ಕಾಂಗ್ರೆಸ್ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ ಅವರು ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ಜಾರಿಗೊಳಿಸುವ ನಿಯಮಗಳನ್ನು ಶಿಫಾರಸು ಮಾಡಲು ಕಾನೂನು ಆಯೋಗವು ಕಡ್ಡಾಯಗೊಳಿಸಿರುವ ‘ಒಂದು ರಾಷ್ಟ್ರ ಒಂದು ಚುನಾವಣಾ’ ಸಮಿತಿಯ ಭಾಗವಾಗಲು ನಿರಾಕರಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಈ ಕುರಿತು ಪತ್ರ ಬರೆದಿರುವ ಅಧೀರ್ ರಂಜನ್ ಚೌಧರಿ, ಸಮಿತಿಗೆ ರಾಜ್ಯಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಕೈಬಿಟ್ಟಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
“ಒಂದು ರಾಷ್ಟ್ರ, ಒಂದು ಚುನಾವಣೆ ಸಮಿತಿಯಲ್ಲಿ ಸೇವೆ ಸಲ್ಲಿಸಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಆದರೆ ಬೇಕಾದವರನ್ನು ಸಮಿತಿಗೆ ಸೇರಿಸಿರುವುದು ಕಣ್ಣೊರೆಸುವ ತಂತ್ರವಾಗಿದೆ. ಸಾರ್ವತ್ರಿಕ ಚುನಾವಣೆಗೆ ಕೆಲವು ತಿಂಗಳುಗಳು ಬಾಕಿಯಿರುವ ಮೊದಲು, ಸಾಂವಿಧಾನಿಕವಾಗಿ ಶಂಕಿತ, ಪ್ರಾಯೋಗಿಕವಾಗಿ ಕಾರ್ಯಸಾಧ್ಯವಲ್ಲದ ಮತ್ತು ಸುವ್ಯವಸ್ಥವಾಗಿ ಕಾರ್ಯಗತಗೊಳಿಸಲಾಗದ ಯೋಜನೆಯನ್ನು ರಾಷ್ಟ್ರದ ಮೇಲೆ ಹೇರುವ ಹಠಾತ್ ಪ್ರಯತ್ನವು ಸರ್ಕಾರದ ಗುಪ್ತ ಉದ್ದೇಶಗಳ ಬಗ್ಗೆ ಗಂಭೀರವಾದ ಗೊಂದಲವನ್ನು ಉಂಟುಮಾಡುತ್ತದೆ. ಅದಲ್ಲದೆ ಸಮಿತಿಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕನನ್ನು ಸೇರಿಸದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಮಾನವಾಗಿದೆ. ಈ ಕಾರಣಗಳಿಂದ, ನಿಮ್ಮ ಆಹ್ವಾನವನ್ನು ನಿರಾಕರಿಸುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆಯಿಲ್ಲ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಒಂದು ರಾಷ್ಟ್ರ ಒಂದು ಚುನಾವಣೆ’ ಕಾರ್ಯಸಾಧ್ಯತೆ ಕುರಿತು ಪರಿಶೀಲನೆ ಮಾಡಲು ಸಮಿತಿ ರಚನೆ ಮಾಡಿದ ಕುರಿತು ಈಗಾಗಲೇ ಪರ, ವಿರೋಧ ಚರ್ಚೆಗಳು ಆರಂಭವಾಗಿವೆ. ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಒಂದಾಗಿರುವ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದಿಂದ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ.

1967ರ ತನಕ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲಾಗುತ್ತಿತ್ತು. ಇದೇ ಮಾದರಿಯಲ್ಲಿ ಈಗ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಲು ಸಾಧ್ಯವೇ? ಎಂಬುದನ್ನು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ಪರಿಶೀಲಿಸಿ ಶಿಫಾರಸುಗಳನ್ನು ಮಾಡಲಿದೆ.
ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಕಾನೂನು ಸಚಿವಾಲಯವು ದೇಶದಲ್ಲಿ ಏಕಕಾಲಿಕ ಚುನಾವಣೆಯ ಪ್ರಸ್ತಾಪವನ್ನು ಅಧ್ಯಯನ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಸುದ್ದಿ ಓದಿದ್ದೀರಾ? ಲಖನೌ | ಕೇಂದ್ರ ಸಚಿವ ಕೌಶಲ್ ಕಿಶೋರ್ ಮನೆಯಲ್ಲಿ ಗುಂಡು ಹಾರಿಸಿ ವ್ಯಕ್ತಿಯ ಹತ್ಯೆ
ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, 15ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ, ಮಾಜಿ ಮುಖ್ಯ ವಿಜಿಲೆನ್ಸ್ ಆಯುಕ್ತ ಸಂಜಯ್ ಕೊಠಾರಿ ಅವರು ಸದಸ್ಯರಾಗಿರುತ್ತಾರೆ.
ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22ರ ತನಕ ಸಂಸತ್ನ ವಿಶೇಷ ಅಧಿವೇಶನ ಕರೆಯಲು ತೀರ್ಮಾನಿಸಿದೆ. ಈ ಕುರಿತು ಪ್ರಕಟಿಸಿದ ಮರು ದಿನವೇ ‘ಒಂದು ರಾಷ್ಟ್ರ ಒಂದು ಚುನಾವಣೆ’ ಕಾರ್ಯಸಾಧ್ಯತೆ ಕುರಿತು ಚರ್ಚಿಸಲು ಸಮಿತಿ ರಚನೆ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವಿಶೇಷ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪ ಇರುವುದಿಲ್ಲ. ಯಾವುದೇ ಖಾಸಗಿ ಮಸೂದೆಗಳ ಮಂಡನೆ ಇಲ್ಲ ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಕಾರ್ಯಸೂಚಿ ಏನೆಂದು ಇನ್ನೂ ಬಹಿರಂಗಪಡಿಸಿಲ್ಲ. 2014ರಿಂದಲೂ ಪ್ರಧಾನಿ ನರೇಂದ್ರ ಮೋದಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಬಗ್ಗೆ ಮಾತನಾಡುತ್ತಿದ್ದಾರೆ.