ಪಶು ಸಂಗೋಪನಾ ಇಲಾಖೆಯ ಸಹಯೋಗದೊಂದಿಗೆ ಪಶು ಸಖಿಯರು ಕೆಲಸ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದು ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ ಟಿ ರೋಣಿ ಅವರು ಹೇಳಿದರು.
ಜಿಲ್ಲಾ ಪಶು ಆಸ್ಪತ್ರೆ ಸಭಾಂಗಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ತಾಲೂಕು ಪಂಚಾಯತ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪಶು ಸಖಿಯವರಿಗೆ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಪಶು ಸಖಿ ಎನ್ನುವುದು ಪ್ರಾಣಿಗಳ ಸ್ನೇಹಿತರು ಎಂದರ್ಥ. ಹಸುಗಳು, ಎಮ್ಮೆಗಳು, ಗೂಳಿಗಳು, ಕೋಳಿ ಮತ್ತು ಮೇಕೆಗಳು ಸೇರಿದಂತೆ ಪ್ರಾಣಿಗಳಿಗೆ ನಿತ್ಯದ ವೈದ್ಯಕೀಯ ಅವಶ್ಯಕತೆಗಳನ್ನು ನಿರ್ವಹಿಸಲು ಪಶು ಸಖಿಯರು ಪಶುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಅತಿ ಮುಖ್ಯವಾಗಿದೆ” ಎಂದರು.
“ಪಶು ವೈದ್ಯಕೀಯ ನೆರವು ಕೇಂದ್ರಕ್ಕೆ ಸಂಪರ್ಕಿಸುವ ಮೂಲಕ ಅವರು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ ಮತ್ತು ಗ್ರಾಮೀಣ ಬಡವರ ನಡುವಿನ ಸಂಪರ್ಕದ ಕೊಂಡಿಯಾಗಿ ಕರ್ತವ್ಯ ನಿರ್ವಹಿಸಬೇಕು. ಗ್ರಾಮೀಣ ಭಾಗದ ಜನರಿಗೆ ಪಶು ಸಂಗೋಪನಾ ಇಲಾಖೆ ವತಿಯಿಂದ ದೊರಕುವ ಸೌಲಭ್ಯಗಳ ಮಾಹಿತಿ ನೀಡಬೇಕು. ಪಶುಗಳಿಗೆ ಕಾಣಿಸಿಕೊಳ್ಳುವ ರೋಗಗಳು, ಪ್ರಾಥಮಿಕ ಚಿಕಿತ್ಸೆ, ಪಶುಗಳ ಪೋಷಣೆ ಮತ್ತು ಪೌಷ್ಟಿಕ ಆಹಾರ, ಹೆಚ್ಚುವರಿ ಹಾಲಿನ ಉತ್ಪಾದನೆ ಬಗ್ಗೆ ಮಾಹಿತಿ ನೀಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಆಡಳಿತದಲ್ಲಿ ಪಾರದರ್ಶಕತೆ, ಶಿಸ್ತು, ಕಾರ್ಯ ನಿರ್ವಹಣೆಗೆ ಉಸ್ತುವಾರಿ ಸಚಿವರ ಸೂಚನೆ
ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ ಎಸ್ ಎಸ್ ಪಾಟೀಲ್, ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀನಾಥ, ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ ಬನ್ನಿಗೋಳ ಸೇರಿದಂತೆ ಪಶು ಸಖಿಯರು ಇದ್ದರು.