ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾದ ವೈ.ರಾಮಚಂದ್ರ ರಸ್ತೆ ಬೀದಿ ದೀಪ ಕಾಣದೆ ಕಗ್ಗತ್ತಲಾಗಿದೆ. ಇದರಿಂದ ವಾಹನ ಸವಾರರು ದಾರಿಹೋಕರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ಗಾಂಧಿನಗರ ಮತ್ತು ಅರಮನೆ ರಸ್ತೆಗೆ ಸಂಪರ್ಕ ಕೊಂಡಿಯಾಗಿರುವ ‘ವೈ. ರಾಮಚಂದ್ರ ರಸ್ತೆ’ಯಲ್ಲಿ ಬೀದಿ ದೀಪಗಳು ಕಣ್ಮರೆಯಾಗಿವೆ. ಇಳಿ ಸಂಜೆಯಾದಂತೆಲ್ಲ ರಸ್ತೆ ತುಂಬಾ ಕಡು ಕತ್ತಲು ಆವರಿಸಿಕೊಳ್ಳುತ್ತದೆ. ಕಳೆದ ಹಲವು ತಿಂಗಳಿನಿಂದ ಈ ರಸ್ತೆ ಬೀದಿದೀಪದ ಬೆಳಕು ಕಂಡಿಲ್ಲ. ಇದರಿಂದ ದಾರಿಹೋಕರು, ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಪರಿಪಾಟಲು ಪಡುವಂತಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ₹1,135 ಕೋಟಿ ವೆಚ್ಚದಲ್ಲಿ ವೈ.ರಾಮಚಂದ್ರ ರಸ್ತೆಯೂ ಸೇರಿದಂತೆ ನಾನಾ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ, ರಸ್ತೆಯುದ್ದಕ್ಕೂ ಬೀದಿದೀಪ ಇಲ್ಲದೇ ದಾರಿಹೋಕರು ನಡೆದುಕೊಂಡು ಹೋಗಲು ಅಸುರಕ್ಷಿತ ಸ್ಥಳವಾಗಿ ಪರಿಣಮಿಸಿದೆ.
ಸೆಂಟ್ರಲ್ ಕಾಲೇಜು ಆಟದ ಮೈದಾನ, ಗೃಹವಿಜ್ಞಾನ ಕಾಲೇಜು, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಚೇರಿ ಇದೇ ರಸ್ತೆಯಲ್ಲಿವೆ. ಇಲ್ಲಿರುವ ಕಾಲೇಜುಗಳ ಬಹುತೇಕ ವಿದ್ಯಾರ್ಥಿಗಳು ರಾಮಚಂದ್ರ ರಸ್ತೆಯ ಮೂಲಕವೇ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಕಾಲೇಜು ತಲುಪುತ್ತಾರೆ. ಸಂಜೆ ಆದರೆ, ಕಾಲೇಜು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಭಯಪಡುವಂತಾಗಿದೆ.
ಈ ರಸ್ತೆಯ ಬಂದು ಬದಿಯಲ್ಲಿ ಕಸದ ರಾಶಿ ಬಿದ್ದಿದೆ. ಕಾರ್, ಲಾರಿ, ಆಟೋ, ಟಿಪ್ಪರ್ ಸೇರಿದಂತೆ ಹಲವಾರು ವಾಹನಗಳು ರಸ್ತೆಯ ಒಂದು ಬದಿಯಲ್ಲಿ ನಿಂತಿವೆ. ರಸ್ತೆಯ ಇನ್ನೊಂದು ಬದಿಯಲ್ಲಿ ಮಾತ್ರ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ವಾಹನಗಳು ಒಂದೇ ಬದಿಯಲ್ಲಿ ಸಂಚರಿಸುತ್ತಿವೆ. ಇದರಿಂದ ಕತ್ತಲೆಯಲ್ಲಿ ವಾಹನಗಳು ಸಂಚರಿಸುವುದು ಕಷ್ಟಕರವಾಗಿದೆ.
ಬೆಂಗಳೂರಿನ ಮಲ್ಲೇಶ್ವರಂ, ಗಾಂಧಿನಗರ, ಮೆಜೆಸ್ಟಿಕ್, ಆನಂದ್‌ರಾವ್ ಸರ್ಕಲ್, ಸೇರಿದಂತೆ ಹಲವೆಡೆ ಬೀದಿ ದೀಪದ ಸಮಸ್ಯೆ ಇದೆ. ಕೆಲವೆಡೆ ಬೀದಿ ದೀಪದ ಕಂಬಗಳು ನೆಲಕ್ಕೆ ಒರಗುವಂತಾಗಿದ್ದರೂ, ಬಿಬಿಎಂಪಿ ಎಚ್ಚೆತ್ತುಕೊಳ್ಳದೆ ಸುಮ್ಮನೆ ಕೈ ಕೊಟ್ಟು ಕುಳಿತಿದೆ.
ನಗರದ ಕೆಲವೆಡೆ ಸುಖಾಸುಮ್ಮನೆ ಬೆಳಗಿನ ಹೊತ್ತು ಬೀದಿ ದೀಪಗಳನ್ನು ಉರಿಸಲಾಗುತ್ತಿದೆ. ಕತ್ತಲಾದಾಗ ಅವಶ್ಯವಿರುವ ರಸ್ತೆಗಳಲ್ಲಿ, ಬೀದಿಗಳಲ್ಲಿ ಬೀದಿದೀಪಗಳು ಕಣ್ಮರೆಯಾಗಿವೆ. ಈ ಬಗ್ಗೆ ಸಾರ್ವಜನಿಕರು ಬಿಬಿಎಂಪಿಯ ಸಹಾಯ ಆಪ್ ಮೂಲಕ ದೂರು ನೀಡುತ್ತಿದ್ದಾರೆ. ಆದರೂ ಕೆಲವೊಂದು ಸಮಸ್ಯೆಗಳು ಬಗೆಹರಿಯದೆ ಹಾಗೆಯೇ ಉಳಿದಿವೆ.
ಬೀದಿದೀಪಗಳ ನಿರ್ವಹಣೆ ಯಾವ ಸಂಸ್ಥೆಯ ವ್ಯಾಪ್ತಿಗೆ ಬರುತ್ತದೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಇವೆರಡೂ ಸಂಸ್ಥೆಗಳಲ್ಲಿ ನಗರದಲ್ಲಿರುವ ಬೀದಿದೀಪಗಳ ನಿರ್ವಹಣೆ ಯಾವ ಸಂಸ್ಥೆಯ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ಹಲವು ಜನರಲ್ಲಿ ಗೊಂದಲವಿದೆ.
ಕಳೆದ ಕೆಲವು ತಿಂಗಳ ಹಿಂದೆ ಬೆಸ್ಕಾಂ ಈ ಬಗ್ಗೆ ಟ್ವೀಟ್ ಮಾಡಿ, “ಬೀದಿ ದೀಪಗಳ ನಿರ್ವಹಣೆ ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಬೀದಿದೀಪಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಬಿಬಿಎಂಪಿ ಸಂಪರ್ಕಿಸಲು ಕೋರಿದೆ. ಹೆಚ್ಚಿನ ಸಹಾಯಕ್ಕಾಗಿ ಬಿಬಿಎಂಪಿ ಗ್ರಾಹಕ ಸೇವಾ ಸಂಖ್ಯೆ 1533 ಅಥವಾ 080-22660000/22221188 ಅನ್ನು ಸಂಪರ್ಕಿಸಿ” ಎಂದು ಹೇಳಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ವಾಹನ ಸವಾರ ಕುಮಾರ್, “ಕಳೆದ ಹಲವು ತಿಂಗಳಿನಿಂದ ಈ ರಸ್ತೆಯಲ್ಲಿ ಬೀದಿ ದೀಪ ಹಾಕಿಲ್ಲ. ಯಾಕೆ ಎಂಬ ಬಗ್ಗೆ ಕಾರಣ ತಿಳಿದಿಲ್ಲ. ಆದರೆ, ಹಲವು ತಿಂಗಳಿನಿಂದ ಈ ರಸ್ತೆಗೆ ಬೀದಿ ದೀಪದ ಬೆಳಕು ಬಿದ್ದಿಲ್ಲ. ಕತ್ತಲಿನಲ್ಲಿ ವಾಹನ ಸಂಚರಿಸುವುದು ಕಷ್ಟಕರವಾಗಿದೆ. ಇದರಿಂದ ಅಪಘಾತಗಳು ಉಂಟಾಗಬಹುದು. ಬಿಬಿಎಂಪಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಮಳೆಗಾಲ | ಹೇಳಿಕೆಯಲ್ಲಷ್ಟೇ ಸನ್ನದ್ಧ ಬಿಬಿಎಂಪಿ; ನಗರ ಜೀವನ ಅಸ್ತವ್ಯಸ್ತ
“ಮೆಜೆಸ್ಟಿಕ್‌ಗೆ ತೆರಳಲು ಹಾಗೂ ಬೆಂಗಳೂರು ಕೇಂದ್ರಿಯ ವಿಶ್ವವಿದ್ಯಾಲಯದ ಕಡೆಗೆ ತೆರಳಲು ಹಲವು ಜನ ಈ ರಸ್ತೆ ಬಳಸುತ್ತಾರೆ. ಆದರೆ, ರಾತ್ರಿಯ ವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ಭಯದ ವಾತಾವರಣ ನಿರ್ಮಾಣ ಮಾಡುತ್ತದೆ. ದಾರಿಹೋಕರು ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಕತ್ತಲು ಆವರಿಸಿರುತ್ತದೆ” ಎಂದು ವಿಜಯನಗರ ನಿವಾಸಿ ಶರಣ್ ಈ ದಿನ.ಕಾಮ್‌ಗೆ ಹೇಳಿದರು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ಅಧಿಕಾರಿಯೊಬ್ಬರು, “ಕೂಡಲೇ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುತ್ತೇವೆ” ಎಂದು ತಿಳಿಸಿದರು.