶಾಸಕರನ್ನು ಕರೆದೊಯ್ದು ತೋರಿಸಲಿ. ಕಾಂಗ್ರೆಸ್ ಸರ್ಕಾರ ಬೀಳಿಸುವ ವಿಚಾರದಲ್ಲಿ ಮತ್ತೆ ಆಪರೇಷನ್ ಕಮಲ ಆರಂಭವಾಗಲಿದೆ. ಬೇಕಿದ್ದರೆ ಸಚಿವ ಪ್ರಿಯಾಂಕ್ ಖರ್ಗೆ ಕಾದು ನೋಡಲಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದರು.
ನಮ್ಮ ಸರ್ಕಾರ ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವೇ? ಎಂದು ಸವಾಲು ಹಾಕಿದ್ದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಶಿವಮೊಗ್ಗದಲ್ಲಿ ಅವರು ಪ್ರತಿಕ್ರಿಯಿಸಿದರು.
ಲೋಕಸಭಾ ಚುನಾವಣೆಗೆ ಮುನ್ನ ಅಥವಾ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಕಾಂಗ್ರೆಸ್ ಯೋಗ್ಯತೆಗೆ ಇಲ್ಲಿಯವರೆಗೂ ಬಿಜೆಪಿಯ ಒಬ್ಬ ಶಾಸಕರನ್ನು ಕರೆದೊಯ್ಯಲು ಆಗಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್‌ಗೆ ಬಿಜೆಪಿಯಿಂದ ಅಷ್ಟು ಜನ ಬರುತ್ತಾರೆ, ಇಷ್ಟು ಜನ ಬರುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕಾಂಗ್ರೆಸ್ ಬಿಟ್ಟು ಹೋಗಿರುವ 17 ಜನರಲ್ಲಿ ಒಬ್ಬರನ್ನೂ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಈಗ ಏಕೆ ಬಿಜೆಪಿ ಶಾಸಕರ ಮನೆ ಕಾಯುತ್ತಿದ್ದಾರೆ? ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಲಿತ ಪ್ರಾಧ್ಯಾಪಕಿಯ ಮೇಲೆ ಸಹೋದ್ಯೋಗಿಗಳು- ವಿದ್ಯಾರ್ಥಿಗಳಿಂದ ಹಲ್ಲೆ; ಎತ್ತ ಸಾಗುತ್ತಿದೆ ಭಾರತ?
ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ತಿಹಾರ್ ಜೈಲಿನಲ್ಲಿ ಕಾಲ ಕಳೆದು ಡಿ ಕೆ ಶಿವಕುಮಾರ್ ಈಗ ಪ್ರಜ್ವಲ್ ರೇವಣ್ಣ ಅನರ್ಹತೆಯ ವಿಚಾರ ಮುಂದಿಟ್ಟುಕೊಂಡು, ಆಸ್ತಿ ವಿಚಾರಗಳನ್ನು ಜನಪ್ರತಿನಿಧಿಗಳು ಮುಚ್ಚಿಡಬಾರದು ಎಂದು ಬುದ್ಧಿ ಹೇಳುತ್ತಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಾಗಿದೆ ಎಂದು ಲೇವಡಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಜಾರಿಗೆ ತರುವ ಗದ್ದಲದಲ್ಲಿಯೇ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಕೂಡ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.